ಮಲೆನಾಡಿನ ಭೂಮಿ ಸಮಸ್ಯೆ ಶಾಸಕರಿಗೆ ಅರ್ಥವಾಗಲ್ಲ

KannadaprabhaNewsNetwork |  
Published : Aug 02, 2026, 02:00 AM IST
ಫೋಟೋ 31 ಟಿಟಿಎಚ್ 02: ತೀರ್ಥಹಳ್ಳಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯ ಉದ್ಘಾಟನೆ | Kannada Prabha

ಸಾರಾಂಶ

ತೀರ್ಥಹಳ್ಳಿ ಮಲೆನಾಡು ಭಾಗದ ಭೂಮಿಯ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ಮುಂದಾದರೆ ಕೆಲವು ಶಾಸಕರಿಗೆ ಇದು ಅರ್ಥವಾಗುವುದಿಲ್ಲ. ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದರೆ ನಗರಗಳ ರಿಯಲ್ ಎಸ್ಟೇಟ್ ವ್ಯವಹಾರದ ರೀತಿ ಪರಿಗಣಿಸುತ್ತಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಬೇಸರಿಸಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಮಲೆನಾಡು ಭಾಗದ ಭೂಮಿಯ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ಮುಂದಾದರೆ ಕೆಲವು ಶಾಸಕರಿಗೆ ಇದು ಅರ್ಥವಾಗುವುದಿಲ್ಲ. ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದರೆ ನಗರಗಳ ರಿಯಲ್ ಎಸ್ಟೇಟ್ ವ್ಯವಹಾರದ ರೀತಿ ಪರಿಗಣಿಸುತ್ತಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಬೇಸರಿಸಿದರು.

ಶುಕ್ರವಾರ ಮಾಧವ ಮಂಗಲ ಸಭಾಂಗಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಅರಣ್ಯ, ಕಂದಾಯ, ಮುಳುಗಡೆ ಯೋಜನೆಯ ರೈತರ ಸಮಸ್ಯೆಗೆ ಸ್ಪಂದನೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಾಸಕನಾದ ನನಗೆ ಹಕ್ಕುಪತ್ರ ವಿತರಿಸುವಾಗ ಸಿಗುವ ಸಂತೋಷ ಯಾವ ಸಭೆಯೂ ಕೊಡುವುದಿಲ್ಲ ಎಂದರು.

ಸೊಪ್ಪಿನಬೆಟ್ಟ, ಅರಣ್ಯದ ಸಮಸ್ಯೆ ಪರಿಹಾರ ಆಗದ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಹಕ್ಕುಪತ್ರ ವಿತರಿಸಲು ಆಗುತ್ತಿಲ್ಲ. ಅಧಿಸೂಚಿತ ಪ್ರದೇಶ ಎಂಬುದು ಸುಳ್ಳುಗಳಿಂದ ಕೂಡಿದೆ. ಕಾನೂನಿಗೆ ತಕ್ಕಂತೆ ಅಧಿಕಾರಿಗಳು ಸಭೆ ನಡೆಸಿ ಸಹಿ ಪಡೆದು ಅಧಿಸೂಚನೆ ಹೊರಡಿಸುತ್ತಾರೆ. ಇದರಿಂದ ಸ್ಥಳೀಯ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾನೂನು ಬಿಟ್ಟು ಅಧಿಕಾರಿಗಳು ಏನನ್ನು ಮಾಡಲು ಆಗುವುದಿಲ್ಲ. ಸ್ಥಳೀಯರ ನೆರವಿನಿಂದ ಅರಣ್ಯ ಇಲಾಖೆ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಲು ಸಾಧ್ಯ. ಈಗಾಗಲೇ ನಿಷ್ಕ್ರಿಯಗೊಂಡ ಗ್ರಾಮ ಅರಣ್ಯ ಸಮಿತಿಯನ್ನು ಪುನಶ್ಚೇತನಕ್ಕೆ ಒತ್ತು ನೀಡಲಾಗುವುದು. ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ಗಿಡ ನೆಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಶಿವಮೊಗ್ಗ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಆರ್. ಅಜ್ಜಯ್ಯ ಹೇಳಿದರು.

ಪಾರಂಪರಿಕ ಅರಣ್ಯ ಕಾನೂನು ಇದ್ದರು ಇಂದಿಗೂ ಹಕ್ಕುಗಳು ಮಾತ್ರ ಸಿಕ್ಕಿಲ್ಲ. ನ್ಯಾಯಾಲಯಕ್ಕೆ ಹೋದರೆ ಸಂತ್ರಸ್ತರನ್ನು ವಾಪಸು ಕಳಿಸುತ್ತದೆ. ವಕೀಲನಾದ ನನಗೆ ನ್ಯಾಯಾಲಯದ ಮೇಲಿನ ಭರವಸೆ ಕಳೆದು ಹೋಗಿದೆ. ಮಾಜಿ ಶಾಸಕ ಕಡಿದಾಳು ದಿವಾಕರ್, ನಾನು, ಆರಗ ಜ್ಞಾನೇಂದ್ರ ಮಂಜೂರು ಮಾಡಿಸಿದ ಸುಮಾರು 400ಕ್ಕೂ ಹೆಚ್ಚು ಬಗರ್ ಹುಕುಂ ಹಕ್ಕುಪತ್ರ ರದ್ದಾಗುವ ಸ್ಥಿತಿಗೆ ತಲುಪಿದೆ. ಪಕ್ಷಾತೀತವಾಗಿ ನಾವೆಲ್ಲರೂ ಸಣ್ಣ ಒತ್ತುವರಿದಾರರ ಪರವಾಗಿದ್ದೇವೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

“ಒಂದು ಹೆಕ್ಟೇರ್ ಪ್ರದೇಶದಲ್ಲಿ 25 ಮರಗಳು ಬೆಳೆದಿದ್ದರೆ ಅದನ್ನು ಡೀಮ್ಡ್ ಫಾರೆಸ್ಟ್ ಪಟ್ಟಿಗೆ ಸೇರಿಸಲಾಗುತ್ತದೆ. ಮಲೆನಾಡಿನ ವಾಸದ ಮನೆಯೆಂದರೆ ಸೌಧೆ ಕೊಟ್ಟಿಗೆ, ಒಕ್ಕಲು ಕಣ, ಗೊಬ್ಬರ ಗುಂಡಿ, ಕೋಳಿ ಒಡ್ಡಿ, ಗಾಡಿ, ಜಾನುವಾರು ಕೊಟ್ಟಿಗೆ ಸೇರಿ ಒಂದು ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಈ ಪ್ರದೇಶದಲ್ಲಿಯೇ ಕನಿಷ್ಠ 30ಕ್ಕೂ ಹೆಚ್ಚು ಮರಗಳು ಬೆಳೆದಿರುತ್ತಾರೆ. ದಾಖಲೆ ಇಲ್ಲದ ಕಾರಣ ಅವೆಲ್ಲವೂ ಪರಿಭಾವಿತ ಅರಣ್ಯಕ್ಕೆ ಸೇರಿಕೊಳ್ಳುತ್ತಿದೆ. ಹಾಗಾಗಿ ದಾಖಲೆ ಪರಿವೀಕ್ಷಿಸಿ ಕಾನೂನು ಪ್ರಧಾನ ಮಾಡುವ ಭಾರತದ ಮುಖ್ಯ ನ್ಯಾಯಾಧೀಶರಿಗೆ ದೇಶ ಪೂರ್ಣ ಗೊತ್ತಾ? ಎಂದು ವಿಷಯ ಮಂಡಿಸಿದ ರೈತ ಹೋರಾಟಗಾರ ಜಿ.ಎಸ್.ರಾಜೇಂದ್ರ ಪ್ರಶ್ನಿಸಿದರು.

ಮುಳುಗಡೆ ಸಂತ್ರಸ್ತರನ್ನು ಒಕ್ಕಲೆಬ್ಬಿಸಿದ ಸಂದರ್ಭದಲ್ಲಿ ರಾಜಕಾರಣಿಗಳು ಮನಸೋ ಇಚ್ಛ ಬುರುಡೆ ಬಿಟ್ಟಿದ್ದರು. ಇದರ ನಡುವೆಯೂ ಹೆಚ್ಚುವರಿ ಪರಿಹಾರ ನೀಡಿದ ಚಂದ್ರೇಗೌರಡರ ಎಂ.ಸಿ.ಹಳ್ಳಿ ನಿಜಕ್ಕೂ ಸ್ಮರಣಾರ್ಹ. ಲಕ್ಷಾಂತರ ಎಕರೆ ಅರಣ್ಯ ನಾಶಕ್ಕೆ ಕಾರಣವಾದ ಜಲಾಶಯಗಳ ನಿರ್ಮಾಣದಲ್ಲಿ ಸತ್ತವರ ಪರವಾಗಿ ಪೊಲೀಸ್ ಕೇಸ್ ಕೂಡ ದಾಖಲಾಗಿಲ್ಲ. ಸತ್ತವರು, ಕಾರ್ಮಿಕರು, ಭೂಮಿ ಕಳೆದುಕೊಂಡ ಸಂತ್ರಸ್ತರ ಹೆಸರಿನಲ್ಲಿ ಕನಿಷ್ಟ ನಾಮಫಲಕವನ್ನಾದರು ಹಾಕಬೇಕು ಎಂದು ಹಿರಿಯ ಪತ್ರಕರ್ತ, ಲೇಖಕ ಪ್ರಭಾಕರ ಕಾರಂತ ಒತ್ತಾಯಿಸಿದರು.

ರೈತ ಹೋರಾಟಗಾರ ಕೋಡ್ಲು ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಯುವ ಸ್ಪಂದನೆಯಾಗಿ ಬಿಜೆಪಿ ಅಧ್ಯಕ್ಷ ನವೀನ್ ಹೆದ್ದೂರು, ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ ಮಾತನಾಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಎನ್ ಶೆಟ್ಟಿ, ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಮುನ್ನೂರು, ತಹಸೀಲ್ದಾರ್ ರಂಜಿತ್ ಎಸ್, ಇಓ ಶೈಲಾ ಎನ್, ಪ್ರಮುಖರಾದ ಟೆಲೆಕ್ಸ್ ರವಿಕುಮಾರ್, ರಂಜಿತ್, ಸತ್ಯನಾರಾಯಣ ಇದ್ದರು. ಸಭೆಯಲ್ಲಿ ಸಾಧಕರಿಗೆ ಸನ್ಮಾನ ನಡೆಯಿತು.

-----------------

ಫೋಟೋ 31 ಟಿಟಿಎಚ್ 02: ತೀರ್ಥಹಳ್ಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರಣ ಸಂಸ್ಕೃತಿಯೇ ಕನ್ನಡಿಗರ ಅಸ್ಮಿತೆ: ಡಾ. ನಿಂಗು ಸೊಲಗಿ
ಶರಣ ಸಾಹಿತ್ಯ ಬದುಕಿಗೆ ದಾರಿದೀಪ: ಶಿವಕುಮಾರ ಗೌಡ ಪಾಟೀಲ