ಮದ್ದೂರು ಪಟ್ಟಣದ ಪ್ರವಾಸಿ ಮಂದಿರ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ಶ್ರೀಮದ್ದೂರಮ್ಮನ ಜಾತ್ರೆ ಮತ್ತು ಶ್ರೀನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ಉತ್ಸವವನ್ನು ಜನತೆ ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಉದ್ದೇಶದಿಂದ 25 ಲಕ್ಷ ರು. ವೆಚ್ಚದಲ್ಲಿ ವಿಶೇಷ ದೀಪಾಲಂಕಾರ ಚಾಲನೆ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಮದ್ದೂರು ಉತ್ಸವದ ಅಂಗವಾಗಿ ಪಟ್ಟಣಾದ್ಯಂತ ವಿದ್ಯುತ್ ದೀಪಾಲಂಕಾರ ವ್ಯವಸ್ಥೆಗೆ ಶಾಸಕ ಕೆ.ಎಂ.ಉದಯ್ ಶನಿವಾರ ಸಂಜೆ ಚಾಲನೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ಶ್ರೀಮದ್ದೂರಮ್ಮನ ಜಾತ್ರೆ ಮತ್ತು ಶ್ರೀನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ಉತ್ಸವವನ್ನು ಜನತೆ ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಉದ್ದೇಶದಿಂದ ಸಾಂಸ್ಕೃತಿಕ ನಗರಿ ಮೈಸೂರು ಮಾದರಿಯಲ್ಲಿ 25 ಲಕ್ಷ ರು. ವೆಚ್ಚದಲ್ಲಿ ವಿಶೇಷ ದೀಪಾಲಂಕಾರ ಚಾಲನೆ ನೀಡಲಾಗಿದೆ ಎಂದರು.
ಕಳೆದ ಬಾರಿ ಉತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಬೇಕೆಂಬ ಉದ್ದೇಶವಿತ್ತು. ಸಮಯದ ಅಭಾವದಿಂದ ಆಚರಣೆ ಸಾಧ್ಯವಾಗಿಲ್ಲ. ಈ ಬಾರಿ ಉತ್ಸವವನ್ನು ದಸರಾ ಮಾದರಿಯಾಗಿ ಜನತೆಗೆ ಅನುಭವ ನೀಡಬೇಕೆಂಬ ಹಂಬಲದಿಂದ ದೀಪಾಲಂಕಾರವನ್ನು ಎಂಟು ದಿನಗಳ ಕಾಲ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ್, ನಗರಸಭಾ ಆಯುಕ್ತೆ ರಾಧಿಕಾ ಸೋಮಶೇಖರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚೆಲುವರಾಜು, ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಮಮತಾ ಶಂಕರೇಗೌಡ, ಗ್ರೇಡ್ 2ತಹಸೀಲ್ದಾರ್ ಸೋಮಶೇಖರ್, ಪುರಸಭೆ ಉಪಾಧ್ಯಕ್ಷ ಟಿ.ಆರ್. ಪ್ರಸನ್ನ ಕುಮಾರ್, ಮಾಜಿ ಸದಸ್ಯ ಸಿದ್ದರಾಜು, ಮಾಜಿ ಯೋಧ ಸಿಪಾಯಿ ಶ್ರೀನಿವಾಸ್ ಮತ್ತಿತರರು ಇದ್ದರು.
ಇಂದು ಮಹಾಗಣಪತಿ ದೇವಾಲಯದ ಪುನರ್ ಪ್ರತಿಷ್ಠಾಪನೆ
ಕನ್ನಡ ಪ್ರಭ ವಾರ್ತೆ ಮಳವಳ್ಳಿತಾಲೂಕಿನ ಅಮೃತೇಶ್ವರನಹಳ್ಳಿ ಕಾಲೋನಿಯಲ್ಲಿ ಮೇ 4 ರಂದು ಶ್ರೀಮಹಾಗಣಪತಿ ಸೇವಾ ಸಮಿತಿ ಜೀರ್ಣೋದ್ಧಾರಗೊಳಿಸಿರುವ ಮಹಾಗಣಪತಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ವಿಮಾನ ಗೋಪುರ ಉದ್ಘಾಟನೆ ನಡೆಯಲಿದೆ.
ಬೆಳಗಿನ ಜಾವ 4.48ಕ್ಕೆ ತೃತೀಯ ತಿಥಿ, ಅನುದಾಧ ನಕ್ಷತ್ರದ ಬ್ರಾಹ್ಮೀ ಮುಹೂರ್ತದಲ್ಲಿ ಶಿಖರ ಕಳಸ ಪ್ರತಿಷ್ಠಾಪನೆ, ಕುಂಭಾಭಿಷೇಕ, ನೇತ್ರೋನ್ಮಿಲನ, ನವಗ್ರಹ ಹೋಮ, ವಾಸ್ತು ಹೋಮ, ಪ್ರಧಾನ ಹೋಮ, ಪುರ್ಣಾಹುತಿ, ಮಹಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮವು ಅಂಚೆದೊಡ್ಡಿಯ ಗುರುಮಠದ ಎಸ್.ನಾಗಭೂಷಣಾರಾದ್ಯ ಅವರ ನೇತೃತ್ವದಲ್ಲಿ ನಡೆಯಲಿದೆ. ನಂತರ ಬೆಳಗ್ಗೆ 10ಗಂಟೆಗೆ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗದ ನಂತರ ಅನ್ನಸಂತರ್ಪಣೆ ಜರುಗಲಿದೆ. ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಡಿ.ಹಲಸಹಳ್ಳಿ ಗವಿಮಠದ ಷಡಕ್ಷರಿ ಸ್ವಾಮೀಜಿ ವಹಿಸಲಿದ್ದಾರೆ. ದೇವಾಲಯವನ್ನು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.ವಿಶೇಷ ಆಹ್ವಾನಿತರಾಗಿ ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ಕೆ.ಅನ್ನದಾನಿ, ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ, ಬಿ.ಎಂ.ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ಎಂ.ರಾಮಕೃಷ್ಣ, ಜೆಡಿಎಸ್ ಮುಖಂಡ ಎಂ.ಪಿ.ಮಧು, ಕೆಎಂಎಫ್ ಮಾಜಿ ನಿರ್ದೇಶಕ ವಿ.ಎಂ.ವಿಶ್ವನಾಥ್, ಜಿಪಂ ಮಾಜಿ ಸದಸ್ಯ ಬಿ.ರವಿ ಕಂಸಾಗರ, ಪುರಸಭೆ ಮಾಜಿ ಉಪಾಧ್ಯಕ್ಷ ಟಿ.ನಂದಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಮಹಾಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.