ಅಂಬೇಡ್ಕರ್ ಚಿಂತನೆಗಳ ಪ್ರಸ್ತುತತೆ: ರಾಜ್ಯಮಟ್ಟದ ಕಾರ್ಯಾಗಾರ

KannadaprabhaNewsNetwork |  
Published : May 24, 2025, 12:18 AM IST
22ಅಂಬೇಡ್ಕರ್ | Kannada Prabha

ಸಾರಾಂಶ

ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಬುಧವಾರ ಕಾಲೇಜಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳ ಪ್ರಸ್ತುತತೆ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ಅಂಬೇಡ್ಕರ್ ಚಿಂತನೆಗಳು ಭಾರತೀಯ ಸಮಾಜಕ್ಕೆ ಪ್ರಸ್ತುತ ಅತ್ಯಂತ ಮುಖ್ಯವಾದ ಅಭಿವೃದ್ಧಿಯ ಮಾರ್ಗಸೂಚಿಗಳು. ಇದನ್ನು ಯುವ ಜನತೆ ಹೆಚ್ಚಾಗಿ ಅಧ್ಯಯನ ನಡೆಸುವ ಮೂಲಕ ತಿಳಿದುಕೊಳ್ಳಬೇಕಾದ ಅಗತ್ಯ ಇದೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಸೋಮ್ಣಣ ಎಂ. ಹೇಳಿದ್ದಾರೆ.ಮಂಗಳೂರು ವಿಶ್ವವಿದ್ಯಾನಿಲಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ, ಡಾ.ಬಿ.ಆರ್ ಅಂಬೇಡ್ಕರ್ ಸಂಶೋಧನಾ ಸಂಸ್ಥೆ ಬೆಂಗಳೂರು ಹಾಗೂ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಬುಧವಾರ ಕಾಲೇಜಿನಲ್ಲಿ ಆಯೋಜಿಸಲಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳ ಪ್ರಸ್ತುತತೆ ಕುರಿತ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದಿಕ್ಸೂಚಿ ಭಾಷಣ ಮಾಡಿದ ಬಾರ್ಕೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡಾ. ಪ್ರಸಾದ್ ರಾವ್ ಎಂ., ಅಂಬೇಡ್ಕರ್ ಚಿಂತನೆಗಳು ಭಾರತದ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳಿಗೆ ನೀಡಿದ ಪರಿಹಾರ ಉಪಯೋಗಗಳಾಗಿವೆ. ಅವರು ಬದುಕಿದ ಕಾಲ, ಸಾಮಾಜಿಕ ಸ್ಥಿತಿ ಮತ್ತು ನಡೆಸಿದ ಸಂಘರ್ಷಗಳನ್ನು ತಿಳಿದುಕೊಳ್ಳುವುದು ಅತೀ ಅವಶ್ಯಕವಾಗಿದೆ. ನಮ್ಮ ಸಂವಿಧಾನ ಕೇವಲ ನಿಯಮಗಳ ಗ್ರಂಥ ಅಲ್ಲ. ಅದರಲ್ಲಿ ವ್ಯಕ್ತವಾದ ಸಮಾನತೆ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಹೋದರತೆ ಮತ್ತು ಜಾತ್ಯತೀತತೆ ಎಲ್ಲವೂ ಜೀವನದ ವೌಲ್ಯಗಳಾಗಿವೆ ಎಂದರು.

ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ವಿಶ್ವನಾಥ ಮಾತನಾಡಿ, ಅಂಬೇಡ್ಕರ್ ಕೇಲವ ದಮನಿತ ಸಮುದಾಯಕ್ಕೆ ಮಾತ್ರ ಸೀಮಿತ ವಾಗಿಲ್ಲ. ಅವರು ಭಾರತದ ಸಮಸ್ತ ಜನವರ್ಗಗಳ ಕುರಿತಾಗಿ ಚಿಂತಿಸಿದ ಮತ್ತು ಹೋರಾಡಿದ ಮಹಾನ್ ನಾಯಕ. ನಮ್ಮ ಕೇಂದ್ರದಿಂದ ನಡೆಸಲಾಗುವ ಈ ಕಾರ್ಯಾಗಾರದ ಮೂಲಕ ಯುವಜನತೆಗೆ ಅಂಬೇಡ್ಕರ್ ಅವರನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ.ಗಾಂವ್ಕರ ಮಾತನಾಡಿ, ಭಾರತ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಅಪಾರ ಕೊಡುಗೆಗಳನ್ನು ನೀಡಿದ ಡಾ.ಅಂಬೇಡ್ಕರ್ ಅವರನ್ನೊಳಗೊಂಡಂತೆ ಎಲ್ಲ ರಾಷ್ಟ್ರ ನಾಯಕರನ್ನು ಸ್ಮರಿಸುವ ಮತ್ತು ಗೌರವ ಕೊಡುವ ಮನಸ್ಥಿತಿಯನ್ನು ಇಂದಿನ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಹೇಳಿದರು.ಉಡುಪಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ ಎಂ., ಮಂಗಳೂರು ವಿವಿ ಎಸ್‌ಇಸಿಯ ಉಪ ನಿರ್ದೇಶಕ ಡಾ.ರಾಮಕೃಷ್ಣ, ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ರಘು ನಾಯ್ಕ, ಶೈಕ್ಷಣಿಕ ಸಲಹೆಗಾರ ಡಾ.ಶ್ರೀಧರ್ ಭಟ್, ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಡಾ.ಮೇವಿ ಮಿರಾಂದ, ಗ್ರಂಥ ಪಾಲಕ ಕೃಷ್ಣ ಸಾಸ್ತಾನ ಮೊದಲಾದವರು ಉಪಸ್ಥಿತರಿದ್ದರು.ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಸಂದೇಶ ಎಂ.ವಿ. ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ ಸ್ವಾಗತಿಸಿದರು. ಉಪನ್ಯಾಸಕ ಶಿವಯ್ಯ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ