ಮೂವರ ವಿರುದ್ಧ ಶಾಸಕ ರೇವಣ್ಣ ಕೆಂಗಣ್ಣು

KannadaprabhaNewsNetwork | Published : Jan 14, 2025 1:03 AM

ಸಾರಾಂಶ

ಡಿಸಿ, ಎಸ್ಪಿ, ಜಿ.ಪಂ ಸಿಇಒ, ಎಸಿ ನನ್ನ ಕೈಗೆ ಸಿಗದಲೇ ಎಲ್ಲಿ ಹೋಗ್ತಾರೆ? ಈ ಮೂವರು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವೇ ಶಾಶ್ವತವಾಗಿ ಇರುತ್ತದೆ ಎಂದುಕೊಂಡಿರಬೇಕು. ನಮಗೂ ಟೈಂ ಬರುತ್ತದೆ. ಆಗ ತೋರಿಸ್ತೀನಿ ಎಂದು ಮಾಜಿ ಸಚಿವರು ಹಾಗೂ ಜೆಡಿಎಸ್‌ ಶಾಸಕರೂ ಆದ ಎಚ್‌.ಡಿ.ರೇವಣ್ಣ ಅವರು ಅಧಿಕಾರಿಗಳ ಆಕ್ರೋಶ ಹೊರಹಾಕಿದರು. ಇವರು ಮಾಡಿರುವ ಅಕ್ರಮವನ್ನು ಧಾರಾವಾಹಿ ಥರ ಏನೇನು ಮಾಡಿದ್ದಾರೆ ಎಂದು ಪಾರ್ಟ್-೧, ಪಾರ್ಟ್-೨, ಪಾರ್ಟ್-೩ ಬಿಡುಗಡೆ ಮಾಡ್ತೀನಿ ಎಂದು ಎಚ್ಚರಿಸಿದರು. ಇಂತಹವನ್ನೆಲ್ಲಾ ನಾನು ಬಹಳ ನೋಡಿ ಬಿಟ್ಟಿದ್ದೇನೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಡಿಸಿ, ಎಸ್ಪಿ, ಜಿ.ಪಂ ಸಿಇಒ, ಎಸಿ ನನ್ನ ಕೈಗೆ ಸಿಗದಲೇ ಎಲ್ಲಿ ಹೋಗ್ತಾರೆ? ಈ ಮೂವರು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವೇ ಶಾಶ್ವತವಾಗಿ ಇರುತ್ತದೆ ಎಂದುಕೊಂಡಿರಬೇಕು. ನಮಗೂ ಟೈಂ ಬರುತ್ತದೆ. ಆಗ ತೋರಿಸ್ತೀನಿ ಎಂದು ಮಾಜಿ ಸಚಿವರು ಹಾಗೂ ಜೆಡಿಎಸ್‌ ಶಾಸಕರೂ ಆದ ಎಚ್‌.ಡಿ.ರೇವಣ್ಣ ಅವರು ಅಧಿಕಾರಿಗಳ ಆಕ್ರೋಶ ಹೊರಹಾಕಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರದಂದು ಮಾಧ್ಯಮದೊಂದಿಗೆ ಮಾತನಾಡಿ, ಡಿಸಿ, ಎಸ್ಪಿ, ಜಿ.ಪಂ ಸಿಇಒ, ಎಸಿ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಜಿಲ್ಲಾಧಿಕಾರಿ, ಎಸ್ಪಿಗೆ ಬಡ್ತಿ ನೀಡಿದ್ದಾರೆ. ಇವರೆಲ್ಲಾ ಕಾಂಗ್ರೆಸ್ ಸರ್ಕಾರವೇ ಇರುತ್ತೆ ಅಂದುಕೊಂಡಿದ್ದಾರೆ. ನನ್ನ ಕೈಗೆ ಸಿಗದೇ ಎಲ್ಲಿ ಹೋಗ್ತಾರೆ. ಟೈಂ ಬರುತ್ತೆ ನಾನು ಬಿಡ್ತಿನಾ ಇವರನ್ನಾ! ನಾನು ಹೆದರಿ ಓಡಿ ಹೋಗುತ್ತೇನೆ ಎಂದು ತಿಳಿದುಕೊಂಡಿದ್ದಾರೆ. ದೇವೇಗೌಡರ ಕುಟುಂಬದ್ದು ಮುಗಿದೇ ಹೋಯಿತು ಅಂದುಕೊಂಡಿದ್ದಾರೆ. ೨೦೨೫ರಿಂದ ಪ್ರಾರಂಭ, ಈ ದೇಶದ ರಾಜಕೀಯ ನೋಡಿದ್ದೇನೆ. ಸೋತು ಇದ್ದೀನಿ, ಗೆದ್ದು ಇದ್ದೀನಿ, ಕೇಸ್ ಹಾಕಿದ್ರೆ ಹೆದರುತ್ತೇನೆ ಅಂದುಕೊಂಡಿದ್ದಾರೆ. ಏನು ಕಾಂಗ್ರೆಸ್ ಸರ್ಕಾರನೇ ಶಾಶ್ವತವಾಗಿ ಇರುತ್ತೆ ಅಂದುಕೊಂಡಿದ್ದಾರೆ, ನಮ್ಮನ್ನು ಏನೂ ಮಾಡಲು ಆಗಲ್ಲ ಅಂದುಕೊಂಡಿದ್ದಾರೆ. ಇಂತಹ ಬಹಳ ಜನ ನೋಡಿದ್ದೇನೆ. ಇವರು ಮಾಡಿರುವ ಅಕ್ರಮವನ್ನು ಧಾರಾವಾಹಿ ಥರ ಏನೇನು ಮಾಡಿದ್ದಾರೆ ಎಂದು ಪಾರ್ಟ್-೧, ಪಾರ್ಟ್-೨, ಪಾರ್ಟ್-೩ ಬಿಡುಗಡೆ ಮಾಡ್ತೀನಿ ಎಂದು ಎಚ್ಚರಿಸಿದರು. ಇಂತಹವನ್ನೆಲ್ಲಾ ನಾನು ಬಹಳ ನೋಡಿ ಬಿಟ್ಟಿದ್ದೇನೆ. ಈ ರೀತಿ ಆಡಿದವರನ್ನ ಗೊರೂರು ಡ್ಯಾಂ ಹತ್ತಿರ ಓಡ್ಸಾಡಿದ್ರು ಎಂದು ಇದೇ ವೇಳೆ ರೇವಣ್ಣ ಹೇಳಿದರು.

೧೯೬೨ನೇ ಇಸವಿಯಿಂದ ದೇವೇಗೌಡರಿಗೆ ರಾಜಕೀಯ ಜನ್ಮ ಕೊಟ್ಟ ಜಿಲ್ಲೆ ಹಾಸನ. ಎರಡನೇಯದ್ದು ಬೆಂಗಳೂರು ಗ್ರಾಮಾಂತರ, ಕನಕಪುರ ಕ್ಷೇತ್ರ ದೇವೇಗೌಡರಿಗೆ ರಾಜಕೀಯವಾಗಿ ಶಕ್ತಿ ಕೊಟ್ಟಿರುವ ಕ್ಷೇತ್ರವಾಗಿದ್ದು, ದೇವೇಗೌಡರು ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸಚಿವರಾಗಲು ಜನರು ಸಹಕಾರ ಕೊಟ್ಟಿದ್ದಾರೆ. ನನನ್ನು ಆರು ಬಾರಿ ಗೆಲ್ಲಿಸಿದ್ದಾರೆ. ಏಳಕ್ಕೆ ಏಳು ಕ್ಷೇತ್ರಗಳನ್ನು ಗೆಲ್ಲಿಸಿದ್ದಾರೆ. ನಾನು ಬದುಕಿರುವವರೆಗೂ ಜಿಲ್ಲೆಯ ಜನರನ್ನು ಮರೆಯಲ್ಲ. ಜಿಲ್ಲೆಗೆ ಉಳಿದಿರುವ ಕೆಲಸವನ್ನು ಯಾವುದೇ ಸರ್ಕಾರವಿರಲಿ ಮಾಡುತ್ತೇನೆ. ಏನೇ ಅಡೆತಡೆ ಬಂದರೂ ಕೆಲಸ ಮಾಡುತ್ತೇನೆ, ಅದೇ ನನ್ನ ಗುರಿಯಾಗಿದ್ದು, ನಮ್ಮ ಕುಟುಂಬಕ್ಕೆ ಜಿಲ್ಲೆಯ ಜನ ಬೆಂಬಲ ನೀಡಿದ್ದಾರೆ. ಸೋಲು-ಗೆಲುವು ಇದ್ದೇ ಇರುತ್ತೆ, ಇವೆಲ್ಲವನ್ನೂ ಎದುರಿಸಿಕೊಂಡು ಬಂದಿದ್ದೇನೆ. ಕೇಂದ್ರ, ರಾಜ್ಯ ಸರ್ಕಾಗಳಿಗೆ ಪತ್ರ ಬರೆದು ಹಣ ಕೇಳುತ್ತಿದ್ದೇನೆ ಕೊಟ್ಟರೆ ಸಂತೋಷ. ಕೊಡದೇ ಹೋದರೆ ಕಾಲ ಬಂದಾಗ ಮಾಡ್ತೀವಿ. ೯೪ನೇ ವಯಸ್ಸಿನಲ್ಲಿ ರಾಜ್ಯಸಭೆ ಒಂದು ದಿನ ತಪ್ಪಿಸಿಕೊಳ್ಳದೆ ಹಾಜರಾಗಿ ರಾಜ್ಯದ ಪರ ಧ್ವನಿ ಎತ್ತುತ್ತಿದ್ದೇವೆ ಎಂದು ಹಿಂದಿನ ನೆನಪನ್ನು ಸಂಕ್ರಾಂತಿ ಹಬ್ಬದ ಹಿಂದಿನ ದಿನದಂದು ಮೆಲುಕು ಹಾಕಿದರು. ಮ್ಯಾಜಿಕ್‌ ಮಾಡ್ತೀನಿ:

ಐಐಟಿ, ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಕೆಲವರು ಕಬಳಿಸುತ್ತಿದ್ದಾರೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಸನ ಜಿಲ್ಲೆಯ ಲೂಟಿ ಹೊಡೆಯುತ್ತಿದ್ದಾರೆ. ಅದನ್ನು ತಡೆಯಲು ಏನೇನು ಮಾಡಬೇಕು ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರದಿಂದ ಐಐಟಿ ಬೇರೆ ಜಿಲ್ಲೆಗೆ ಹೋಯ್ತು. ದೇವೇಗೌಡರು ಬದುಕಿರುವುದರೊಳಗೆ ಐಐಟಿ ತರಲು ಪ್ರಯತ್ನ ಮಾಡುತ್ತೇನೆ. ಅದಕ್ಕೆ ಕೆಲವರು ಅಡ್ಡಿಪಡಿಸುತ್ತಿದ್ದು, ಎಲ್ಲೆಲ್ಲಿ ಯಾವ್ಯಾವ ಮ್ಯಾಜಿಕ್ ಮಾಡಬೇಕು ಮಾಡ್ತೀನಿ. ಮ್ಯಾಜಿಕ್ ಹೇಗೆ, ಎಲ್ಲಿ ಮಾಡಬೇಕು ಎಂಬುದು ನನಗೆ ಗೊತ್ತಿದೆ. ಮೂಲ ಯೋಜನೆಯಂತೆ ಏರ್‌ಪೋರ್ಟ್, ಐಐಟಿ ತರಲು ಪ್ರಯತ್ನ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಬಿಡಲ್ಲ, ಕೊನೆಯವರೆಗೂ ಹೋರಾಟ ಮಾಡ್ತೇನೆ. ದೇವೇಗೌಡರನ್ನು ಇಟ್ಕಂಡು ಒಂದು ಲಕ್ಷ ಉದ್ಯೋಗ ಸೃಷ್ಟಿ ಮಾಡಿದ್ದೇನೆ. ಜಿಲ್ಲಾಧಿಕಾರಿ ಕಚೇರಿ, ಕಂದಾಯ, ಪೊಲೀಸ್ ಇಲಾಖೆ ಒಂದು ಪಕ್ಷದ ಕಚೇರಿ ಆಗಬಾರದು. ಪೊಲೀಸ್ ಇಲಾಖೆಯಲ್ಲಿ ಎಂದೆಂದೂ ಕಾಣದ ದಂಧೆ ನಡೆಯುತ್ತಿದೆ. ಈ ರೀತಿಯ ದಂಧೆ ನಾನು ನೋಡೇ ಇಲ್ಲ. ಮದ್ಯದಂಗಡಿಗಳು ಹೆಚ್ಚಾಗಿವೆ. ಮಟ್ಕಾ, ಜೂಜಾಟ ನಡೆಯುತ್ತಿದೆ, ಕೊಲೆಗಳಾಗುತ್ತಿವೆ. ಪೊಲೀಸ್‌ ಕಚೇರಿಗೆ ಹೋದರೆ ಇಂತಿಷ್ಟು ಫಿಕ್ಸ್ ಮಾಡ್ತಾರೆ ಎಂದು ಹೆಚ್.ಡಿ. ರೇವಣ್ಣ ಗಂಭೀರವಾಗಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್, ನಗರಸಭೆ ಸದಸ್ಯ ಎಂ. ಚಂದ್ರೇಗೌಡ ಇತರರು ಉಪಸ್ಥಿತರಿದ್ದರು.* ಬಾಕ್ಸ್: ೧೫ ವರ್ಷ ಕೆಲವರಿಗೆ ಮೇವು ಹಾಕಿ ಸಾಕಿದೆ

೨೦೧೯-೨೦ರಿಂದ ಎರಡು ರಾಷ್ಟ್ರೀಯ ಪಾರ್ಟಿಯ ಕೆಲ ಮುಖಂಡರು ಈ ಪಾರ್ಟಿ ಮುಗಿಸಲು ಯತ್ನಿಸುತ್ತಿದ್ದಾರೆ. ಹಾಸನದಲ್ಲೇ ಕೆಲವರು ಠಿಕಾಣಿ ಹೂಡಿ ಪ್ರಯತ್ನಿಸುತ್ತಿದ್ದಾರೆ. ಇಂತಹ ಹೊಡೆತದಲ್ಲಿ ನಾಲ್ಕು ಜನ ಶಾಸಕರನ್ನು ಗೆಲ್ಲಿಸಿದ್ದಾರೆ. ಬೇಕಾದಾಗ ಕಾಲು ಕಟ್ಟುತ್ತಾರೆ, ಬೇಡವಾದಾಗ ಒದಿತರೆ! ೧೫ ವರ್ಷ ಕೆಲವರಿಗೆ ಮೇವು ಹಾಕಿ ಸಾಕಿದೆ, ಎಲ್ಲಾ ಮಾಡಿದೆ. ಬೇರೆ ಕಡೆ ಒಳ್ಳೆಯ ಮೇವು ಸಿಗುತ್ತೆ ಅಂತ ಹೋಗಿವೆ. ಕುಮಾರಸ್ವಾಮಿ ಅವರನ್ನು ಕಳುಹಿಸು ಎಂದಿದ್ದ, ಕಳುಹಿಸಿದೆ. ಒಳ್ಳೆಯ ಮೇವಿಗಾಗಿ ಹೋಗಿದ್ದಾರೆ, ದೇವರು ಅವರಿಗೆ ಒಳ್ಳೆಯದು ಮಾಡಲಿ. ಒಳ್ಳೆಯ ಹುಲ್ಲು ಸಿಗುತ್ತದೆ ಅಂಥ ಹೋಗಿವೆ ಹೋಗಲಿ. ಡಿಕೆಶಿ ಬ್ರದರ್ಸ್ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಪರೋಕ್ಷವಾಗಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

Share this article