ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಅಂಚನಹಳ್ಳಿಯಲ್ಲಿ ನಡೆದ ಏಳೂರಮ್ಮನ ಉತ್ಸವ ಹಾಗೂ ರಂಗದ ಹಬ್ಬದಲ್ಲಿ ಮಾತನಾಡಿ, ಅತ್ಯಂತ ಕೆಟ್ಟ ಸನ್ನಿವೇಶದಲ್ಲಿ ನಾನು ಕ್ಷೇತ್ರದ ಶಾಸಕನಾಗಿದ್ದೇನೆ. ರಾಜ್ಯ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅತಿವೃಷ್ಟಿಯಿಂದ ಕಳೆದ ನಾಲ್ಕು ವರ್ಷಗಳ ಹಿಂದೆ ತಾಲೂಕಿನ ಕೆರೆ- ಕಟ್ಟೆಗಳು ಒಡೆದು ಹೋಗಿವೆ. ಒಡೆದು ಹೋಗಿರುವ ಕೆರೆ- ಕಟ್ಟೆಗಳಲ್ಲಿ ಮಳೆ ಬಂದರೂ ನೀರು ಸಂಗ್ರಹವಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂದು ಒಂದು ಕೆರೆ ಕಟ್ಟಬೇಕಾದರೆ ಕನಿಷ್ಠ 70 ರಿಂದ 80 ಕೋಟಿ ರು. ಹಣಬೇಕು. ನಮ್ಮ ಸರ್ಕಾರ ಹೊಸ ಕೆರೆಗಳನ್ನು ಕಟ್ಟುವುದು ಬೇಡ. ಕನಿಷ್ಠ ಒಡೆದು ಹೋಗಿರುವ ಕೆರೆಗಳನ್ನಾದರೂ ಪುನರ್ ನಿರ್ಮಿಸಿ ರೈತರ ನೆರವಿಗೆ ನಿಲ್ಲಬೇಕು ಎಂದು ಆಗ್ರಹಿಸಿದರು.ತಾಲೂಕಿನಲ್ಲಿ ಒಡೆದು ಹೋಗಿರುವ ಕೆರೆಗಳನ್ನು ಚಿತ್ರ ಸಮೇತ ಸಿಎಂಗೆ ತೋರಿಸಿ ಅನುದಾನ ಕೇಳಿದ್ದೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಅಗತ್ಯ ಅನುದಾನದ ಭರವಸೆ ನೀಡಿದ್ದರು. ಆದರೂ ಇದುವರೆಗೆ ನೀಡಿದ ಭರವಸೆ ಈಡೇರಿಲ್ಲ ಎಂದರು.
ನಾನೆಂದೂ ಪಕ್ಷ ರಾಜಕಾರಣ ಮಾಡುವುದಿಲ್ಲ. ತಾಲೂಕಿನ ಅಭಿವೃದ್ಧಿಯೇ ನನ್ನ ಮೂಲ ಗುರಿ. ಮಠ ಮಾನ್ಯಗಳ ಗುರುಗಳು ನನಗೆ ಅಗತ್ಯ ಮಾರ್ಗದರ್ಶನ ನೀಡಬೇಕು. ಕ್ಷೇತ್ರದ ಅಭಿವೃದ್ಧಿಗೆ ದೈವಕೃಪೆ ಇರಲಿ ಎಂದು ಹೇಳಿದರು.
ಬೇಬಿ ಬೆಟ್ಟ ಶ್ರೀ ರಾಮದೇವರ ಮಠದ ಪೀಠಾಧ್ಯಕ್ಷ ಶಿವ ಬಸವ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಗ್ರಾಮ ಮುಖಂಡರಾದ ಅಂಚನಹಳ್ಳಿ ಸುಬ್ಬಣ್ಣ, ಯಜಮಾನ್ ಧರ್ಮಲಿಂಗಪ್ಪ, ಗ್ರಾಪಂ ಸದಸ್ಯ ಶಿವಲಿಂಗು, ದುರ್ಗಿರಾಜು, ಗ್ಯಾಸ್ ಕುಮಾರ್, ಪ್ರಸನ್ನ, ಸದಾಶಿವಪ್ಪ ಸೇರಿದಂತೆ ಹಲವರಿದ್ದರು.