ಬ್ಯಾಡಗಿ: ಗಜೇಂದ್ರಗಡ- ಸೊರಬ ರಾಜ್ಯ ಹೆದ್ದಾರಿ(ಬ್ಯಾಡಗಿ ಮುಖ್ಯರಸ್ತೆ) ಸುಮಾರು 750 ಮೀ ಅಗಲೀಕರಣ ಪ್ರಕ್ರಿಯೆ ಮುಕ್ತಾಯವಾಗುವವರೆಗೂ ರಿಂಗ್ ರೋಡ್ ಅಥವಾ ಬೈಪಾಸ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಜಿಲ್ಲಾಡಳಿತಕ್ಕೆ ಎಚ್ಚರಿಸಿದರು.
ಹೋರಾಟದ ಭಾಗವಾಗಿ ರೈತ ಸಂಘಟನೆ: ಮುಖ್ಯರಸ್ತೆ ಅಗಲೀಕರಣ ಆಗಬೇಕೆನ್ನುವ ಹೋರಾಟದ ಭಾಗವಾಗಿ ನಾವು ಕೂಡ ಅಗಲೀಕರಣದಲ್ಲಿ ಪಾಲ್ಗೊಂಡಿದ್ದೇವೆ. ಕರ್ನಾಟಕ ಸೇರಿದಂತೆ ನೆರೆಯ ಆಂಧ್ರ ಮತ್ತು ತೆಲಂಗಾಣದಿಂದ ಮೆಣಸಿನಕಾಯಿ ಮಾರಾಟಕ್ಕೆ ಬರುವ ರೈತರಿಗೆ ಕಿಷ್ಕಿಂಧೆಯಾಗಿರುವ ಮುಖ್ಯರಸ್ತೆಯಿಂದ ಬಹಳಷ್ಟು ತೊಂದರೆಯಾಗಿದೆ. ಇದನ್ನು ಸರಿಪಡಿಸುವ ಬದಲು ಬ್ಯಾಡಗಿ ಸೇರಿದಂತೆ ಸುತ್ತಲಿನ ರೈತರಿಗೆ ಮತ್ತಷ್ಟು ತೊಂದರೆ ಕೊಡಲು ನಿರ್ಧರಿಸಲು ಮುಂದಾದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಗಂಗಣ್ಣ ಎಲಿ ಮಾತನಾಡಿ, ಮುಖ್ಯರಸ್ತೆ ಅಗಲೀಕರಣ ಸಮಿತಿ ವರ್ತಕರ ಸಂಘ, ರೈತ ಸಂಘ ಸೇರಿದಂತೆ ನೂರಾರು ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜೂ. 10ರಂದು ಬೇಷರತ್ತಾಗಿ ಹೈಕೋರ್ಟ್‌ನಲ್ಲಿ ಮೊಕದ್ದಮೆಗಳನ್ನು ಹಿಂಪಡೆಯುವುದಾಗಿ ಹೇಳಿದ್ದ ಮುಖ್ಯರಸ್ತೆಯಲ್ಲಿನ ಮಾಲೀಕರು ಇದೀಗ ಇಲ್ಲ ಸಲ್ಲದ ಕಾರಣಗಳನ್ನು ಮುಂದಿಟ್ಟು ಕ್ಯಾತೆ ತೆಗೆಯುತ್ತಿರುವುದು ಎಷ್ಟರಮಟ್ಟಿಗೆ ಸರಿ? ಸಾರ್ವಜನಿಕವಾಗಿ ಕೊಟ್ಟ ಮಾತಿಗೆ ತಪ್ಪಿದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾದ್ಯಂತ ಕರೆ ಕೊಡುವ ಮೂಲಕ ಮತ್ತೆ ಮುಖ್ಯರಸ್ತೆಯಲ್ಲಿನ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಎಚ್ಚರಿಸಿದರು.ಮೌನೇಶ ಕಮ್ಮಾರ ಮಾತನಾಡಿದರು. ಜಾನ್ ಪುನೀತ ಸೇರಿದಂತೆ ಇತರರಿದ್ದರು.