ಹೂವಿನಹಡಗಲಿ: ತಾಲೂಕಿನ ನವಲಿ, ನಂದಿಹಳ್ಳಿ, ಹೊಳಗುಂದಿ, ಸೋಗಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ವಿವಿಧ ಮೂಲಭೂತ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ₹4 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳಿಗೆ ಶಾಸಕ ಕೃಷ್ಣನಾಯ್ಕ ಚಾಲನೆ ನೀಡಿದರು.
ಈ ಹಿಂದೆ ವಿಧಾನಸಭಾ ವ್ಯಾಪ್ತಿಯ ಪ್ರತಿ ಹಳ್ಳಿಗಳಿಗೂ ಗ್ರಾಮ ಪ್ರವಾಸ ಮಾಡುವ ವೇಳೆ ಜನರ ಬೇಡಿಕೆ ಪಟ್ಟಿ ಮಾಡಿಕೊಂಡು ಆದ್ಯತೆಯ ಮೇರಿಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಉಳಿದಂತೆ ಇನ್ನು ಉಳಿದ ಬೇಡಿಕೆಗಳನ್ನು ಮುಂದಿನ ವರ್ಷದಲ್ಲಿ ಅನುದಾನ ತಂದು ಅಭಿವೃದ್ಧಿ ಮಾಡುತ್ತೇನೆಂದು ಭರವಸೆ ನೀಡಿದರು.
ಮಾಗಳ ರಸ್ತೆಯಿಂದ ಹೊಸ ಅಲ್ಲಿಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ, ಮಳೆ ಬಂದಾಗ ಕರೆಂಟ್ ಕೈ ಕೊಡುತ್ತಿರುವ ಹಿನ್ನೆಲೆ ಜನರಿಗೆ ಬೆಳಕಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪ್ರತಿ ಗ್ರಾಮಕ್ಕೂ ಬೇಡಿಕೆಗೆ ತಕ್ಕಂತೆ ಸೋಲಾರ ಬೀದಿ ದೀಪಗಳ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಅಲ್ಲಿಪುರಕ್ಕೆ 56 ಸೋಲಾರ್ ದೀಪ ಮತ್ತು ಹೈಮಾಸ್ಕ್ ದೀಪ, ರಾಜವಾಳ ಗ್ರಾಮಕ್ಕೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ನದಿ ವರೆಗೂ ರಸ್ತೆ ಅಭಿವೃದ್ಧಿ, 25 ಸೋಲಾರ್ ದೀಪ, ಹೊನ್ನೂರು ಗ್ರಾಮದ ಮುಖ್ಯ ರಸ್ತೆ ಅಭಿವೃದ್ಧಿ, ತೇರು ರಸ್ತೆ ಅಭಿವೃದ್ಧಿ, 72 ಸೋಲಾರ್ ದೀಪಗಳು, ಶಿಭಾರ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ ಎಂದರು.ನವಲಿ ಗ್ರಾಮಕ್ಕೆ 2 ಭಾಗದಲ್ಲಿ ಶುದ್ಧ ಕುಡಿವ ನೀರಿನ ಘಟಕಗಳು, ಗ್ರಾಮ ದೇವತೆ ದೇವಸ್ಥಾನ ಅಭಿವೃದ್ಧಿಗೆ ₹10 ಲಕ್ಷ, ಕೊಟ್ಟೂರೇಶ್ವರ ದೇಗುಲ ಅಭಿವೃದ್ಧಿಗೆ ₹10 ಲಕ್ಷ, ಹೈ ಮಾಸ್ಕ್ ಅಳವಡಿಕೆ, 44 ಕಡೆಗಳಲ್ಲಿ ಸೋಲಾರ್ ದೀಪ ಅಳವಡಿಕೆ, ಕಾಗನೂರಿನಲ್ಲಿ 20 ಸೋಲಾರ್ ಸೇರಿದಂತೆ ವಿವಿಧ ಕಡೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ ಎಂದರು.