ಉಪ್ಪಿನಂಗಡಿ: ಮಳೆ ಕೊರತೆ ನಡುವೆಯೂ ನೇತ್ರಾವತಿ ಹರಿವು

KannadaprabhaNewsNetwork |  
Published : Apr 29, 2024, 01:31 AM IST
ನೇತ್ರಾವತಿ ನದಿಯಲ್ಲಿ ಮಾತ್ರ ತೃಪ್ತಿದಾಯಕ ನೀರಿನ ಹರಿವು ಉಳಿಕೆ | Kannada Prabha

ಸಾರಾಂಶ

ನೇತ್ರಾವತಿ ನದಿ ಪಾತ್ರದ ಕೆಲವೊಂದು ಭಾಗಗಳಲ್ಲಿ ಬಳಿಕದ ದಿನಗಳಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ನದಿಯ ನೀರಿನ ಮಟ್ಟದಲ್ಲಿ ಒಂದು ಅಡಿಯಷ್ಟು ಏರಿಕೆ ಕಂಡು ಬಂದಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಸುಡುವ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಳೆಯ ನಿರೀಕ್ಷೆ ಸುಳ್ಳಾಗುತ್ತಿದ್ದು, ಜಿಲ್ಲೆಯ ಜೀವನದಿಯಾಗಿರುವ ನೇತ್ರಾವತಿ ನದಿಯಲ್ಲಿ ಮಾತ್ರ ಉಪ್ಪಿನಂಗಡಿ ಭಾಗದಲ್ಲಿ ತೃಪ್ತಿದಾಯಕ ನೀರಿನ ಹರಿವು ಉಳಿಕೆಯಾಗಿದೆ.

ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ಅಣೆಕಟ್ಟು ಕಟ್ಟಿರುವುದರಿಂದ ನದಿಯಲ್ಲಿನ ಹಿನ್ನೀರು ಸಂಗ್ರಹ ಈ ಬಾರಿ ನದಿ ಪಾತ್ರದ ಜನತೆಗೆ ಅದರಲ್ಲೂ ಮುಖ್ಯವಾಗಿ ಕೃಷಿಕರಿಗೆ ಸಂತಸವನ್ನು ಉಂಟು ಮಾಡಿತ್ತು. ಆದರೆ ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಲಭ್ಯತೆ ಕುಸಿದಾಗ ಎಎಂಆರ್ ಅಣೆಕಟ್ಟಿನಿಂದ ನೀರ್ತು ಒದಗಿಸಲಾಗಿತ್ತು. ಇದರಿಂದಾಗಿ ಸರಪಾಡಿ ಮತ್ತು ಕಡೆಶ್ವಾಲ್ಯ ಅಣೆಕಟ್ಟಿನಲ್ಲಿ ನೀರು ಬರಿದಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಮಸ್ಯೆಯಾಗಿತ್ತು.

ಜಿಲ್ಲೆಯ ಜನತೆಯ ಕುಡಿಯುವ ನೀರಿನ ಅಗತ್ಯತೆಯನ್ನು ಪೂರೈಸುವ ನಿಟ್ಟಿನಲ್ಲಿ ಸಮತೋಲನ ಜಲಾಶಯವಾಗಿ ಪರಿಗಣಿಸಲ್ಪಟ್ಟ ಬಿಳಿಯೂರು ಅಣೆಕಟ್ಟಿನಲ್ಲಿ ಸಂಗ್ರಹವಾಗಿದ್ದ ೩.೭ ಮೀಟರ್ ಎತ್ತರದಷ್ಟಿದ್ದ ಹಿನ್ನೀರಿನಿಂದ ೨.೧ ಮೀಟರ್ ನೀರನ್ನು ಏ. ೧೭ರಂದು ಸರಪಾಡಿ ಹಾಗೂ ಕಡೆಶ್ವಾಲ್ಯ ಅಣೆಕಟ್ಟಿಗೆ ಹರಿಯ ಬಿಟ್ಟ ಬಳಿಕ ಬಿಳಿಯೂರು ಅಣೆಕಟ್ಟಿನಲ್ಲಿ ೧.೬ ಮೀಟರ್ ನಷ್ಟು ಮಾತ್ರ ಹಿನ್ನೀರು ಸಂಗ್ರಹವಾಗಿತ್ತು.

ನೇತ್ರಾವತಿ ನದಿ ಪಾತ್ರದ ಕೆಲವೊಂದು ಭಾಗಗಳಲ್ಲಿ ಬಳಿಕದ ದಿನಗಳಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ನದಿಯ ನೀರಿನ ಮಟ್ಟದಲ್ಲಿ ಒಂದು ಅಡಿಯಷ್ಟು ಏರಿಕೆ ಕಂಡು ಬಂದಿದೆ.

ನದಿಯ ಒಡಲಿನಲ್ಲಿ ಸರಿ ಸುಮಾರು ೩ ಮೀಟರ್ ನಷ್ಟು ಎತ್ತರದಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ಅದಕ್ಕೆ ಅನುಗುಣವಾಗಿ ಪಂಪು ಅಳವಡಿಸಿ ತಮ್ಮ ತಮ್ಮ ಕೃಷಿಗೆ ನೀರುಣಿಸುತ್ತಿದ್ದ ಕೃಷಿಕರಿಗೆ ನೀರಿನ ಮಟ್ಟ ಕುಸಿತದಿಂದಾಗಿ ಸಮಸ್ಯೆಗಳು ಎದುರಾಯಿತು. ಪಂಪು ಸೆಟ್ ಗಳನ್ನು ಮತ್ತೆ ನದಿ ಪಾತ್ರಕ್ಕೆ ಸ್ಥಳಾಂತರಿಸಿ ಕೃಷಿ ಬೆಳೆಗಳಿಗೆ ನೀರುಣಿಸುವ ಕೆಲಸ ಮಾಡಬೇಕಾಗಿ ಬಂದಿದೆ. ನೀರಿನಾಟಕ್ಕೆ ಮುಂದಾಗುತ್ತಿರುವ ಜನತೆ:

ನದಿಯಲ್ಲಿನ ನೀರಿನ ಮಟ್ಟ ಕುಸಿದು ಮರಳು ಕಾಣುತ್ತಿರುವುದರಿಂದ ನದಿಯಲ್ಲಿ ಬೇಸಗೆಯ ಕಾಲದಲ್ಲಿ ನೀರಿನಾಟಕ್ಕೆ ಮುಗಿಬೀಳುತ್ತಿದ್ದ ಜನತೆ ಮತ್ತೆ ನದಿಗಿಳಿಯಲಾರಂಭಿಸಿದ್ದಾರೆ. ಆದರೆ ಪೇಟೆಯ ತ್ಯಾಜ್ಯ ನೀರು ನದಿಗೆ ಸೇರುತ್ತಿರುವುದನ್ನು ಕಾಣುವ ಜನ ಮಾತ್ರ ನದಿ ನೀರಿನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಕಳೆದ ವರ್ಷದಲ್ಲಿ ಮಳೆಗಾಲ ವಿಳಂಬವಾಗಿ ಪ್ರಾರಂಭವಾಗಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನದಿಯು ಸಂಪೂರ್ಣ ಬತ್ತಿ ಹೋಗಿ ಪರಿಸರವಾದಿಗಳಿಂದ ಕ್ರಿಕೆಟ್ ಪಂದ್ಯಾಟವು ಜರುಗಿತ್ತು. ಈ ಬಾರಿಯೂ ಕಳೆದ ಬಾರಿಯಂತೆ ಮಳೆ ವಿಳಂಬವಾದರೆ ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಾಗಿ ಮತ್ತಷ್ಟು ನೀರನ್ನು ಬಿಳಿಯೂರು ಅಣೆಕಟ್ಟಿನಿಂದ ಹರಿಯಬಿಡಬೇಕಾಗಿ ಬಂದಲ್ಲಿ ನದಿಯ ನೀರು ಸಂಪೂರ್ಣ ಬರಿದಾಗುವ ಭೀತಿ ಎದುರಾಗಿದೆ.

ಪುತ್ತೂರಿಗೆ ಭೀತಿ:

ಪುತ್ತೂರು ನಗರಕ್ಕೆ ನೀರು ಸರಬರಾಜು ಮಾಡುವ ಸಲುವಾಗಿ ಕುಮಾರಧಾರಾ ನದಿಗೆ ನೆಕ್ಕಿಲಾಡಿಯಲ್ಲಿ ಕಟ್ಟಲಾದ ಕಿಂಡಿ ಅಣೆಕಟ್ಟಿನಲ್ಲಿಯೂ ಈ ಬಾರಿ ದಿನದಿಂದ ದಿನಕ್ಕೆ ನೀರಿನ ಸಂಗ್ರಹದಲ್ಲಿ ಕುಸಿತ ಕಾಣುತ್ತಿದೆ. ಬಿಳಿಯೂರು ಅಣೆಕಟ್ಟಿನಲ್ಲಿ ಸಮೃದ್ದ ನೀರು ಸಂಗ್ರಹಣೆಗೊಂಡಾಗ ಇಲ್ಲಿನ ಕಿಂಡಿ ಅಣೆಕಟ್ಟಿನಲ್ಲಿಯೂ ಅದರ ಹಿನ್ನೀರು ಸಂಗ್ರಹಗೊಂಡಿತ್ತು. ಇದರಿಂದಾಗಿ ಈ ವರ್ಷವಿಡೀ ಸಮೃದ್ದ ನೀರು ಲಭಿಸುತ್ತದೆ ಎಂಬ ನಿರೀಕ್ಷೆ ಬಿಳಿಯೂರು ಅಣೆಕಟ್ಟಿನಿಂದ ನೀರು ಬಿಟ್ಟಾಕ್ಷಣ ಹುಸಿಯಾಗಿದೆ. ನೆಕ್ಕಿಲಾಡಿ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸಲಾಗಿದೆಯಾದರೂ ನೀರಿನ ಪ್ರಮಾಣದಲ್ಲಿ ಗಣನೀಯ ಕುಸಿತ ಕಾಣಿಸಿದೆ.

ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಮತ್ತಷ್ಟು ಇಳಿಕೆಮಂಗಳೂರುಮಂಗಳೂರು ನಗರ ಸೇರಿದಂತೆ ವಿವಿಧೆಡೆ ಕುಡಿಯುವ ನೀರು ಪೂರೈಕೆಯಾಗುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕುಸಿತವಾಗುತ್ತಿದ್ದು, ಭಾನುವಾರ ನೀರಿನ ಮಟ್ಟ 4.60 ಮೀ.ಗೆ ಇಳಿದಿದೆ.ಈ ನೀರಿನ ಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ ಅದೇ ಆಸುಪಾಸಿನಲ್ಲಿದೆ. ಕಳೆದ ವರ್ಷ ರೇಷನಿಂಗ್‌ ಮಾಡಬೇಕಾದ ಪರಿಸ್ಥಿತಿ ಬಂದೊದಗಿತ್ತು. ಇನ್ನು ಕೆಲ ದಿನಗಳ ಕಾಲ ಮಳೆಯಾಗದಿದ್ದರೆ ಈ ವರ್ಷವೂ ರೇಷನಿಂಗ್‌ ಮಾಡಬೇಕಾದ ಪರಿಸ್ಥಿತಿ ಬರುವ ಸಾಧ್ಯತೆಯಿದೆ.

ಎರಡು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ

ತುಂಬೆಯ ರೇಚಕ ಸ್ಥಾವರದಿಂದ ನಗರಕ್ಕೆ ಬರುವ ಮುಖ್ಯ ಕೊಳವೆಯ ಅಳವಡಿಕೆ ಕಾಮಗಾರಿ ಹಿನ್ನೆಲೆಯಲ್ಲಿ ಏ.30 ಮತ್ತು ಮೇ 1ರಂದು ಮಂಗಳೂರಿನ ಹಲವು ಭಾಗಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ. ಏ.30ರಂದು ಬೆಳಗ್ಗೆ 6ರಿಂದ ಮೇ 1ರ ಬೆಳಗ್ಗೆ 6ರವರೆಗೆ ಪಡೀಲ್‌, ಮರೋಳಿ, ಕಂಕನಾಡಿ, ಮಂಗಳಾದೇವಿ, ಜೆಪ್ಪು, ಫಳ್ನೀರ್‌, ಮುಳಿಹಿತ್ಲು, ಬೋಳಾರ, ಕಾರ್‌ಸ್ಟ್ರೀಟ್‌, ಮಣ್ಣಗುಡ್ಡೆ, ಪಾಂಡೇಶ್ವರ, ಸ್ಟೇಟ್‌ಬ್ಯಾಂಕ್‌, ಶಕ್ತಿನಗರ, ಕಣ್ಣೂರು, ಬಜಾಲ್‌, ಜಪ್ಪಿನಮೊಗರು, ಅಳಪೆ, ಅತ್ತಾವರ, ಉಲ್ಲಾಸ್‌ನಗರ, ಚಿಲಿಂಬಿ, ಕೋಡಿಕಲ್‌, ಉರ್ವಸ್ಟೋರ್‌, ಅಶೋಕನಗರ, ಕುಡುಪು, ವಾಮಂಜೂರು, ಬೋಂದೆಲ್‌, ಕಾವೂರು ಹಾಗೂ ಮರಕಡ ಭಾಗಶಃ ಮೊದಲಾದ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ