ಗಡಿಭಾಗದಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಬೇಕು

KannadaprabhaNewsNetwork | Published : Nov 5, 2024 12:37 AM

ಸಾರಾಂಶ

ಗುಡಿಬಂಡೆ ಆಂಧ್ರದ ಗಡಿಯಲ್ಲಿದ್ದರೂ ಸಹ ಇಲ್ಲಿ ಕನ್ನಡ ಭಾಷೆ ಸಮೃದ್ಧವಾಗಿದೆ. ಆಡುಭಾಷೆ ತೆಲುಗು ಆದರೂ ಸಹ ಕನ್ನಡ ಭಾಷೆಗೆ ತುಂಬಾನೆ ಪ್ರಾಶಸ್ತ್ಯ ನೀಡುತ್ತಾರೆ. ಅನೇಕ ಕವಿಗಳು ಈ ಭಾಗದಲ್ಲಿ ಕನ್ನಡದ ಪುಸ್ತಕಗಳನ್ನು ಬರೆದಿದ್ದಾರೆ. ಜೊತೆಗೆ ಏನಾದರೂ ಕನ್ನಡ ಕಾರ್ಯಕ್ರಮಗಳು ನಡೆದರೇ ಎಲ್ಲರೂ ಒಗಟ್ಟಿನಿಂದ ಸಂಭ್ರಮಿಸುತ್ತಾರೆ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಗಡಿಭಾಗವಾದ ಗುಡಿಬಂಡೆ ವ್ಯಾಪ್ತಿಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡಪರ ಸಂಘಟನೆಗಳು ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸಲಹೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯತಿ ಆವರಣದಲ್ಲಿ ನೂತನ ಕಸಾಪ ತಾಲೂಕು ಘಟಕದ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಡಿಬಂಡೆ ಆಂಧ್ರದ ಗಡಿಯಲ್ಲಿದ್ದರೂ ಸಹ ಇಲ್ಲಿ ಕನ್ನಡ ಭಾಷೆ ಸಮೃದ್ಧವಾಗಿದೆ. ಆಡುಭಾಷೆ ತೆಲುಗು ಆದರೂ ಸಹ ಕನ್ನಡ ಭಾಷೆಗೆ ತುಂಬಾನೆ ಪ್ರಾಶಸ್ತ್ಯ ನೀಡುತ್ತಾರೆ ಎಂದು ಹೇಳಿದರು.

ಸಂಘಟನೆಗಳು ಶ್ರಮಿಸಲಿ

ಅನೇಕ ಕವಿಗಳು ಈ ಭಾಗದಲ್ಲಿ ಕನ್ನಡದ ಪುಸ್ತಕಗಳನ್ನು ಬರೆದಿದ್ದಾರೆ. ಜೊತೆಗೆ ಏನಾದರೂ ಕನ್ನಡ ಕಾರ್ಯಕ್ರಮಗಳು ನಡೆದರೇ ಎಲ್ಲರೂ ಒಗಟ್ಟಿನಿಂದ ಸಂಭ್ರಮಿಸುತ್ತಾರೆ. ಇದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಲು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡಪರ ಸಂಘಟನೆಗಳು ಶ್ರಮಿಸಬೇಕು ಎಂದರು.

ಬಳಿಕ ಕಸಾಪ ನೂತನ ತಾಲೂಕು ಅಧ್ಯಕ್ಷ ಬಿ.ಮಂಜುನಾಥ್ ಮಾತನಾಡಿ, ಗುಡಿಬಂಡೆ ಕಸಾಪ ಘಟಕದ ಕಾರ್ಯಚಟುವಟಿಕೆಗಳನ್ನು ನಡೆಸಲು ತುಂಬಾನೆ ಕಷ್ಟವಾಗಿತ್ತು. ಇದರಿಂದ ಕಸಾಪ ತಾಲೂಕು ಘಟಕದ ವತಿಯಿಂದ ಶಾಸಕರು ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ಕೊಠಡಿ ನೀಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ಅವರು ಕಸಾಪ ಕಚೇರಿಗಾಗಿ ಕೊಠಡಿ ನೀಡಿದ್ದಾರೆ ಇದರಿಂದ ಕನ್ನಡ ಕಾರ್ಯಕ್ರಮಗಳನ್ನು ನಡೆಸಲು ನಮಗೆ ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಭವನ ಕಟ್ಟಲು ಅನುದಾನಕ್ಕೆ ಮನವಿ

ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಶಾಸಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರೊಂದಿಗೆ ಮಾತನಾಡಿ ಆದಷ್ಟು ಶೀಘ್ರವಾಗಿ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡಬೇಕೆಂದು ಮನವಿ ಅವರು ಮಾಡಿದರು.

ಈ ವೇಳೆ ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾಲೂಕು ಪಂಚಾಯತಿ ಇಒ ಹೇಮಾವತಿ, ಬಿಇಒ ಕೃಷ್ಣಪ್ಪ, ಪಪಂ ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ಗಂಗರಾಜು, ಕಸಾಪ ನಿಕಟ ಪೂರ್ವ ಅಧ್ಯಕ್ಷರಾದ ಸ.ನ.ನಾಗೇಂದ್ರ, ಅನುರಾಧ ಆನಂದ್, ಪ್ರೆಸ್ ಸುಬ್ಬರಾಯಪ್ಪ, ಸರ್ಕಾರಿ ನೌಕರರ ಸಂಘದ ಕೆ.ವಿ.ನಾರಾಯಣಸ್ವಾಮಿ, ಮುನಿಕೃಷ್ಣಪ್ಪ, ಶಿಕ್ಷಕರ ಸಂಘದ ಶ್ರೀರಾಮಪ್ಪ ಸೇರಿದಂತೆ ಕಸಾಪ ತಾಲೂಕು ಘಟಕದ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳು ಮುಖಂಡರು ಸೇರಿದಂತೆ ಹಲವರು ಇದ್ದರು.

Share this article