ಪಿಡಿಒಗಳ ಕಾರ್ಯವೈಖರಿಗೆ ಶಾಸಕರ ಅಸಮಾಧಾನ

KannadaprabhaNewsNetwork |  
Published : Nov 29, 2023, 01:15 AM IST
28ಎಚ್ಎಸ್ಎನ್10ಎ : ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು. | Kannada Prabha

ಸಾರಾಂಶ

ಅರಕಲಗೂಡು ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎ ಮಂಜು, ತಾಲೂಕಿನಲ್ಲಿ ಗ್ರಾಮ ಪಂಚಾಯ್ತಿ ಪಿಡಿಒಗಳು ಅಭಿವೃದ್ಧಿ ಕಾರ್ಯ ಮಾಡದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇಂತವರ ಮೇಲೆ ಕ್ರಮ ಕೈಗೊಳ್ಳುವುದು ಶತಃಸಿದ್ಧ ಎಂದು ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡುತಾಲೂಕಿನಲ್ಲಿ ಗ್ರಾಮ ಪಂಚಾಯ್ತಿ ಪಿಡಿಒಗಳು ಅಭಿವೃದ್ಧಿ ಕಾರ್ಯ ಮಾಡದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇಂತವರ ಮೇಲೆ ಕ್ರಮ ಕೈಗೊಳ್ಳುವುದು ಶತಃಸಿದ್ಧ ಎಂದು ಶಾಸಕ ಎ. ಮಂಜು ಕಿಡಿಕಾರಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದ್ಯದ ಸ್ಥಿತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಯಾವುದೇ ಅನುದಾನ ನಿರೀಕ್ಷಿಸುವಂತಿಲ್ಲ. ನರೇಗಾ ಯೋಜನೆಯ ಕಾಮಗಾರಿಗಳಿಂದ ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಒತ್ತು ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ಪಿಡಿಒಗಳು ಹೆಚ್ಚಿನ ನಿಗಾವಹಿಸಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಕೊಣನೂರಿನಲ್ಲಿ ಪೊಲೀಸ್ ಠಾಣೆ ಮಾರ್ಗವಾಗಿ ಕೆರೆಕೋಡಿಯಮ್ಮ ದೇವಸ್ಥಾನದ ವರೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಸಿಮೆಂಟ್ ರಸ್ತೆ ನಿರ್ಮಿಸಿದ್ದು, ಈ ರಸ್ತೆಯನ್ನು ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಂಡಿರುವ ಕುರಿತು ಬಿಲ್ ಮಾಡಿಕೊಳ್ಳಲಾಗಿದೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒ ಅವರಿಗೆ ಸೂಚಿಸಿದರು.ಕಂದಾಯ ಇಲಾಖೆ ವತಿಯಿಂದ ಎಲ್ಲಾ ಹಳ್ಳಿಗಳಿಗೂ ಸ್ಮಶಾನ ಜಾಗ ಗುರುತಿಸಿ ಗ್ರಾಪಂಗೆ ಹಸ್ತಾಂತರಿಸಲಾಗಿದೆ. ಆದರೆ ರುದ್ರಭೂಮಿಗಳ ಅಭಿವೃದ್ಧಿಯನ್ನು ಸ್ಥಳೀಯ ಪಂಚಾಯತಿಗಳು ನಿರ್ಲಕ್ಷಿಸಿವೆ. ರುದ್ರಭೂಮಿ ಅಭಿವೃದ್ಧಿ ಮಾಡಬೇಕೆಂದು ಎಂದು ತಾಕೀತು ಮಾಡಿದರು.

ಎಲ್ಲರಿಗೂ ಆಯುಷ್ಮಾನ್ ಆರೋಗ್ಯ ಕಾರ್ಡ್ ಕಡ್ಡಾಯವಾಗಿ ಮಾಡಿಸಬೇಕು. ಪ್ರತಿ ರೈತರು ಬೆಳೆವಿಮೆ ಮಾಡಿಸಲು ಕೃಷಿ ಇಲಾಖೆ ತುರ್ತು ಕ್ರಮ ಕೈಗೊಳ್ಳುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ಹಾಗೂ ಸಹಾಯಕ ಕೃಷಿ ನಿರ್ದೇಶಕಿ ಕವಿತಾ ಅವರಿಗೆ ಸೂಚಿಸಿದರು.ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ ಮಾತನಾಡಿ, ಗ್ರಾಪಂಗಳಿಂದ ರಸ್ತೆ, ಚರಂಡಿ, ನೀರ್ಗಾಲುವೆ ಮುಂತಾದ ಕಾಮಗಾರಿಗಳಿಗೆ ಅನುಮೋದನೆ ಕೋರಿ ಹೆಚ್ಚಿನ ಪ್ರಸ್ತಾವನೆಗಳು ಬರುತ್ತಿವೆ. ಜನರಿಗೆ ವೈಯುಕ್ತಿಕವಾಗಿ ಅನುಕೂಲವಾಗುವಂತಹ ಜಮೀನುಗಳಲ್ಲಿ ಗಿಡ ನೆಡುವುದು, ಬದು ನಿರ್ಮಾಣ, ಶೌಚಾಲಯಗಳಿಗೆ ಪ್ರಸ್ತಾವನೆಗಳನ್ನು ಯಾರು ಕಳುಹಿಸುತ್ತಿಲ್ಲ, ಸರ್ಕಾರಿ ಶಾಲೆಗಳಲ್ಲಿ ಶೌಚಗೃಹ, ಗ್ರಂಥಾಲಯ ಇಲ್ಲದೆ, ಅಂಗನವಾಡಿ ಕಟ್ಟಡಗಳು ಸ್ಥಾಪನೆಯಾಗಿಲ್ಲ. ಮೂಲ ಸೌಕರ್ಯಗಳ ಕೊರತೆಯಿಂದಾಗಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶದ ರೈತರು ವಿದ್ಯುತ್ ಸಮಸ್ಯೆಯಿಂದಾಗಿ ಬೆಳೆ ಕಳೆದುಕೊಳ್ಳುತ್ತಿದ್ದಾರೆ. ಸೆಸ್ಕ್ ಮತ್ತು ಗ್ರಾಪಂ ಅಧಿಕಾರಿಗಳ ಸಹಾಯಧನದಡಿ ಸೋಲಾರ್ ಸೌಲಭ್ಯ ಪಡೆದುಕೊಳ್ಳುವಂತೆ ರೈತರಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ತಾಲೂಕಿನಲ್ಲಿ ಗ್ರಾಪಂ ಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳು ಆಗದೆ ತೀವ್ರ ಹಿನ್ನಡೆಯಾಗಿದ್ದು, 10 ಗ್ರಾಪಂ ವ್ಯಾಪ್ತಿಯಲ್ಲಿ ಶೇ. 70ಕ್ಕಿಂತ ಕಡಿಮೆ ಸಾಧನೆ ದಾಖಲಾಗಿದೆ. ಗ್ರಾಪಂ ನಲ್ಲಿ ಇ-ಸ್ವತ್ತುಗಳನ್ನು ಮಾಡಿಕೊಡದ ಕಾರಣ ಗ್ರಾಮೀಣ ಭಾಗದ ಜನರು ಜಿಪಂ ವರೆಗೆ ದೂರುಗಳನ್ನು ಹೊತ್ತು ತರುವಂತಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಹದಿನೈದನೆ ಹಣಕಾಸು ಯೋಜನೆಯ ಅನುದಾನದಲ್ಲಿ ಶೇ.50ರಷ್ಟು ಹಣವನ್ನು ಕುಡಿಯುವ ನೀರಿಗಾಗಿ ಮೀಸಲಿಡುವುದನ್ನು ಕಡ್ಡಾಯಗೊಳಿಸಲಾಗಿದೆ. ಬರದ ಕಾರಣ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತತ್ವಾರ ತಲೆದೋರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಂದು ಸಾವಿರ ಕೊಳವೆ ಬಾವಿಗಳ ಪುನಶ್ಚೇತನಕ್ಕೆ ಅನುಮೋದನೆ ನೀಡಲಾಗಿದೆ. ಒಂದು ಗ್ರಾಪಂ ಗೆ 5 ಕೊಳವೆ ಬಾವಿಗಳ ಪುನಶ್ಚೇತನಗೊಳಿಸಲು 81 ಸಾವಿರ ರು. ನೀಡಲಾಗುವುದು, ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು ಎಂದರು.

ಗ್ರಾಪಂ ಚುನಾಯಿತ ಮಹಿಳೆಯರಿಗೆ ಕಾರ್ಯಾಗಾರ ಏರ್ಪಡಿಸಿದರೆ ಶೇ.30ರಷ್ಟು ಮಹಿಳೆಯರು ಮಾತ್ರ ಹಾಜರಾಗುತ್ತಿದ್ದಾರೆ. ಈಗಾಗಲೇ ಮೂರು ಸಭೆಗಳನ್ನು ನಡೆಸಲಾಗಿದೆ. ಮಹಿಳಾ ಸದಸ್ಯರು ತಿಳುವಳಿಕೆ ಪಡೆದರೂ ನಮ್ಮನ್ನೆ ಪ್ರಶ್ನಿಸಲು ಮುಂದಾಗುತ್ತಾರೆ, ಕೆಲವೆಡೆ ಪಿಡಿಒಗಳು ಸಭೆಯ ಮಾಹಿತಿಯನ್ನೆ ನೀಡುತ್ತಿಲ್ಲ ಎಂದು ಜಿಪಂ ಸಿಇಒ ಬೇಸರ ವ್ಯಕ್ತಪಡಿಸಿದರು.

ತಾಪಂ ಪ್ರಭಾರಿ ಇಒ ಅಶೋಕ್, ತಾಪಂ ಆಡಳಿತಾಧಿಕಾರಿ ಚಂದ್ರಶೇಖರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಮೀಸಲಿಂದ ರಾಜಕೀಯ ಚಿತ್ರಣವೇ ಬದಲು : ಕುಮಾರಸ್ವಾಮಿ
ಬೀದಿಗಳಲ್ಲಿ ಇಲಿಗಳ ಕಾಟ : ಆರೋಗ್ಯ ಸಮಸ್ಯೆ ಭೀತಿ