ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಕೇರಗೋಡು ಗ್ರಾಮದಲ್ಲಿ 48 ಲಕ್ಷ ರು. ಅಂದಾಜು ವೆಚ್ಚದ ನೂತನ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ, ಬಿ.ಹೊಸೂರು ಗ್ರಾಮದಲ್ಲಿ 10 ಲಕ್ಷ ರು. ವೆಚ್ಚದ ರಸ್ತೆ ಅಭಿವೃದ್ಧಿ ಹಾಗೂ ತಂಗಳಗೆರೆ ಗ್ರಾಮದ ಶ್ರೀಏಳೂರಮ್ಮ ದೇವಸ್ಥಾನದ ಸುತ್ತ 8 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ನಂತರ ಶಾಸಕರು ಮಾತನಾಡಿ, ಗ್ರಾಮೀಣ ಜನರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು, ರೈತರ ಜೀವನೋಪಾಯಕ್ಕೆ ಪೂರಕ ಸೌಲಭ್ಯ ಒದಗಿಸುವುದು ಹಾಗೂ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಗ್ರಾಮೀಣ ಭಾಗದ ರೈತರ ಆರ್ಥಿಕ ಬದುಕಿನಲ್ಲಿ ಜಾನುವಾರುಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೈನುಗಾರಿಕೆ ಹಾಗೂ ಪಶುಸಂಗೋಪನೆಯನ್ನೇ ಅವಲಂಬಿಸಿರುವ ಅನೇಕ ಕುಟುಂಬಗಳಿಗೆ ಜಾನುವಾರುಗಳ ಆರೋಗ್ಯವೇ ಜೀವನಾಧಾರವಾಗಿದೆ. ಹೀಗಾಗಿ ಜಾನುವಾರುಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯುವುದು ಅತ್ಯಂತ ಅವಶ್ಯಕ. ಹೀಗಾಗಿ ಕೆರಗೋಡಿನಲ್ಲಿ 48 ಲಕ್ಷ ರು. ವೆಚ್ಚದಲ್ಲಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಇದರಿಂದ ರೈತರು ತಮ್ಮ ರಾಸುಗಳು ಅನಾರೋಗ್ಯಕ್ಕೀಡಾದರೆ ಪಶುಗಳಿಗೆ ಸ್ಥಳೀಯ ಆಸ್ಪತ್ರೆ ಚಿಕಿತ್ಸೆ, ಆರೋಗ್ಯ ತಪಾಸಣೆ ಹಾಗೂ ಅಗತ್ಯ ಪಶುವೈದ್ಯಕೀಯ ಸೇವೆಗಳನ್ನು ಪಡೆಯಲು ನೆರವಾಗಲಿದೆ ಎಂದರು.ಬಿ.ಹೊಸೂರು ಗ್ರಾಮ ವ್ಯಾಪ್ತಿ 10 ಲಕ್ಷ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ರಸ್ತೆ ಸಂಪರ್ಕವು ಜನರ ದೈನಂದಿನ ಬದುಕಿಗೆ ಅತ್ಯಗತ್ಯವಾಗಿದೆ. ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಸಾಗಿಸಲು, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಹಾಗೂ ಸಾರ್ವಜನಿಕರು ವಿವಿಧ ಅಗತ್ಯಗಳಿಗಾಗಿ ಸಂಚರಿಸಲು ರಸ್ತೆ ಸೌಲಭ್ಯ ಪ್ರಮುಖವಾಗಿದೆ ಎಂದರು.