ಶೈಕ್ಷಣಿಕ ಸುಧಾರಣೆಗಾಗಿ ಸಮುದಾಯದ ಸಹಭಾಗಿತ್ವ ಅಗತ್ಯ: ದಿವ್ಯ ಪ್ರಭು

KannadaprabhaNewsNetwork |  
Published : Jul 18, 2025, 12:48 AM IST
16ಡಿಡಬ್ಲೂಡಿ5ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿದರು.  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದ ಒಟ್ಟಾರೆ ಪ್ರಮಾಣ ಸುಧಾರಿಸುತ್ತಿದ್ದರೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಉತ್ತೀರ್ಣತೆಯ ಪ್ರಮಾಣವು ಸರಾಸರಿಗಿಂತ ಕಡಿಮೆ ಇರುವುದು ಆತಂಕಕಾರಿ ವಿಷಯ. ಈ ಶೈಕ್ಷಣಿಕ ಅಸಮಾನತೆ ಹೋಗಲಾಡಿಸಿ, ಈ ಸಮುದಾಯದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ತಕ್ಷಣದ ಕ್ರಮಗಳು ಅಗತ್ಯವಾಗಿವೆ.

ಧಾರವಾಡ: ಜಿಲ್ಲೆಯಲ್ಲಿ ಶೈಕ್ಷಣಿಕ ಸುಧಾರಣೆ ಹಾಗೂ ಕಲಿಕಾ ಗುಣಮಟ್ಟ ಹೆಚ್ಚಿಸಲು ಮಿಷನ್ ವಿದ್ಯಾಕಾಶಿ ಯೋಜನೆಯಡಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ದಾಖಲಾಗಿ, ಗೈರು ಹಾಜರಿರುವ ಮಕ್ಕಳ ಮನೆಗೆ ಭೇಟಿ ನೀಡಿ, ಮನ ಒಲಿಸುವ ಮತ್ತು ಪ್ರೋತ್ಸಾಹಿಸುವ ಕಾರ್ಯಕ್ಕಾಗಿ ಸಮುದಾಯದ ಸಹಭಾಗಿತ್ವವನ್ನು ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಬಯಸುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ, ಮರಳಿ ಶಾಲೆಗೆ ಸೇರಿಸುವಲ್ಲಿ ಸಮುದಾಯಗಳ ಸಹಭಾಗಿತ್ವ ಕಾರ್ಯಕ್ರಮದಡಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರಮುಖರ ಮತ್ತು ವಿವಿಧ ಸರ್ಕಾರಿ ಸಮಿತಿಗಳ ಸದಸ್ಯರ, ಪ್ರತಿನಿಧಿಗಳ ಸಭೆ ಜರುಗಿಸಿದ ಅವರು, ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 37.08 ರಷ್ಟು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಮತ್ತು ಶೇ. 35.24 ರಷ್ಟು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಹಾಗೂ ಶೇ. 49.05 ರಷ್ಟು ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ಸಂಖ್ಯೆಗೆ ಹೋಲಿಸಿದಾಗ ಇದು ಕಡಿಮೆ. ಈ ಹಿನ್ನಲೆಯಲ್ಲಿ ಶಾಲೆಗೆ ದಾಖಲಾಗಿರುವ ಪ್ರತಿ ಮಗು ಶಾಲೆಗೆ ಬಂದು ಉತ್ತಮ ಶೈಕ್ಷಣಿಕ ಪ್ರಗತಿ ಹೊಂದಲು ಈ ಸಮುದಾಯಗಳ ಪ್ರಮುಖರ ಹಾಗೂ ಹಿರಿಯರ ಸಹಕಾರ ಅಗತ್ಯವಿದೆ ಎಂದರು.

2024-25ನೇ ಸಾಲಿಗೆ ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ 1 ರಿಂದ 10ನೇ ತರಗತಿಯ ವರೆಗೆ ಒಟ್ಟು 3,39,109 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಪೈಕಿ 33,588 ಸಾಮಾನ್ಯ ವರ್ಗದ, 35,861 ಪರಿಶಿಷ್ಟ ಜಾತಿ, 17,977 ಪರಿಶಿಷ್ಟ ಪಂಗಡ ಮತ್ತು 2,51,683 ಹಿಂದುಳಿದ ವರ್ಗಗಳ ಹಾಗೂ 89,963 ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇವರೆಲ್ಲರೂ ಶಾಲೆಗೆ ಬರಲು ಆಯಾ ಸಮುದಾಯದ ನಾಯಕರು ಗ್ರಾಮವಾರು, ತಾಲೂಕುವಾರು ಅಧಿಕಾರಿಗಳೊಂದಿಗೆ ಸಹಕರಿಸಿ, ಪ್ರತಿ ಮಗುವಿನ ಮನೆಗೆ ಭೇಟಿ ನೀಡಿ, ಅವರ ಪಾಲಕರ ಮನ ಒಲಿಸುವ ಕಾರ್ಯ ಮಾಡಬೇಕಿದೆ ಎಂದರು.

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದ ಒಟ್ಟಾರೆ ಪ್ರಮಾಣ ಸುಧಾರಿಸುತ್ತಿದ್ದರೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಉತ್ತೀರ್ಣತೆಯ ಪ್ರಮಾಣವು ಸರಾಸರಿಗಿಂತ ಕಡಿಮೆ ಇರುವುದು ಆತಂಕಕಾರಿ ವಿಷಯ. ಈ ಶೈಕ್ಷಣಿಕ ಅಸಮಾನತೆ ಹೋಗಲಾಡಿಸಿ, ಈ ಸಮುದಾಯದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ತಕ್ಷಣದ ಕ್ರಮಗಳು ಅಗತ್ಯವಾಗಿವೆ. ಫಲಿತಾಂಶದಲ್ಲಿ ಹಿಂದುಳಿಯಲು ಕಾರಣಗಳನ್ನು ಮತ್ತು ಸರ್ಕಾರ, ಶಿಕ್ಷಣ ಇಲಾಖೆ, ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳನ್ನು ಶಾಲಾ ಮಟ್ಟದಲ್ಲಿ ಆಯೋಜಿಸಲು ತಕ್ಷಣದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಪೋಷಕರಲ್ಲಿನ ಬಡತನ ಮತ್ತು ಅನಕ್ಷರತೆ, ಮನೆಯಲ್ಲಿ ಓದಲು ಪೂರಕ ವಾತಾವರಣದ ಕೊರತೆ ಇರುವುದರಿಂದ ಮಕ್ಕಳು ಕೃಷಿ ಅಥವಾ ಇತರೆ ಕೂಲಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ಶಾಲೆಗೆ ಬರದೆ ಇರಲು ಕಾರಣವಾಗಿದೆ. ಅದರಿಂದ ಸೂಕ್ತವಾಗಿ ಪರಿಶೀಲಿಸಿ, ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಶುಭ ಪಿ., ಡಿಡಿಪಿಐ ಎಸ್.ಎಸ್.ಕೆಳದಿಮಠ, ಡಾ. ರೇಣುಕಾ ಅಮಲಜೇರಿ ಮಾತನಾಡಿದರು. ವಿವಿಧ ಸಮಾಜದ ಮುಖಂಡರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!