ಕನ್ನಡಪ್ರಭ ವಾರ್ತೆ ತುಮಕೂರು
ಗ್ರಾಮದ ಪ್ರಧಾನರಾದ ಅಶೋಕ್ ಕುಮಾರ್, ಮಹಾನಗರ ಪಾಲಿಕೆಯ 28ನೇ ವಾರ್ಡ್ ನ ಮಾಜಿ ಸದಸ್ಯ ಧರಣೇಂದ್ರ ಕುಮಾರ್ ಸೇರಿದಂತೆ ಈ ಭಾಗದ ಗ್ರಾಮಸ್ಥರ ಸಮ್ಮುಖದಲ್ಲಿ ಶಾಸಕ ಜ್ಯೋತಿ ಗಣೇಶ್ ಗಂಗಾಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಜ್ಯೋತಿ ಗಣೇಶ್ , ಮರಳೂರು ಅಮಾನಿಕೆರೆ ಕಳೆದ 25- 30 ವರ್ಷಗಳಲ್ಲಿ ಇದು 3ನೇ ಬಾರಿಗೆ ಭರ್ತಿಯಾಗಿದೆ. ಕಳೆದ ವರ್ಷವೂ ಸುರಿದ ಭಾರೀ ಮಳೆಯಿಂದಾಗಿ ಕೆರೆ ತುಂಬಿತ್ತು. ಆ ಸಂದರ್ಭದಲ್ಲೂ ಸಹ ಕೆರೆಗೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಾಗಿತ್ತು. ಅದೇ ರೀತಿ ಇಂದು ಸಹ ಗ್ರಾಮಸ್ಥರ ಸಮ್ಮುಖದಲ್ಲಿ ಕೆರೆಗೆ ಬಾಗಿನ ಅರ್ಪಿಸಲಾಗಿದೆ ಎಂದರು.
ಮರಳೂರು ಅಮಾನಿಕೆರೆ ತುಂಬಿರುವುದು ಗಂಗಸಂದ್ರ, ಮರಳೂರು, ಕುಮ್ಮಂಜಿಪಾಳ್ಯ ಸೇರಿದಂತೆ ಈ ಭಾಗದ ಹಳ್ಳಿಗಳ ರೈತರಿಗೆ ತುಂಬಾ ಅನುಕೂಲವಾಗಲಿದೆ. ಕೆರೆ ಭರ್ತಿಯಾಗಿರುವುದರಿಂದ ಅಂತರ್ಜಲವೂ ವೃದ್ಧಿಯಾಗಿ ಕೊಳವೆ ಬಾವಿಗಳಲ್ಲಿ ನೀರು ಬರುತ್ತದೆ. ಹಾಗಾಗಿ ಈ ಭಾಗದ ರೈತರು ಸಹ ಸಂತಸಗೊಂಡಿದ್ದಾರೆ ಎಂದರು.ಮರಳೂರು ಅಮಾನಿಕೆರೆಯನ್ನು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಮುಂದಿನ ದಿನಗಳಲ್ಲಿ ಬಳಕೆ ಮಾಡಿಕೊಳ್ಳಲಾಗುವುದು. ಹಾಗಾಗಿ ಕೆರೆಯನ್ನು ಸಂಪೂರ್ಣವಾಗಿ ಅಚ್ಚುಕಟ್ಟುಗೊಳಿಸಿ ಹೇಮಾವತಿ ನೀರನ್ನು ಹರಿಸಿ, ಕುಡಿಯುವ ನೀರು ಪೂರೈಕೆಗೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬುಗುಡನಹಳ್ಳಿ ಕೆರೆಗೆ ನೀರು ಬರುವುದು ನಿಂತು ಹೋದರೆ ಇಡೀ ತುಮಕೂರು ಕೆರೆಗೆ ನೀರು ನಿಂತು ಹೋಗುತ್ತದೆ. ಮುಂಬರುವ ದಿನಗಳಲ್ಲಿ ಮರಳೂರು ಕೆರೆಗೆ ಹೇಮಾವತಿ ನೀರು ತುಂಬಿಸಿ ನಗರದ ಜನತೆಗೆ ನೀರು ಪೂರೈಸುವ ಕೆಲಸವನ್ನು ಮಾಡಲಾಗುವುದು ಎಂದರು.
ಮಳೆಯಿಂದ ಮರಳೂರು ಕೆರೆ ತುಂಬುತ್ತಿರುವುದರಿಂದ ಕೆರೆಯ ಸ್ವಚ್ಛತೆ ಕಾಪಾಡಿ ತುಮಕೂರು ನಗರಕ್ಕೆ ನೀರು ಒದಗಿಸುವ ಕಾರ್ಯಕ್ಕೆ ಮುಂದಾಗಲಾಗುತ್ತಿದೆ. ಕೆರೆಯ ಏರಿ ಮೇಲೆ ಕುಣಿಗಲ್ ರಸ್ತೆ ಹೋದು ಹೋಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತಡೆಗೋಡೆ ನಿರ್ಮಿಸಬೇಕು. ಕೆರೆಯ ಕೋಡಿ ಭಾಗದಲ್ಲಿ ಕಲ್ಯಾಣಿ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು. ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಮೂಡ್ಲಗಿರಿಯಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಪ್ಪೇಸ್ವಾಮಿ, ಸಂತೋಷ್, ಗ್ರಾಮಸ್ಥರಾದ ಕೃಷ್ಣಮೂರ್ತಿ, ಚಿಕ್ಕಣ್ಣಯ್ಯ, ರಾಮಣ್ಣ, ರವಿಗೌಡ, ಮರಳೂರು ನಾಗರಾಜು, ಕೃಷ್ಣಪ್ಪ, ಚೇರ್‌ಮನೆ ಭೀಮಣ್ಣ, ಪ್ರಧಾನ್ ಅಶೋಕ್ ಕುಮಾರ್, ಮರಳೂರು ರಾಜು, ಕುಮಾರ್, ಸುರೇಶ್, ರವೀಶಯ್ಯ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಪಾಲ್ಗೊಂಡಿದ್ದರು.