ಕನ್ನಡಪ್ರಭ ವಾರ್ತೆ ಬಾಗಲಕೋಟೆ ಜಿಲ್ಲೆಯಲ್ಲಿ ಸಾಕಷ್ಟು ವಿಶಿಷ್ಟ ಪ್ರತಿಭೆಗಳಿವೆ. ಪ್ರತಿಭೆಗಳ ಅನಾವರಣಕ್ಕೆ ಯುವಜನೋತ್ಸವದಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಶಾಸಕ ಎಚ್. ವೈ.ಮೇಟಿ ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಯುವ ಉತ್ಸವ ಎಂಬುದು ಯುವಕರು ಹುರುಪು ಹುಮ್ಮಸ್ಸಿನಿಂದ ಕುಣಿದು ಕುಪ್ಪಳಿಸುವ ಕಾರ್ಯಕ್ರಮವಾಗಿದೆ. ಅವರಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಈ ವೇದಿಕೆಯಲ್ಲಿ ಉತ್ತಮವಾಗಿದೆ. ನಮ್ಮ ದೇಶ ಸಾಂಸ್ಕೃತಿಕ ಪರಂಪರೆ ಹೊಂದಿದ್ದು, ಕಲೆ, ಸಾಹಿತ್ಯ, ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು. ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಅದ್ಬುತ ಭಾಷಣದ ಮೂಲಕ ದೇಶದ ಪರಂಪರೆ ಸಾರಿದರು ಎಂದರು.
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಸುಷ್ಮಾ ಗವಳಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಸೇರಿದಂತೆ ಇತರರು ಇದ್ದರು. ಶಾರದಾ ಹೊಸಮನಿ ಪ್ರಾರ್ಥನೆ ಗೀತೆ ಹಾಡಿದರು. ಕ್ರೀಡಾ ಇಲಾಖೆಯ ಅಧೀಕ್ಷಕ ರಂಗನಾಥ ಕಾವಲಗೊಂಡ ವಂದಿಸಿದರು. ಯುವ ಜನೋತ್ಸವದಲ್ಲಿ ಜಾನಪದ ನೃತ್ಯ, ಜನಪದ ಗೀತೆ, ಕಥೆ ಬರೆಯುವದು, ಪೋಸ್ಟರ ಮೇಕಿಂಗ್, ಘೋಷಣೆ, ಛಾಯಾಚಿತ್ರ ಸ್ಪರ್ಧೆಗಳನ್ನು ನಡೆದವು.