ವಿದ್ಯಾರ್ಥಿನಿಲಯಗಳ ಅಭಿವೃದ್ಧಿಗೆ ಶಾಸಕ ಮಂಜು ಚಾಲನೆ

KannadaprabhaNewsNetwork |  
Published : Mar 26, 2025, 01:35 AM IST
25ಎಚ್ಎಸ್ಎನ್‌5 : ಅರಕಲಗೂಡು ತಾಲೂಕು ದೊಡ್ಡಮಗ್ಗೆ ಬಿಸಿಎಂ ವಿದ್ಯಾರ್ಥಿ ನಿಲಯ ಆಧುನೀಕರಣ ಕಾಮಗಾರಿಗೆ ಶಾಸಕ ಚಾಲನೆ ನೀಡಿದ ಬಳಿಕ ಅಭಿವೃದ್ಧಿ ಕುರಿತು ಚರ್ಚಿಸಿದರು. | Kannada Prabha

ಸಾರಾಂಶ

ಅರಕಲಗೂಡು ತಾಲೂಕಿನ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ದುರಸ್ತಿ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು 1.30 ಕೋಟಿ ರು. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಎ.ಮಂಜು ತಿಳಿಸಿದರು. ಕೇವಲ ಇಲಾಖೆ ಅಧಿಕಾರಿಗಳು ಕಾಮಗಾರಿ ವೀಕ್ಷಣೆ ಮಾಡದೇ ಸ್ಥಳೀಯ ಗ್ರಾಪಂ ಆಡಳಿತ ಮತ್ತು ಆಯಾ ಊರುಗಳ ಮುಖಂಡರು ಕೂಡ ಕೆಲಸ ವೀಕ್ಷಣೆ ಮಾಡಿ ಗುಣಮಟ್ಟದಿಂದ ನಿರ್ವಹಣೆ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕೆಂದು ಅವರು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ದುರಸ್ತಿ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು 1.30 ಕೋಟಿ ರು. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಎ.ಮಂಜು ತಿಳಿಸಿದರು.

ತಾಲೂಕಿನ ಗಂಗೂರು,ದೊಡ್ಡಮಗ್ಗೆ ಹಾಗೂ ಬೈಚನಹಳ್ಳಿ ಗ್ರಾಮಗಳ ಬಿಸಿಎಂ ವಿದ್ಯಾರ್ಥಿ ನಿಲಯಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳು ವಿದ್ಯಾರ್ಥಿ ನಿಲಯಗಳಲ್ಲಿದ್ದು, ಹೆಚ್ಚುವರಿ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ವಿದ್ಯಾರ್ಥಿ ನಿಲಯಗಳಿಗೆ ದಾಖಲಾತಿ ಮಾಡಿ ಉಚಿತವಾಗಿ ಸಿಗುವ ಸೌಕರ್ಯಗಳನ್ನು ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ಮಾಡಿದರು.

ತಾಲೂಕಿನ ಬೈಚನಹಳ್ಳಿ ಗ್ರಾಮದ ಬಿಸಿಎಂ ವಿದ್ಯಾರ್ಥಿ ನಿಲಯಕ್ಕೆ 20.65 ಲಕ್ಷ ರು, ದೊಡ್ಡಮಗ್ಗೆ ಗ್ರಾಮದ ನಿಲಯಕ್ಕೆ 19.90 ಲಕ್ಷ ರು. ಹಾಗೂ ಗಂಗೂರು ಗ್ರಾಮದ ವಿದ್ಯಾರ್ಥಿ ನಿಲಯದ ಊಟದ ಹಾಲ್ ನಿರ್ಮಾಣ 29.30 ಲಕ್ಷ ರು. ವೆಚ್ಚದಲ್ಲಿ ನೂತನ ಕಾಮಗಾರಿಗಳು ನಡೆಯಲಿವೆ. ಬಡಮಕ್ಕಳೇ ಇರುವುದರಿಂದ ಅತ್ಯಂತ ಗುಣಮಟ್ಟದಿಂದ ಕೆಲಸಗಳು ನಡೆಯಬೇಕು. ಕೇವಲ ಇಲಾಖೆ ಅಧಿಕಾರಿಗಳು ಕಾಮಗಾರಿ ವೀಕ್ಷಣೆ ಮಾಡದೇ ಸ್ಥಳೀಯ ಗ್ರಾಪಂ ಆಡಳಿತ ಮತ್ತು ಆಯಾ ಊರುಗಳ ಮುಖಂಡರು ಕೂಡ ಕೆಲಸ ವೀಕ್ಷಣೆ ಮಾಡಿ ಗುಣಮಟ್ಟದಿಂದ ನಿರ್ವಹಣೆ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕೆಂದು ಅವರು ಮನವಿ ಮಾಡಿದರು.ಬಗರ್‌ಹುಕುಂ ಸಾಗುವಳಿ ಚೀಟಿಗೆ ಹಣ ಕೊಡಬೇಡಿ:

ಸರ್ಕಾರ ಅರ್ಜಿ ಸಲ್ಲಿಸಿ,ಅನುಭವದಲ್ಲಿರುವ ಎಲ್ಲರಿಗೂ ಕೂಡ ನಿಯಮಾನುಸಾರ ಬಗರ್ ಹುಕುಂ ಸಮಿತಿ ವತಿಯಿಂದ ಫಲಾನುಭವಿಗಳಿಗೆ ಭೂಮಿ ಮಂಜೂರಾತಿ ಕಾರ್ಯ 15 ದಿನದಲ್ಲಿ ನಡೆಯಲಿದೆ. ಈಗಾಗಲೇ ಭೂಮಿ ಕೊಡುವ ಭರವಸೆ ನೀಡಿ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಹಣ ಪಡೆಯುತ್ತಿರುವ ಬಗ್ಗೆ ದೂರು ಕೇಳಿಬಂದಿದೆ. ಯಾರೂ ಕೂಡ ಹಣ ಕೊಟ್ಟು ಕಳೆದುಕೊಳ್ಳಬೇಡಿ. ಅರ್ಜಿ ಸಲ್ಲಿಸಿ ಅನುಭವದಲ್ಲಿರುವ ಎಲ್ಲಾ ವರ್ಗದವರಿಗೂ ಕೂಡ ಭೂಮಿ ಸಿಗಲಿದೆ. ಅರ್ಜಿ ಸಲ್ಲಿಸದೇ ಅನುಭವದಲ್ಲಿರುವವರನ್ನು ಕೂಡ ಒಕ್ಕಲೆಬ್ಬಿಸುವುದಿಲ್ಲ. ಅವರಿಗೂ ಸ್ಕೆಚ್ ಮಾಡಿಸಲಾಗುವುದು ಎಂದು ಮಂಜು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ದೊಡ್ಡಮಗ್ಗೆ ರಾಜೇಗೌಡ,ಗ್ರಾಪಂ ಅಧ್ಯಕ್ಷ ಅಶೋಕ್, ಮುಖಂಡರಾದ ಮಂಜುನಾಥ್, ರಘು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.*ಬಾಕ್ಸ್ : ಶಾಸಕರನ್ನು ಅಮಾನತು ಸರಿಯಲ್ಲವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರು ಕೂಡ ಶಾಸಕರಾಗಿದ್ದಾರೆ. ಶಾಸನ ಸಭೆಯಲ್ಲಿ ಶಾಸಕರು ತಮ್ಮ ಹಕ್ಕನ್ನು ಪ್ರತಿಪಾದಿಸುವ ಪ್ರಮುಖ ಸ್ಥಾನ ಶಾಸಕ ಸಭೆಯಾಗಿದೆ. ಸಭಾಧ್ಯಕ್ಷರ ಮೇಲೆ ಹಲವು ಶಾಸಕರು ಪೇಪರ್ ಎಸೆದಿದ್ದಾರೆ ಎಂದು 18 ಮಂದಿ ಶಾಸಕರನ್ನು ಅಮಾನತು ಮಾಡಿರುವ ಕ್ರಮ ಸರಿಯಲ್ಲ. ಬದಲಾಗಿ ಶಾಸಕರಿಂದ ಕ್ಷಮೆ ನಿರೀಕ್ಷೆ ಮಾಡುವುದು ಕೂಡ ನಾನು ಒಪ್ಪುವುದಿಲ್ಲ. ಅಮಾನತುಗೊಂಡಿರುವ ಎಲ್ಲಾ ಶಾಸಕರು ಕೂಡ ತಮ್ಮ ತಪ್ಪನ್ನು ಅರ್ಥಮಾಡಿಕೊಂಡು ಸಭಾಧ್ಯಕ್ಷರಿಗೆ ಗೌರವ ತರುವ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಹಿಂದೆಯೂ ಕೂಡ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಇದೇ ಖಾದರ್ ಅವರು ಕೂಡ ಸಭಾಧ್ಯಕ್ಷರ ಮೇಲೆ ನಡೆದುಕೊಂಡಿರುವ ರೀತಿಯನ್ನು ಅಂದು ಶಾಸಕನಾಗಿದ್ದ ಅವಧಿಯಲ್ಲಿ ಗಮನಿಸಿದ್ದೇನೆ.ಆ ರೀತಿಯಾಗಿ ನಡೆದುಕೊಳ್ಳುವುದು ಸರಿಯಲ್ಲ. ಅದನ್ನೆ ಮಾನದಂಡವನ್ನಾಗಿಟ್ಟುಕೊಂಡು ಅಮಾನತುಗೊಳಿಸುವುದು ಸಮಂಜಸವಲ್ಲ ಎಂದು ಹೇಳಿದರು.

PREV

Recommended Stories

ಬೆಳ್ತಂಗಡಿ: ಆಧಾರ್‌ ನೋಂದಣಿ, ತಿದ್ದುಪಡಿ ಶಿಬಿರ
ಲಾಯಿಲ ರಾಘವೇಂದ್ರ ಮಠ ಅಭಿವೃದ್ಧಿಗೆ 20 ಲಕ್ಷ ರು. ನೆರವು: ಶಾಸಕ ಗವಿಯಪ್ಪ ಭರವಸೆ