ಮಡಿಕೇರಿ: ಮಡಿಕೇರಿ ದಸರಾ ಹಿನ್ನೆಲೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಗುರುವಾರ ನಗರದ ಗಾಂಧಿ ಮೈದಾನಕ್ಕೆ ಭೇಟಿ ನೀಡಿ ದಸರಾ ಕಾರ್ಯಕ್ರಮಗಳ ಸಿದ್ಧತೆ ಪರಿಶೀಲಿಸಿದರು.
ಯಾವುದೇ ಲೋಪವಾಗದಂತೆ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡು ಅಚ್ಚುಕಟ್ಟಾಗಿ ಆಯೋಜಿಸುವಂತೆ ಅಧಿಕಾರಿಗಳು ಹಾಗೂ ದಸರಾ ಸಮಿತಿಯ ಪದಾಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಈ ಸಂದರ್ಭದಲ್ಲಿ ವೇದಿಕೆ ನಿರ್ಮಾಣದ ಕುರಿತು ದಸರಾ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಅವರಿಂದ ಶಾಸಕರು ಮಾಹಿತಿ ಪಡೆದರು.ಆಯುಧ ಪೂಜೆಯಂದು ಹೆಸರಾಂತ ಗಾಯಕ ವಾಸುಕಿ ವೈಭವ್ ಹಾಗೂ ಅನನ್ಯ ಭಟ್ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.
ಕಾಫಿ ದಸರಾದಲ್ಲಿ 54 ಮಳಿಗೆಗಳಲ್ಲಿ ಕಾಫಿಗೆ ಸಂಬಂಧಿಸಿದ ಮಾಹಿತಿ, ವಿವಿಧ ಉತ್ಪನ್ನಗಳು ಹಾಗೂ ಕಾಫಿಯ ಸವಿಯ ಘಮಲು ಪ್ರವಾಸಿಗರು ಮತ್ತು ಸಾರ್ವಜನಿಕರನ್ನು ಆಕರ್ಷಿಸಲಿದೆ ಎಂದರು.
7 ರಂದು ಶ್ವಾನ ಪ್ರದರ್ಶನ, 18 ರಂದು ಯುವ ದಸರಾ: ಯುವ ದಸರಾ ಕುರಿತು ಸಮಿತಿ ಅಧ್ಯಕ್ಷ ಕವನ್ ಅವರು ಮಾಹಿತಿ ನೀಡಿ 17 ರಂದು ಬೆಳಗ್ಗೆ ಶ್ವಾನ ಪ್ರದರ್ಶನ ಹಾಗೂ 18 ರಂದು ರಾತ್ರಿ ಯುವ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.