ಹೊಸಕೋಟೆ: ನಗರದಲ್ಲಿ ಬಿ.ಎನ್.ಬಚ್ಚೇಗೌಡರು ಶಾಸಕರಾಗಿದ್ದ ಅವಧಿಯಲ್ಲಿ ಈದ್ಗಾ ಮೈದಾನಕ್ಕೆ ಜಮೀನನ್ನು ಮಂಜೂರು ಮಾಡಿಸಿಕೊಟ್ಟಿದ್ದು, ಈಗ ಈದ್ಗಾ ಮೈದಾನಕ್ಕೆ ವಕ್ಛ್ ಬೋರ್ಡ್ನಿಂದ ಸುಸಜ್ಜಿತ ಕಾಂಪೌಂಡ್ ನಿರ್ಮಿಸಿಕೊಡುವುದಾಗಿ ಶಾಸಕ ಶರತ್ ಬಚ್ಚೇಗೌಡ ಭರವಸೆ ನೀಡಿದರು.
ನಗರದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಸಾಕಷ್ಟು ಸಾಮರಸ್ಯದಿಂದ ಜೀವನ ಮಾಡುತ್ತಿದ್ದು ಪರಸ್ಪರ ಸಹೋದರರ ಮನೋಭಾವ ಹೊಂದಿದ್ದಾರೆ. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ದೇಶದಲ್ಲಿ ಜಾತಿ, ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುವವರ ನಡುವೆ ಸಿಲುಕಿ ಪರಸ್ಪರ ದ್ವೇಷ, ಅಸೂಯೆ ಜೊತೆಗೆ ಧರ್ಮದ ಹೆಸರಿನಲ್ಲಿ ಕಿತ್ತಾಡ ಮಾಡುವ ಪರಿಸ್ಥಿತಿ ಬಂದೊದಗಿದೆ. ಆದ್ದರಿಂದ ಎಂತಹ ಸಂದರ್ಭದಲ್ಲಿ ಕೂಡ ಹಿಂದೂ ಮುಸ್ಲಿಂ ಬಾಂಧವರು ಸಹೋದರರಂತೆ ಬದುಕೋಣ ಎಂದರು.ಇರಾನ್‌ನಲ್ಲಿ ಶಾಂತಿ ನೆಲೆಸಲು ಪ್ರಾರ್ಥಿಸೋಣ:ಇರಾನ್ ಹಾಗೂ ಭಾರತ ದೇಶದ ನಡುವೆ ಶತಮಾನಗಳಿಂದಲೂ ವ್ಯಾಪಾರ ವಹಿವಾಟಿನಲ್ಲಿ ಉತ್ತಮ ಬಾಂಧವ್ಯವಿಟ್ಟುಕೊಂಡು ಸಹೋದರರಂತೆ ಬದುಕುತ್ತಿದ್ದೇವೆ. ಪ್ರಸಕ್ತ ಸನ್ನಿವೇಶದಲ್ಲಿ ಅಮೆರಿಕಾ-ಇರಾನ್ ನಡುವೆ ನಡೆಯುತ್ತಿರುವ ಯುದ್ದದಿಂದ ಇರಾನ್ ಅಕ್ಷರಶಃ ನಲುಗಿ ಹೋಗಿದೆ. ಆದಷ್ಟು ಬೇಗ ಇರಾನ್‌ನಲ್ಲಿ ಶಾಂತಿ ನೆಲೆಸಲಿ ಎಂದು ಪವಿತ್ರ ರಂಜಾನ್ ಸಂದರ್ಭದಲ್ಲಿ ದೇವರಲ್ಲಿ ಪ್ರಾರ್ಥಿಸೋಣ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ವಕ್ಫ್‌ಬೋರ್ಡ್ ಮಾಜಿ ಜಿಲ್ಲಾಧ್ಯಕ್ಷ ನಿಸಾರ್ ಅಹಮದ್ ಮಾತನಾಡಿ, ಶಾಸಕ ಶರತ್ ಬಚ್ಚೇಗೌಡರು ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿಗೆ ಅಗತ್ಯ ಅನುದಾನವನ್ನು ನಿರಂತರವಾಗಿ ಒದಗಿಸುತ್ತಿದ್ದು ಸಮುದಾಯ ಒಗ್ಗಟ್ಟಾಗಿ ಅವರ ಬೆನ್ನಿಗೆ ನಿಂತು ಸವಲತ್ತುಗಳನ್ನು ಕೇಳಿ ಪಡೆಯಬೇಕು ಎಂದರು.ಟೌನ್ ಕಾಂಗ್ರೆಸ್ ಅಧ್ಯಕ್ಷ ಭೈರೇಗೌಡ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಸುಬ್ಬರಾಜ್, ಮಾಜಿ ಅದ್ಯಕ್ಷ ಸಿ.ಜಯರಾಜ್, ಡಿವೈಎಸ್ಪಿ ಮಲ್ಲೇಶ್, ಮುಸ್ಲಿಂ ಹಿರಿಯ ಮುಖಂಡ ಇಮ್ತಿಯಾಜ್ ಪಾಷ, ವಕ್ಛ್ಬೋರ್ಡ್ ಮಾಜಿ ಜಿಲ್ಲಾಧ್ಯಕ್ಷ ನಿಸಾರ್ ಅಹಮದ್, ಅಹ್ಲೆ ಸುನಾತುಲ್ ಜಮತ್ ಜಾಮಿಯಾ ಮಸೀದಿ ಅಧ್ಯಕ್ಷ ಸಯ್ಯದ್ ನವಾಜ್, ಸದಸ್ಯರಾದ ಫೈಜಲ್ ಅಹಮದ್, ಎಜಾಜ್ ಅಹಮದ್, ಅಯಾಜ್ ಪಾಷ, ಜಾವಿದ್ ಪಾಷಾ, ನಯಾಜ್ ಅಹಮದ್, ಮೊಹಮದ್ ನವಾಜ್, ಮುಸ್ಲಿಂ ಮುಖಂಡರಾದ ಅಪ್ಸರ್ ಪಾಷಾ, ಇರ್ಷಾದ್ ಅಹಮದ್, ಅನ್ಸರ್ ಪಾಷಾ, ಪರ್ವೀಜ್ ಅಹಮದ್, ಆಖಿಲ್ ಅಹಮದ್ ಹಾಜರಿದ್ದರು.
ಹೊಸಕೋಟೆಯ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಭಾಗವಹಿಸಿ ಶುಭಾಶಯ ಕೋರಿದರು.