ಕುಡಿಯುವ ನೀರು ಪೂರೈಸುವಲ್ಲಿ ಶಾಸಕರು ವಿಫಲ: ಶಾಂತಕುಮಾರ್

KannadaprabhaNewsNetwork | Updated : May 24 2025, 12:29 AM IST
ನಗರಕ್ಕೆ ಕುಡಿಯುವ ನೀರು ಪೂರೈಸುವಲ್ಲಿ ಇಲ್ಲಿನ ಶಾಸಕರು ಹಾಗೂ ನಗರಸಭೆ ಪೌರಾಯುಕ್ತರು ವಿಫಲರಾಗಿದ್ದು ನಗರದಲ್ಲಿ ಹೇಮಾವತಿ ನೀರು ನಿಂತು ಹೋಗಿ ವರ್ಷಗಳೇ ಕಳೆದಿದ್ದರೂ ಜನತೆಗೆ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಮುಂದಾಗಿಲ್ಲ ಆದ್ದರಿಂದ ಮತ್ತೆ ಹೋರಾಟ ಮುಂದುವರೆಸುವುದಾಗಿ ತಾಲೂಕು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದರು.
Follow Us

ಕನ್ನಡಪ್ರಭ ವಾರ್ತೆ ತಿಪಟೂರು

ನಗರಕ್ಕೆ ಕುಡಿಯುವ ನೀರು ಪೂರೈಸುವಲ್ಲಿ ಇಲ್ಲಿನ ಶಾಸಕರು ಹಾಗೂ ನಗರಸಭೆ ಪೌರಾಯುಕ್ತರು ವಿಫಲರಾಗಿದ್ದು ನಗರದಲ್ಲಿ ಹೇಮಾವತಿ ನೀರು ನಿಂತು ಹೋಗಿ ವರ್ಷಗಳೇ ಕಳೆದಿದ್ದರೂ ಜನತೆಗೆ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಮುಂದಾಗಿಲ್ಲ ಆದ್ದರಿಂದ ಮತ್ತೆ ಹೋರಾಟ ಮುಂದುವರೆಸುವುದಾಗಿ ತಾಲೂಕು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಮಳೆಯಾಗಿದ್ದರೂ, ಹೇಮಾವತಿ ನೀರು ಹರಿದಿದ್ದರೂ ನಗರಕ್ಕೆ ಕುಡಿಯುವ ನೀರಿಗೆ ಸಮಸ್ಯೆಯುಂಟಾಗಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆಗೆ ಯುಜಿಡಿ ಮಿಶ್ರಿತ ನೀರು ಸೇರ್ಪಡೆಯಾಗಿ ಇಷ್ಟು ವರ್ಷವಾದರೂ ಸರಿಪಡಿಸದ ಕಾರಣ ನಗರಕ್ಕೆ ನೀರಿನ ಸಮಸ್ಯೆ ತಲೆದೋರಿದೆ. ಈಗ ನಮಗೆ ಆರು ತಿಂಗಳು ಕಾಲಾವಕಾಶ ಕೋಡಿ ಎನ್ನುವ ಶಾಸಕರು ಒಂದು ವರ್ಷದಿಂದ ಏನು ಮಾಡುತ್ತಿದ್ದರು. ನೊಣವಿಕೆರೆಯಿಂದ ನೀರು ತರುತ್ತೇನೆಂದು ಹೇಳಿ ದಿನ ದೂಡುತ್ತಾ ಬರುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ನಗರವಾಸಿಗಳ ಗತಿಏನು. ಈ ಸಂಬಂಧ ನಾನು ಹೋರಾಟ, ಧರಣಿ ಮಾಡಿ ಗಮನಸೆಳೆದಿದ್ದ ಪರಿಣಾಮ ಜಿಲ್ಲಾಧಿಕಾರಿಗಳು ಈಚನೂರು ಕೆರೆ ವೀಕ್ಷಣೆ ಮಾಡಿ ಹೋದರು. ಅವರು ಸಹ ಯಾವುದೇ ಕ್ರಮಕೈಗೊಳ್ಳಲಿಲ್ಲ. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ನಗರದ ಜನತೆಯ ಕುಡಿಯುವ ನೀರಿಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಈಚನೂರು ಕೆರೆ ಅಭಿವೃದ್ಧಿಗಾಗಿ ಕೋಟ್ಯಂತರ ರು. ಅನುದಾನ ತರಲಾಗಿದೆ ಆದರೆ ಆ ಹಣ ಏನಾಯಿತು. ಇನ್ನೂ ತಿಪಟೂರು ಅಮಾನಿಕೆರೆ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿ ಒಂದು ವರ್ಷವಾಗಿದ್ದು ಈ ಬಗ್ಗೆಯೂ ಮಾಹಿತಿ ಇಲ್ಲ. ಜನರ ತೆರಿಗೆ ಹಣ ನೀರಿನಂತೆ ಪೋಲಾಗುತ್ತಿದ್ದು ವಿನಃ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಹಣ ಕೊಟ್ಟು ಕುಡಿಯುವ ನೀರು ಕೊಂಡುಕೊಳ್ಳುವಂತಹ ಸ್ಥಿತಿ ಬಂದಿದೆ. ಕೂಡಲೆ ನೀರಿನ ವ್ಯವಸ್ಥೆ ಕಲ್ಪಿಸಬೇಕು ಇಲ್ಲವಾದರೆ ಮತ್ತೆ ಹೋರಾಟದ ಮೂಲಕ ಉತ್ತರ ಕೊಡುವುದಾಗಿ ಎಚ್ಚರಿಸಿದರು. ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಿ : ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಹೋರಾಟದ ಮೂಲಕ ಸ್ಥಗಿತಗೊಳಿಸಿದ್ದರೂ ಮತ್ತೆ ದೌರ್ಜನ್ಯದಿಂದ ಕಾಮಗಾರಿ ಮುಂದುವರೆಸಲಾಗುತ್ತಿದೆ. ಲಿಂಕ್ ಕೆನಾಲ್ ಮೂಲಕ ಹೇಮೆ ನೀರನ್ನು ಮಾಗಡಿಗೆ ತೆಗೆದುಕೊಂಡು ಹೋದರೆ ನಮ್ಮ ಜಿಲ್ಲೆ ರೈತರ ಗತಿಏನು?. ಸರ್ಕಾರ ತಾಂತ್ರಿಕ ಕಮಿಟಿ ರೂಪಿಸುವ ಬಗ್ಗೆ ಸುಳ್ಳು ಹೇಳಿ ಈಗ ಏಕಾಏಕಿ ಕಾಮಗಾರಿ ಪ್ರಾರಂಭಿಸಿರುವುದು ಸರಿಯಲ್ಲ. ಕೂಡಲೆ ಈ ಭಾಗದ ರೈತರು ಒಗ್ಗಟ್ಟಾಗಿ ಕಾಮಗಾರಿ ನಡೆಯದಂತೆ ತಡೆಯಬೇಕಿದೆ ಎಂದು ಶಾಂತಕುಮಾರ್ ಒತ್ತಾಯಿಸಿದರು. ಸುದ್ದಿ ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಎಂ.ಎಸ್. ಶಿವಸ್ವಾಮಿ, ತಾ. ಪ್ರಧಾನ ಕಾರ್ಯದರ್ಶಿ ನಟರಾಜು, ನೊಣವಿನಕೆರೆ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಲೋಕೇಶ್, ನೇತ್ರಾನಂದ, ಚನ್ನೇಗೌಡ, ಲೋಕೇಶ್ ಬಜಗೂರು ಮತ್ತಿತರರಿದ್ದರು.