ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕು ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2018ರಲ್ಲಿ ಜಾವಗಲ್ ಹೋಬಳಿ ವ್ಯಾಪ್ತಿಯ ಆರು ಪ್ರಮುಖ ಕೆರೆಗಳನ್ನು ಎತ್ತಿನಹೊಳೆ ಯೋಜನೆಗೆ ಸೇರ್ಪಡೆಗೊಳಿಸುವಂತೆ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯನವಿಗೆ ಒತ್ತಾಯಿಸಿದ ಪರಿಣಾಮ ಜಾವಗಲ್ ದೊಡ್ಡಕೆರೆ, ಕೊಡಗುಂದ ದೊಡ್ಡಕೆರೆ, ನೇರ್ಲಿಗೆ ಕೆರೆ, ಹುಂಡಿಗನಾಳು ಕೆರೆ ಹಳೆ ನಾಯಕನ ಕೆರೆ ಸೇರಿದಂತೆ ಆರು ಪ್ರಮುಖ ಕೆರೆಗಳಿಗೆ ನೀರು ಹರಿಸುವ ಯೋಜನೆ ರೂಪಿಸಲಾಗಿತ್ತು. ಈ ಸಂಬಂಧ ತಾಂತ್ರಿಕ, ಆಡಳಿತಾತ್ಮಕ ಹಾಗೂ ಆರ್ಥಿಕ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಸತತ ಪ್ರಯತ್ನಿಸಲಾಗಿ, ಸಂಬಂಧಪಟ್ಟ ಮಂಡಳಿಯ ಸಭೆಯಲ್ಲಿಯೂ ಪ್ರಸ್ತಾವನೆ ಮಂಡಿಸಲಾಗಿದ್ದು ಮಂಜುರಾತಿ ದೊರಕಿತ್ತು. ಆದರೆ ಇತ್ತೀಚಿಗೆ ಎತ್ತಿನಹೊಳೆ ಯೋಜನೆಯ ಕಾಮಗಾರಿ ಮುಗಿಯುತ್ತಾ ಬಂದರೂ ನೀರು ಮಾತ್ರ ಬಂದಿಲ್ಲ. ಈ ಬಗ್ಗೆ ಕೇಳಿದರೆ ಮೂರನೇ ಹಂತದಲ್ಲಿ ಕೊಡುವುದಾಗಿ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಬೇಲೂರು ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿ ಮೌನಕ್ಕೆ ಶರಣಾಗಿದ್ದಾರೆ ಎಂದು ಕಿಡಿಕಾರಿದರು. ಜಾವಗಲ್ ಹೋಬಳಿ ಆರು ಕೆರೆಗಳಿಗೆ ಗುರುತ್ವಾಕರ್ಷಣೆ ಮೂಲಕ ನೀರು ಹರಿಸುವ ಸಾಧ್ಯತೆ ಸೇರಿದಂತೆ ವಿವಿಧ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ, ಯೋಜನೆಗೆ ಸರ್ಕಾರದ ಅನುಮೋದನೆ ದೊರಕಿಸಿಕೊಡಲು ತಾವು ಸತತವಾಗಿ ಪ್ರಯತ್ನ ಮಾಡುತ್ತಲೇ ಬಂದಿದ್ದೇವೆ. ಕೇವಲ ಭರವಸೆ ನೀಡುವುದರಿಂದ ಪ್ರಯೋಜನವಿಲ್ಲ. ಯೋಜನೆಗೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆದು ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಕೈಗೆತ್ತಿಕೊಳ್ಳಬೇಕು. ಆದರೆ ಇದಕ್ಕೆ ಕೇವಲ ನಮ್ಮ ನೈತಿಕ ಶಕ್ತಿ ಇದ್ದರೆ ಸಾಲದು ಜೊತೆಗೆ ಅಧಿಕಾರದ ಬಲ ಇರಬೇಕು ಅದಕ್ಕೆ ಕ್ಷೇತ್ರದ ಜನರ ಸಹಕಾರ ಬಹಳ ಮುಖ್ಯ ಎಂದರು. ತಾಲೂಕಿನಲ್ಲಿ ನೀರಾವರಿ ವಿಚಾರದಲ್ಲಿ ರಾಜಕೀಯ ಮಾಡದೆ ರೈತರ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಕ್ಷೇತ್ರದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ಅಗತ್ಯ ಅನುದಾನ ಹಾಗೂ ಯೋಜನೆಗಳನ್ನು ಮಂಜೂರು ಮಾಡಿಸಬೇಕು. ಆದರೆ ಶಾಸಕರು ನಿಮ್ಮನ್ನ, ನಮ್ಮನ್ನೆಲ್ಲಾ ಸೇರಿಸಿ ಮುಗ್ಧರನ್ನಾಗಿ ಮಾಡುತ್ತಿದ್ದಾರೆ. 10 ಲಕ್ಷದ ರಸ್ತೆಗೆ ಗುದ್ದಲಿಪೂಜೆ ಮಾಡಲು ಬಾರಿ ಪ್ರಚಾರ ಪಡೆಯುವ ಹಂಬಲ ಇರುವವರಿಗೆ ರೈತರಿಗೆ ಅವಶ್ಯಕವಾದ ಕೆರೆ - ಕಾಲುವೆ ಬಗ್ಗೆ ಕಾಳಜಿ ಇಲ್ಲ. ಅಧಿಕಾರ ಶಾಶ್ವತ ಅಲ್ಲ, ಮಾಡಿದ ಕೆಲಸ ಶಾಶ್ವತ ಎನ್ನುವುದನ್ನು ತಿಳಿಯಬೇಕು. ರಿಯಲ್ ಎಸ್ಟೇಟ್ ಜೊತೆಗೆ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸ್ಪಂದಿಸಬೇಕು. ನಾನು ಸೋತೆ ಎಂದು ಮನೆಯಲ್ಲಿ ಕೂರದೇ ಓಡಾಡುತ್ತಾ ಇರುವುದರಿಂದ ತಾಲೂಕಿನ ಜನತೆ ತಮ ಮೇಲೆ ಇಂದಿಗೂ ಪ್ರೀತಿ ಇಟ್ಟಿದ್ದಾರೆ ಎಂದರು.ಸಾಬೀತು ಮಾಡುತ್ತೇನೆ. ತಾಲೂಕಿನ ಕಾಮಗಾರಿಗಳಲ್ಲಿ ಶೇ. 90ರಷ್ಟು ಹೊರಗಡೆಯವರೇ ಬರುತ್ತಾರೆ, ನಮ್ಮ ಸ್ಥಳೀಯ ಕಂಟ್ರ್ಯಾಕ್ಟರ್‌ಗಳನ್ನೆಲ್ಲಾ ನಿರ್ನಾಮ ಮಾಡಲಾಗಿದೆ, ಇದನ್ನು ನಾನು ಸಾಕ್ಷಿ, ಸಾಬೀತು ಮಾಡುತ್ತೇನೆ ಎಂದು ಮಾಜಿ ಸಚಿವ ಗಂಡಸಿ ಬಿ.ಶಿವರಾಂ ಪ ಸವಾಲು ಹಾಕಿದರು. ನಾನು ಕ್ಷೇತ್ರದಲ್ಲಿದ್ದವರೆಗೂ ಹೊರಗಡೆಯವರಿಗೆ ಎಂಟ್ರಿ ಕೊಡುತ್ತಿರಲಿಲ್ಲ. ಈ ಹಿಂದೆ ನಮ್ಮ ಕಾರ್ಯಕರ್ತರನ್ನೇ, ಕೂಲಿ ಕಾರ್ಮಿಕರನ್ನೇ ಕಂಟ್ರ್ಯಾಕ್ಟರ್ ಮಾಡಿ ಹಂಚಿಕೊಂಡು ತಿನ್ನಿ ಎಂದು ಹೇಳಿದ್ದೆ. ಅವರೆಲ್ಲಾ ಇಂದು ಒಳೊಳ್ಳೆ ಕಾಂಟ್ರಾಕ್ಟರ್ ಆಗಿದ್ದರು. ಆದರೆ ಶಾಸಕ ಸುರೇಶ್ ಪ್ರವೇಶದ ನಂತರ ಇಂದು ಅವರೆಲ್ಲಾ ನಿರ್ನಾಮ ಆಗಿದ್ದಾರೆ. ಬೇರೆ ಕ್ಷೇತ್ರದ ಗುತ್ತಿಗೆದಾರರನ್ನು ತಂದು ಕೆಲಸ ಕೊಡಲಾಗುತ್ತಿದೆ " ಎಂದರು.