ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಾಸಕರಿಂದ ಗುದ್ದಲಿಪೂಜೆ

KannadaprabhaNewsNetwork | Published : Aug 8, 2024 1:42 AM

ಸಾರಾಂಶ

ಪ್ರಸ್ತುತ ರಸ್ತೆಯನ್ನು ಎಷ್ಟು ಬಾರಿ ಸರಿಪಡಿಸಿದರೂ ನಿಲ್ಲುತಿರಲಿಲ್ಲ. ಈ ಹಿನ್ನೆಲೆ ಲೋಕೋಪಯೋಗಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಕಾಂಕ್ರೀಟ್ ರಸ್ತೆಯೇ ಸೂಕ್ತ ಎಂದು ನಿರ್ಣಯ ಕೈಗೊಳ್ಳಲಾಯಿತು. ಇದಕ್ಕೆ ಗ್ರಾಮಸ್ಥರು ಸಹಕರಿಸಬೇಕು.

ಕನ್ನಡಪ್ರಭ ವಾರ್ತೆ ಟೇಕಲ್

ಕೊಂಡಶೆಟ್ಟಿಹಳ್ಳಿ ಕಾಂಕ್ರೀಟ್ ರಸ್ತೆಗೆ ೩ ಕೋಟಿ ರು. ಹಾಗೂ ಸೇತುವೆ ನಿರ್ಮಾಣಕ್ಕೆ ೨.೫ ಕೋಟಿ ರು.ಗಳ ಅನುದಾನದಲ್ಲಿ ಶಾಶ್ವತ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಟೇಕಲ್‌ನ ಕೊಂಡಶೆಟ್ಟಿಹಳ್ಳಿ ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿ, ಗ್ರಾಮದೊಳಗಿನ ರಸ್ತೆಯು ಬಹಳ ಶಿಥಿಲವಾಗಿದ್ದು, ಮಳೆ ಬಂದರೆ ರಸ್ತೆ ಸಮೀಪದ ಮನೆಗಳಲ್ಲಿ ನೀರು ಹೊಗುತ್ತಿದ್ದು, ಮಳೆಯಿಂದ ನೀರು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ದೊಡ್ಡ ದೊಡ್ಡ ಗುಂಡಿಗಳಾಗಿವೆ, ಇಲ್ಲಿ ಕ್ರಷರ್ ಝೋನ್ ಇರುವುದರಿಂದ ಸುಮಾರು ಲಾರಿಗಳು ಸಹ ಓಡಾಡುತ್ತವೆ. ಈ ಹಿಂದೆ ರಸ್ತೆ ಡಾಂಬರೀಕರಣ ಮಾಡಿದಾಗ ಗ್ರಾಮಸ್ಥರು ಉತ್ತಮ ಸಹಕಾರ ನೀಡಿದ್ದರು ಎಂದರು.

ಪ್ರಸ್ತುತ ರಸ್ತೆಯನ್ನು ಎಷ್ಟು ಬಾರಿ ಸರಿಪಡಿಸಿದರೂ ನಿಲ್ಲುತಿರಲಿಲ್ಲ. ಈ ಹಿನ್ನೆಲೆ ಲೋಕೋಪಯೋಗಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಕಾಂಕ್ರೀಟ್ ರಸ್ತೆಯೇ ಸೂಕ್ತ ಎಂದು ನಿರ್ಣಯ ಕೈಗೊಳ್ಳಲಾಯಿತು. ಇದಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದರು.

ಕೋಲಾರ ಜಿಲ್ಲೆ ಕಾರ್ಯಪಾಲ ಅಭಿಯಂತರ ರಾಮಮೂರ್ತಿ ಮಾತನಾಡಿ, ಕೊಂಡಶೆಟ್ಟಿಹಳ್ಳಿ ಗ್ರಾಮದೊಳಗೆ ಹೆಚ್ಚಿನ ವಾಹನಗಳ ಸಾಂಧ್ರತೆ ಇರುವುದರಿಂದ ಶಾಸಕರು ಇದನ್ನು ಗಮನಿಸಿ ಇಲ್ಲಿ ಶಾಶ್ವತ ಪರಿಹಾರ ಕಲ್ಪಿಸಲು ೪೦೦ ಮೀಟರ್ ಉದ್ದ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು ಹಾಗೂ ಕಾಮಗಾರಿ ವೇಳೆ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗುವುದು, ಸಾರ್ವಜನಿಕರು ಸಹಕರಿಸಬೇಕು ಎಂದರು.

ಮಾಲೂರು ಸಹಾಯಕ ಕಾರ್ಯಪಾಲ ಅಭಿಯಂತರ ಎಂ.ಬಿ.ರಾಜು, ಸಹಾಯಕ ಇಂಜಿನಿಯರ್‌ಗಳಾದ ರಾಜ್‌ಗೋಪಾಲ್, ದಾಕ್ಷಿಯಿಣಿ, ಮಣಿ, ಗ್ರಾಪಂ ಅಧ್ಯಕ್ಷೆ ಅರ್ಚನಾ ಶ್ರೀನಿವಾಸ್, ಉಪಾಧ್ಯಕ್ಷ ಚಂದ್ರಶೇಖರ್, ಮಾಜಿ ಅಧ್ಯಕ್ಷ ಸಾದತ್ ಉಲ್ಲಾ ಖಾನ್, ಅಗರ ಪ್ರಕಾಶ್, ಖುಬ್ರಾ ನವಾಜ್ ಪಾಷ, ರಮೇಶ್, ಮೂರ್ತಿ ಸಂತೋಷ್, ನಂದೀಶ್, ಪಿಡಿಒ ಬಾನುಮತಿ.ಎನ್., ಕಾರ್ಯದರ್ಶಿ ನರಸಪ್ಪ, ಗುತ್ತಿಗೆದಾರ ಚಂಬೆ ನಾರಾಯಣಸ್ವಾಮಿ, ಮುಖಂಡರಾದ ಕೆ.ಎಸ್.ವೆಂಕಟೇಶ್ ರಮೇಶ್‌ಗೌಡ, ಎಚ್. ಹನುಮಂತಪ್ಪ, ಪ್ರಗತಿ ಶ್ರೀನಿವಾಸ್, ಸತೀಶ್ ಬಾಬು, ಗೋರು ಇದ್ದರು.

Share this article