ಬಳ್ಳಾರಿಯಲ್ಲಿ ಸಾವಯವ ಸಂತೆಗೆ ಭರ್ಜರಿ ರೆಸ್ಪಾನ್ಸ್‌ !

KannadaprabhaNewsNetwork |  
Published : Oct 09, 2026, 02:45 AM IST
ಬಳ್ಳಾರಿಯ ಗಾಂಧಿಭವನದಲ್ಲಿ ನಡೆಯುತ್ತಿರುವ ಸಾವಯವ ಸಂತೆಯಲ್ಲಿ ವಿಷಮುಕ್ತ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರು ಮುಗಿ ಬಿದ್ದಿರುವ ದೃಶ್ಯ ಬುಧವಾರ ಕಂಡು ಬಂತು.  | Kannada Prabha

ಸಾರಾಂಶ

ಸಾವಯವ ಸಂತೆಯ ಪ್ರಮುಖ ವಿಶೇಷತೆಯೆಂದರೆ ರೈತರು ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸಿರುವುದು. ಸಾಮಾನ್ಯ ಮಾರುಕಟ್ಟೆಯಲ್ಲಿ ರೈತರು ಬೆಳೆದ ಉತ್ಪನ್ನ ಹಲವು ಮಧ್ಯವರ್ತಿಗಳ ಮೂಲಕ ಗ್ರಾಹಕರನ್ನು ತಲುಪುತ್ತವೆ

ಮಂಜುನಾಥ ಕೆ.ಎಂ. ಬಳ್ಳಾರಿ

ವಿಷಮುಕ್ತ ಆಹಾರದತ್ತ ಜನರ ಒಲವು ಹೆಚ್ಚುತ್ತಿದ್ದು, ನಗರದ ಗಾಂಧಿ ಭವನದಲ್ಲಿ ಪ್ರತಿ ಬುಧವಾರ ನಡೆಯುತ್ತಿರುವ ಸಾವಯವ ಸಂತೆಗೆ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್‌ ದೊರೆಯುತ್ತಿದೆ.

ಚುಕ್ಕಿ ನಂಜಂಡಸ್ವಾಮಿ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘದ ನಮ್ದು ಸಂಸ್ಥೆಯಿಂದ ಆಯೋಜಿಸುತ್ತಿರುವ ಸಾವಯವ ಸಂತೆಗೆ ಗ್ರಾಹಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

ಗಮನಾರ್ಹ ಸಂಗತಿ ಎಂದರೆ ಸಂತೆ ಶುರುಗೊಂಡ ಮೂರೇ ತಾಸಿನೊಳಗೆ ಬಹುತೇಕ ಉತ್ಪನ್ನ ಖಾಲಿಯಾಗುತ್ತಿವೆ.

ಬಳ್ಳಾರಿ ಮಾತ್ರವಲ್ಲದೆ ವಿಜಯನಗರ ಹಾಗೂ ಚಿತ್ರದುರ್ಗ ಜಿಲ್ಲೆಗಳ ವಿವಿಧ ಭಾಗಗಳಿಂದ ಆಗಮಿಸುವ ಸಾವಯವ ಕೃಷಿಕರು ತಾವು ಬೆಳೆದ ತರಕಾರಿ, ಸೊಪ್ಪು, ಹಣ್ಣು ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳನ್ನು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ತಾಜಾ ಹಾಗೂ ವಿಷಮುಕ್ತ ಆಹಾರ ಉತ್ಪನ್ನ ಒಂದೇ ಕಡೆ ದೊರೆಯುತ್ತಿರುವುದರಿಂದ ಗ್ರಾಹಕರು ಸಾವಯವ ಸಂತೆಯತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.

ನಗರದ ಗಾಂಧಿ ಭವನದಲ್ಲಿ ಪ್ರತಿ ಬುಧವಾರ ಬೆಳಗ್ಗೆ 11 ಗಂಟೆಗೆ ಸಂತೆ ಆರಂಭವಾಗುತ್ತಿದ್ದು, ಆರಂಭಕ್ಕೂ ಮುನ್ನವೇ ಕೆಲ ಗ್ರಾಹಕರು ಆಗಮಿಸಿ ತಮಗೆ ಬೇಕಾದ ಉತ್ಪನ್ನಗಳಿಗಾಗಿ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಸಂತೆ ಆರಂಭವಾಗುತ್ತಿದ್ದಂತೆಯೇ ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿರುವುದರಿಂದ ಕೆಲವೇ ಗಂಟೆಗಳಲ್ಲಿ ತರಕಾರಿ, ಸೊಪ್ಪು ಹಾಗೂ ಹಣ್ಣು ಸೇರಿದಂತೆ ಪ್ರಮುಖ ಉತ್ಪನ್ನಗಳು ಮಾರಾಟವಾಗುತ್ತಿವೆ.

ರೈತ-ಗ್ರಾಹಕರ ನಡುವೆ ನೇರ ಸಂಪರ್ಕ: ಸಾವಯವ ಸಂತೆಯ ಪ್ರಮುಖ ವಿಶೇಷತೆಯೆಂದರೆ ರೈತರು ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸಿರುವುದು. ಸಾಮಾನ್ಯ ಮಾರುಕಟ್ಟೆಯಲ್ಲಿ ರೈತರು ಬೆಳೆದ ಉತ್ಪನ್ನ ಹಲವು ಮಧ್ಯವರ್ತಿಗಳ ಮೂಲಕ ಗ್ರಾಹಕರನ್ನು ತಲುಪುತ್ತವೆ. ಆದರೆ ಇಲ್ಲಿ ರೈತರೇ ನೇರವಾಗಿ ತಮ್ಮ ಉತ್ಪನ್ನ ಮಾರಾಟ ಮಾಡುತ್ತಿರುವುದರಿಂದ ಉತ್ಪನ್ನದ ಗುಣಮಟ್ಟ, ಬೆಳೆ ವಿಧಾನ ಹಾಗೂ ಸಾವಯವ ಕೃಷಿಯ ಕುರಿತು ಗ್ರಾಹಕರು ರೈತರಿಂದಲೇ ಮಾಹಿತಿ ಪಡೆಯಲು ಸಾಧ್ಯವಾಗುತ್ತಿದೆ.

ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಅತಿಯಾದ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಹೆಚ್ಚುತ್ತಿರುವ ಹಿನ್ನೆಲೆ ಸಾವಯವ ಆಹಾರಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅದರಲ್ಲೂ ಮಕ್ಕಳಿಗೆ ಹಾಗೂ ಕುಟುಂಬದ ಸದಸ್ಯರಿಗೆ ಆರೋಗ್ಯಕರ ಆಹಾರ ನೀಡಬೇಕೆಂಬ ಉದ್ದೇಶದಿಂದ ಹಲವರು ಸಾವಯವ ಉತ್ಪನ್ನಗಳತ್ತ ಮುಖ ಮಾಡುತ್ತಿದ್ದಾರೆ.

ಹತ್ತಾರು ಬಗೆಯ ಉತ್ಪನ್ನ: ಸಾವಯವ ಮಾದರಿಯಲ್ಲಿ ಬೆಳೆದ ವಿವಿಧ ಬಗೆಯ ತರಕಾರಿ, ಸೊಪ್ಪು, ಹಣ್ಣುಗಳ ಜತೆಗೆ ರೈತರು ಸಿದ್ಧಪಡಿಸುವ ಹತ್ತಾರು ಬಗೆಯ ಇತರೆ ಸಾವಯವ ಹಾಗೂ ನೈಸರ್ಗಿಕ ಆಹಾರ ಉತ್ಪನ್ನಗಳು ಸಂತೆಯಲ್ಲಿ ಲಭ್ಯವಾಗುತ್ತಿವೆ. ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಸಿಗದ ಕೆಲವು ಗ್ರಾಮೀಣ ಹಾಗೂ ಸಾಂಪ್ರದಾಯಿಕ ಉತ್ಪನ್ನ ಇಲ್ಲಿ ದೊರೆಯುತ್ತಿರುವುದು ಗ್ರಾಹಕರನ್ನು ಸೆಳೆಯುತ್ತಿದೆ.

ಮೇಯರ್ ಪಿ. ಗಾದೆಪ್ಪ ಸಹಕಾರದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ನೇತೃತ್ವದ ನಮ್ದು ಸಂಸ್ಥೆ 2026ರ ಆ. 26 ರಂದು ನಗರದ ಗಾಂಧಿ ಭವನದಲ್ಲಿ ಸಾವಯವ ಸಂತೆ ಆರಂಭಿಸಿತು. ಪ್ರತಿ ಬುಧವಾರ ನಡೆಯುತ್ತಿರುವ ಸಂತೆ ಈಗ ರೈತರು ಮತ್ತು ಗ್ರಾಹಕರ ನಡುವಿನ ವಿಶ್ವಾಸದ ಕೊಂಡಿಯಾಗಿ ರೂಪುಗೊಳ್ಳುತ್ತಿದೆ. ಒಂದೆಡೆ ಸಾವಯವ ಕೃಷಿ ಮಾಡುವ ರೈತರಿಗೆ ತಮ್ಮ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಸಿಗುತ್ತಿದ್ದರೆ, ಮತ್ತೊಂದೆಡೆ ನಗರದ ಗ್ರಾಹಕರಿಗೆ ತಾಜಾ ಹಾಗೂ ವಿಷಮುಕ್ತ ಆಹಾರ ಪದಾರ್ಥಗಳು ದೊರೆಯುತ್ತಿವೆ. ರೈತನಿಂದ ನೇರವಾಗಿ ಗ್ರಾಹಕರಿಗೆ ಎಂಬ ಪರಿಕಲ್ಪನೆಯ ಸಾವಯವ ಸಂತೆ ಇದೇ ರೀತಿ ಮುಂದುವರಿದರೆ ಬಳ್ಳಾರಿಯಲ್ಲಿ ಸಾವಯವ ಕೃಷಿ ಮತ್ತು ವಿಷಮುಕ್ತ ಆಹಾರ ಬಳಕೆಗೆ ಮತ್ತಷ್ಟು ಉತ್ತೇಜನ ಸಿಗುವ ನಿರೀಕ್ಷೆಯಿದೆ.

ಕಳೆದ ಎಂಟು ವಾರದಿಂದ ಬಳ್ಳಾರಿಯಲ್ಲಿ ಸಾವಯವ ಸಂತೆ ನಡೆಯುತ್ತಿದ್ದು, ಪ್ರತಿ ಬುಧವಾರ ತಪ್ಪದೆ ಆಗಮಿಸಿ ವಿವಿಧ ತರಕಾರಿ, ಹಣ್ಣುಗಳನ್ನು ಖರೀದಿಸುತ್ತೇನೆ. ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ಪನ್ನ ತಲುಪುತ್ತಿರುವುದರಿಂದ ಬೆಲೆಯೂ ಸಹ ದುಬಾರಿಯಲ್ಲ. ಸಾವಯವ ಕೃಷಿಕರಿಗೆ ಉತ್ತೇಜನ ನೀಡುವುದು ಸಹ ನಮ್ಮ ಕರ್ತವ್ಯವೂ ಹೌದು ಎಂದು ಬಳ್ಳಾರಿ ಎಸ್‌ಜಿ ಕಾಲೇಜು ನಿವೃತ್ತ ಪ್ರಾಂಶುಪಾಲ ಟಿ.ಎಂ.ಲಿಂಗರಾಜು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಶಾ ಸೌಹಾರ್ದ ಸೊಸೈಟಿ ನಿವ್ವಳ ಲಾಭದಲ್ಲಿ ಶೇ.35ರಷ್ಟು ಏರಿಕೆ
10ರಂದು ಮಾ ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’