ಮಹಿಳಾ ಮೀಸಲಾತಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಲ್ಲಿ ರಾಜಕೀಯ ಚಿತ್ರಣವೇ ಬದಲಾಗಲಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.ಮಂಗಳವಾರ ಜೆಡಿಎಸ್‌ ರಾಜ್ಯ ಕಚೇರಿಯಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ  ಮಾತನಾಡಿದರು

ಬೆಂಗಳೂರು : ಮಹಿಳಾ ಮೀಸಲಾತಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಲ್ಲಿ ರಾಜಕೀಯ ಚಿತ್ರಣವೇ ಬದಲಾಗಲಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಗಳವಾರ ಜೆಡಿಎಸ್‌ ರಾಜ್ಯ ಕಚೇರಿಯಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಚ್‌.ಡಿ.ದೇವೇಗೌಡರು 30 ವರ್ಷಗಳ ಹಿಂದೆಯೇ ದೇಶದಲ್ಲಿ ಮಹಿಳಾ ಮೀಸಲಾತಿ ನೀಡಲು ಪ್ರಯತ್ನಿಸಿದ್ದರು. ನಂತರ ಹಲವು ಬೆಳವಣಿಗೆಗಳಾದವು. ಈಗ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕೊಡಲಾಗುತ್ತಿದೆ ಎಂದರು.

ಕ್ಷೇತ್ರಗಳ ಮರು ವಿಂಗಡಣೆ

ಮಹಿಳಾ ಮೀಸಲಾತಿ ಜಾರಿಯಿಂದ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮರು ವಿಂಗಡಣೆಯಾಗಲಿದೆ. ಇದರಿಂದ ರಾಜ್ಯದಲ್ಲಿ 42 ಲೋಕಸಭಾ ಕ್ಷೇತ್ರಗಳು ಅಸ್ತಿತ್ವಕ್ಕೆ ಬರಲಿವೆ. ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯೂ ಹೆಚ್ಚಳವಾಗಲಿದೆ. ಹೀಗಾಗಿ ಪಕ್ಷದ ಕಾರ್ಯಕರ್ತೆಯರು ಈಗಿನಿಂದಲೇ ಪಕ್ಷ ಸಂಘಟನೆಗೆ ಒತ್ತು ನೀಡಿ. ಮುಂದಿನ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಉತ್ತೇಜನ ನೀಡಲಿದ್ದೇವೆ ಎಂದು ಹೇಳಿದರು.

ಪಕ್ಷದ ಮುಖಂಡರಾದ ಎಂ. ಕೃಷ್ಣಾರೆಡ್ಡಿ, ಕೆ.ಅನ್ನದಾನಿ, ವೆಂಕಟರಾವ್ ನಾಡಗೌಡ, ಟಿ.ಎ.ಶರವಣ, ಟಿ.ಎನ್‌.ಜವರಾಯಿಗೌಡ, ಎಚ್.ಎಂ.ರಮೇಶ್ ಗೌಡ, ಕೆ.ಎ.ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಎಲ್ಲಾ ಸಮುದಾಯಗಳನ್ನು ಒಳಗೊಂಡಂತೆ ಕಟ್ಟಬೇಕು.

ಪಕ್ಷವನ್ನು ನಾವು ಎಲ್ಲಾ ಸಮುದಾಯಗಳನ್ನು ಒಳಗೊಂಡಂತೆ ಕಟ್ಟಬೇಕು. ಗ್ರಾಮ ಹೋಬಳಿ ಮತ್ತು ಮತಗಟ್ಟೆಗಳ ಮಟ್ಟದಲ್ಲಿಯೂ ಬಲಿಷ್ಠವಾಗಿ ಕಾರ್ಯಕರ್ತರ ಪಡೆ ಸೃಷ್ಟಿ ಮಾಡಬೇಕು. ಶೋಷಿತರ ಮತ್ತು ಧ್ವನಿ ಇಲ್ಲದವರ ದನಿಯಾಗಿ ನಾವು ಕೆಲಸ ಮಾಡಬೇಕು. ಡಾ.ಬಿ.ಆರ್.ಅಂಬೇಡ್ಕರ್‌ ಅವರ ಸಂದೇಶವೂ ಸಹ ಇದೇ ಆಗಿದೆ. ಆದರೆ ಕೆಲವರು ಪ್ರಚಾರಕ್ಕಾಗಿ ಸಂವಿಧಾನದ ಪೀಠಿಕೆ ಜೇಬಿನಲ್ಲಿ ಇರಿಸಿಕೊಂಡು ಓಡಾಡುತ್ತಾರೆ ಎಂದು ಟೀಕಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ತಮಗೆ ಜೈಕಾರ ಹಾಕಿದ್ದನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಅಥವಾ ಕುಮಾರಣ್ಣ ಎಂದು ನೀವು ಕೂಗುವ ಸಮಯ ಇದಲ್ಲ. ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ನನ್ನ ಬಗ್ಗೆ ಘೋಷಣೆ ಕೂಗಿದರೆ, ಅಂಬೇಡ್ಕರ್‌ ಅವರಿಗೆ ಅಗೌರವ ತೋರಿದಂತಾಗುತ್ತದೆ. ನಾವು ಅಂಬೇಡ್ಕರ್‌ ಅವರ ಆದರ್ಶ ಮತ್ತು ತತ್ವಗಳನ್ನು ಅಳವಡಿಸಿಕೊಂಡು ಪಕ್ಷವನ್ನು ಬಲಿಷ್ಠವಾಗಿ ಕಟ್ಟಬೇಕು ಎಂದು ತಿಳಿ ಹೇಳಿದರು.