ವಿವಿಧ ಇಲಾಖೆಗಳ ವಸತಿ ಶಾಲೆ, ವಸತಿ ನಿಲಯಗಳ ಕಾರ್ಯನಿರ್ವಹಣೆ - ಕುಂದು ಕೊರತೆಗಳ ಪರಿಶೀಲನಾ ಸಭೆ
ಪ್ರತಿ ಹಾಸ್ಟೆಲ್‌ನಲ್ಲಿ ಶಾಸಕರು, ಜಿಲ್ಲಾ ಪಂಚಾಯಿತಿ ಸಿಇಒ, ತಾಲೂಕು ಪಂಚಾಯಿತಿ ಇಒ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಯ ಫೋನ್ ನಂಬರ್‌ಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕೆಂದು ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಚಿಕ್ಕಮಗಳೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ವಸತಿ ಶಾಲೆ ಹಾಗೂ ವಸತಿ ನಿಲಯಗಳ ಕಾರ್ಯನಿರ್ವಹಣೆ ಮತ್ತು ಕುಂದು ಕೊರತೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಪ್ರತಿ ಹಾಸ್ಟೆಲ್‌ಗಳಿಗೆ ನೇಮಕ ಮಾಡಲಾಗಿರುವ ನೋಡಲ್ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸಿ ಜಿಪಂ ಸಿಇಒ ಅವರಿಗೆ ವರದಿ ನೀಡಬೇಕು. ಜತೆಗೆ, ಜಿಪಂ ಸಿಇಒ, ತಾಪಂ ಇಒ ಹಾಗೂ ಹಾಸ್ಟಲ್ ನಿರ್ವಹಣೆ ಮಾಡುವ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.ಇದೇ ವೇಳೆ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಉಂಟಾಗುವ ಸಮಸ್ಯೆ, ತೊಂದರೆಗಳ ಬಗ್ಗೆ ದೂರು ನೀಡಲು ಪ್ರತಿ ಹಾಸ್ಟೆಲ್ ನಲ್ಲಿ ಶಾಸಕರು, ಜಿಪಂ ಸಿಇಒ, ತಾಪಂ ಇಒ ಹಾಗೂ ಆಯಾ ಹಾಸ್ಟಲ್ ನಿರ್ವಹಣೆ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಫೋನ್ ನಂಬರ್‌ಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ದೂರು ಕೇಳಿ ಬಂದ ತಕ್ಷಣ ಭೇಟಿ ನೀಡಿ ಪರಿಶೀಲಿಸಲಾಗುವುದು. ಕರ್ತವ್ಯ ಲೋಪ ಕಂಡು ಬಂದರೆ ತಕ್ಷಣ ಜಿಪಂ ಸಿಇಒ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಜಿಪಂ ಸಿಇಒ ಎಚ್.ಎಸ್. ಕೀರ್ತನಾ ಮಾತನಾಡಿ ಕೆಲವು ವಸತಿ ಶಾಲೆಗಳ ಕಟ್ಟಡಗಳಿಗೆ ಸುಣ್ಣ ಬಣ್ಣ ಇಲ್ಲ, ಮೂಲಸೌಕರ್ಯ ಸೌಲಭ್ಯದ ಕೊರತೆ ಇದೆ ಎಂದು ದೂರುಗಳು ಕೇಳಿ ಬರುತ್ತಿವೆ. ಇದರ ಜೊತೆಗೆ ಊಟ ಚೆನ್ನಾಗಿಲ್ಲ ಎಂದು ಮಾತುಗಳು ಕೇಳಿ ಬರುತ್ತಿವೆ. ಮಕ್ಕಳಿಗೆ ನೀಡುತ್ತಿರುವ ಆಹಾರದ ಮೆನುವನ್ನು ನಾಮಫಲಕದಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ಆಹಾರ ಪದಾರ್ಥ ಕೆಡದಂತೆ ದಾಸ್ತಾನು ಮಾಡಿಕೊಳ್ಳಲು ಕೊಟ್ಟಿರುವ ಫ್ರೀಜ್ ಗಳನ್ನು ಬಳಸಿಕೊಳ್ಳಬೇಕು ಎಂದು ಸೂಚಿಸಿದರು.ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ಮೂಲಸೌಕರ್ಯ ಸಮಸ್ಯೆ ಬಗ್ಗೆ ಕೆಲವು ಹಾಸ್ಟಲ್ ವಾರ್ಡನ್‌ಗಳು ಸಭೆ ಗಮನಕ್ಕೆ ತಂದರು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸ್ಥಳದಲ್ಲಿಯೇ ನಿರ್ದೇಶಿಸಿದರು.ಸಭೆಯಲ್ಲಿ ಚಿಕ್ಕಮಗಳೂರು ತಾಪಂ ಇಒ ವಿಜಯಕುಮಾರ್, ಚಿಕ್ಕಮಗಳೂರು ತಹಸೀಲ್ದಾರ್ ರೇಷ್ಮಾ ಶೆಟ್ಟಿ, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.
ಹಾಸ್ಟೆಲ್ ಆವರಣದಲ್ಲಿ ಕೃಷಿ ಮಾಡಿ: ಶಾಸಕ ತಮ್ಮಯ್ಯ ಸಲಹೆ
---ಕೋಟ್--ಸೇವಾ ಭಾವನೆಯಿಂದ ಕೆಲಸ ಮಾಡಿದರೆ ಮಕ್ಕಳಿಗೆ ನ್ಯಾಯ ಸಿಗಲಿದೆ. ವಸತಿ ಶಾಲೆ ಮಕ್ಕಳನ್ನು ಮನೆ ಮಕ್ಕಳಂತೆ ನೋಡಿಕೊಳ್ಳಬೇಕು-ಎಚ್.ಡಿ. ತಮ್ಮಯ್ಯ ಶಾಸಕ, ಚಿಕ್ಕಮಗಳೂರು