ಕನ್ನಡಪ್ರಭ ವಾರ್ತೆ ಮೈಸೂರು
ಶ್ವಾನಗಳನ್ನು ಪ್ರದರ್ಶಿಸಲು ಹಾಗೂ ವೀಕ್ಷಿಸಲು ಜನರು ತಮ್ಮ ಮಕ್ಕಳೊಂದಿಗೆ ಆಗಮಿಸಿದ್ದರು. ಮಕ್ಕಳು ಶ್ವಾನಗಳೊಂದಿಗೆ ತುಂಟಾಟ ಆಡುತ್ತಾ ಸೆಲ್ಫಿ, ಫೋಟೋ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಶ್ವಾನ ಪ್ರದರ್ಶನದಲ್ಲಿ ಮುದೋಳ್, ಲ್ಯಾಬ್ರೆಡಾರ್, ಗೋಲ್ಡನ್ ರಿಟ್ರೀವರ್, ಡಾಬರ್ ಮ್ಯಾನ್, ಪಗ್ ಸೇರಿದಂತೆ 20 ಹೆಚ್ಚು ತಳಿಗಳ 100 ಹೆಚ್ಚಿನ ಶ್ವಾನಗಳು ನೋಡುಗರನ್ನು ಆಕರ್ಷಿಸಿದವು.ನಗರದ ವಿವಿಧ ಬಡಾವಣೆಗಳಲ್ಲದೆ, ಹೈದರಾಬಾದ್, ಬೆಂಗಳೂರು, ಮಂಡ್ಯ, ಹಾಸನ ಸೇರಿದಂತೆ ವಿವಿಧೆಡೆಗಳಿಂದ ಕರೆ ತಂದಿದ್ದ ಶ್ವಾನಗಳು ಪ್ರದರ್ಶನದಲ್ಲಿ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸುವ ಮೂಲಕ ಸೈ ಎನಿಸಿಕೊಂಡವು.
ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಶ್ವಾನಗಳು ಬಿಸಿಲಿನ ತಾಪಕ್ಕೆ ಬಸವಳಿದವು. ಅವುಗಳ ದೇಹ ತಂಪು ಮಾಡುವ ಸಲುವಾಗಿ ಐಸ್ ಹಾಗೂ ತಂಪಾದ ನೀರನ್ನು ನೀಡಲಾಯಿತು. ಅಲ್ಲದೆ, ಕೆಲವು ಶ್ವಾನ ಮಾಲೀಕರು ತಮ್ಮ ಪ್ರಿಯವಾದ ಶ್ವಾನವನ್ನು ಎಸಿ ಕಾರಿನಲ್ಲೇ ಕೂರಿಸಿದ್ದರು. ಕೆಲವರು ಮೈಗೆ ನೀರನ್ನು ಸಿಂಪಡಿಸಿದರೆ, ಮತ್ತೆ ಕೆಲವರು ಐಸ್ ಬಟ್ಟೆಯಲ್ಲಿ ಸುತ್ತಿ ಶ್ವಾನಗಳ ಮೈಗೆ ಸವರುತ್ತಿದ್ದರು. ಆಯೋಜಕರು ಕೂಡ ಶ್ವಾನಗಳಿಗಾಗಿ ಏರ್ ಕೂಲರ್ ವ್ಯವಸ್ಥೆ ಕಲ್ಪಿಸಿದ್ದರು.ಈ ಶ್ವಾನಗಳ ಪ್ರದರ್ಶನಕ್ಕೆ ಶಾಸಕ ಟಿ.ಎಸ್. ಶ್ರೀವತ್ಸ ಚಾಲನೆ ನೀಡಿದರು. ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಟಿ.ಡಿ. ಪ್ರಕಾಶ್, ಮೈಸೂರು ರಾಯಲ್ ಕೆನೈನ್ ಕ್ಲಬ್ ಅಧ್ಯಕ್ಷ ಶರವಣಕುಮಾರ್ ಮತ್ತು ಪದಾಧಿಕಾರಿಗಳು ಇದ್ದರು.