ಆನಂದಪುರ: ಸಿಗಂದೂರು ಸೇತುವೆ ನಿರ್ಮಾಣದಲ್ಲಿ ಸಾಗರ ಕ್ಷೇತ್ರದ ಶಾಸಕರ ಕೊಡುಗೆ ಶೂನ್ಯ ಎಂದು ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡ್ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಿಗಂದೂರು ಸೇತುವೆ ಉದ್ಘಾಟನೆಯಾಗಿ ಮೂರು ದಿನಗಳು ಕಳೆಯುತ್ತಿದ್ದರು ಸಹ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಆರೋಪ ಪ್ರತ್ಯಾರೋಪಗಳು ನಿರಂತರವಾಗಿ ನಡೆಯುತ್ತಿವೆ. ಸಾಗರ ಕ್ಷೇತ್ರದ ಶಾಸಕರು ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ದೇಶದ ಪ್ರಧಾನಿ ಬರಲಿ, ಅಮೆರಿಕಾ ಅಧ್ಯಕ್ಷ ಬರಲಿ ನಾನು ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಮಾಧ್ಯಮದಲ್ಲಿ ಬಿಂಬಿಸಿಕೊಂಡಿದ್ದರು. ಆದರೆ, ಸೇತುವೆ ಉದ್ಘಾಟನೆಗೆ ಬಂದಂತಹ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟನಾ ಸಮಾರಂಭಕ್ಕೆ ಹೋಗದಂತೆ ಮಾಡಿದ್ದಾರೆ ಎಂದು ದೂರಿದರು.ಲೋಕೋಪಯೋಗಿ ಸಚಿವರು ಸಿಗಂದೂರು ಸೇತುವೆಯ ಉದ್ಘಾಟನೆಯ ಕೆಲವು ದಿನಗಳ ಹಿಂದೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಂದರ್ಭದಲ್ಲಿ ಸಿಗಂದೂರು ಸೇತುವೆ ಉದ್ಘಾಟನೆಗೆ ಹೋಗುತ್ತೇನೆ ಎಂದು ತಿಳಿಸಿದ್ದರು. ಅದರಂತೆ ಸಾಗರಕ್ಕೆ ಆಗಮಿಸಿದ್ದು ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಉದ್ಘಾಟನೆಗೆ ಬಾರದೆ ಹಾಗೆ ತೆರಳಿದ್ದಾರೆ. ಇವುಗಳನ್ನೆಲ್ಲ ನೋಡಿದರೆ ಕ್ಷೇತ್ರದ ಶಾಸಕರು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಶಾಸಕರು ಬ್ಲಾಕ್ ಮೇಲ್ ತಂತ್ರವನ್ನು ಅನುಸರಿಸಿ ಕಾಂಗ್ರೆಸ್ ನಾಯಕರು ಉದ್ಘಾಟನೆಗೆ ಬಾರದಂತೆ ನೋಡಿಕೊಂಡಿದ್ದಾರೆ ಎಂದು ದೂರಿದರು.ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಸೇತುವೆಯನ್ನು ವೀಕ್ಷಣೆ ಮಾಡಿದ ಸಂದರ್ಭದಲ್ಲಿ ಶಾಸಕರು ಜು.14ರಂದು ಸೇತುವೆ ಉದ್ಘಾಟನೆಗೊಳ್ಳದಿದ್ದರೆ ನಾನೇ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತೇನೆ ಎಂದು ಹೇಳಿದ್ದರು. ಹೀಗೆ ಹೇಳಿದವರು ಉದ್ಘಾಟನೆ ಆಹ್ವಾನ ತಡವಾಗಿ ಬಂದಿದೆ ಎಂದು ಕುಂಟು ನೆಪ ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕ್ಷೇತ್ರದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಪಪ್ರಚಾರ ಮಾಡುತ್ತ ಹೋದರೆ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವಾಗುವುದಿಲ್ಲ. ಮೂರು ಬಾರಿ ಶಾಸಕರಾದವರು ಅಭಿವೃದ್ಧಿಯ ಕಡೆ ಚಿಂತನೆ ಮಾಡದೆ ಇರುವುದು ಸರಿಯಲ್ಲ. ಸೇತುವೆ ನಿರ್ಮಾಣ ಕಾರ್ಯದಲ್ಲಿ ಶಾಸಕರ ಕೊಡುಗೆ ಶೂನ್ಯವಾಗಿದ್ದರಿಂದ ಈ ರೀತಿಯ ಅಪಪ್ರಚಾರ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಜನರು ಇವರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದಾರೆ. ಅವರ ಪ್ರಯತ್ನದ ಫಲವಾಗಿ ಸಿಗಂದೂರು ಸೇತುವೆ ನಿರ್ಮಾಣವಾಗಿದೆ. ಸಂಸದರೊಂದಿಗೆ ಕೈಜೋಡಿಸಿ ಅಭಿವೃದ್ಧಿ ಕಡೆ ಚಿಂತನೆ ಮಾಡುವುದನ್ನು ಬಿಟ್ಟು ಸೇತುವೆ ನಿರ್ಮಾಣಕ್ಕೆ ನಿಮ್ಮ ಅಪ್ಪನ ಮನೆಯಿಂದ ಹಣವನ್ನು ತಂದಿಲ್ಲ ಎಂದು ಹೇಳುತ್ತಾ ಹೋದರೆ ಅಭಿವೃದ್ಧಿ ಹೇಗೆ ಸಾಧ್ಯ. ತಾವು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಮನೆಯಿಂದ ಹಣ ತಂದಿದ್ದೀರಾ ಎಂದು ಜನರು ಪ್ರಶ್ನಿಸಿದರೆ ಎನು ಉತ್ತರ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಸಂಸದರು ಅಭಿವೃದ್ಧಿಗೆ ಶ್ರಮಿಸದೆ ಇದ್ದಿದ್ದರೆ ಶಿವಮೊಗ್ಗ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ಹೆಚ್ಚಿನ ರೈಲ್ವೆ ಸಂಪರ್ಕ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಸಾಧ್ಯವಾಗುತ್ತಿರಲಿಲ್ಲ. ಶಾಸಕರು ತಮ್ಮ ವರ್ತನೆಯನ್ನು ಹೀಗೆ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಕುಮಾರ್, ಮಾಮ್ಕೋಸ್ ನಿರ್ದೇಶಕ ಭರ್ಮಪ್ಪ, ಯಡೇಹಳ್ಳಿ ಗ್ರಾಪಂ ಅಧ್ಯಕ್ಷ ನಾಗರತ್ನ, ಮಾಜಿ ಉಪಾಧ್ಯಕ್ಷ ಶಿವಾನಂದ್ ಉಪಸ್ಥಿತರಿದ್ದರು.