ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಜೆಡಿಎಸ್ ಕಾರ್ಯಕರ್ತರು ಮತ್ತು ಹೊಸಹೊಳಲು ಗ್ರಾಮ ಮುಖಂಡರೊಂದಿಗೆ ತಮ್ಮ ಕುಲದೈವ ಕೋಟೆ ಭೈರವೇಶ್ವರನ ಸನ್ನಿಧಿಗೆ ಆಗಮಿಸಿದ ಶಾಸಕರು ಭಾರತೀಯ ಸೈನಿಕರಿಗೆ ಯಶಸ್ಸು ಕೋರಿ ವಿಶೇಷ ಅರ್ಚನೆ ಮತ್ತು ಪೂಜೆ ಸಲ್ಲಿಸಿದರು.
ಪೂಜೆ ನಂತರ ದೇವಾಲಯದ ಹೊರಭಾಗದಲ್ಲಿ ಭಾರತೀಯ ಸೈನಿಕರಿಗೆ ಮತ್ತು ಭಾರತ ಮಾತೆಗೆ ಜೈಕಾರ ಹಾಕಿದ ಶಾಸಕರು ಮತ್ತು ಅವರ ಬೆಂಬಲಿಗರ ಪಡೆ ಪಹಲ್ಗಾಂನಲ್ಲಿನ ಹಿಂದೂಗಳ ಹತ್ಯೆಗೆ ಪ್ರತಿಕಾರವಾಗಿ ಭಯೋತ್ಪಾದನೆಯ ಸಂಪೂರ್ಣ ನಿರ್ನಾಮಕ್ಕೆ ಮುಂದಾಗಿರುವ ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರದ ದಿಟ್ಟ ಹೆಜ್ಜೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.ಆಪರೇಷನ್ ಸಿಂದೂರ ಭಾರತೀಯ ಇತಿಹಾಸದಲ್ಲಿಯೇ ಒಂದು ಹೊಸ ಮೈಲಿಗಲ್ಲು. ಭಾರತೀಯ ಸೈನಿಕ ಪಡೆಗಳ ದಿಟ್ಟ ಹೋರಾಟ ಜಗತ್ತಿಗೆ ಗೋಚರವಾಗುತ್ತಿದೆ. ಪಾಕಿಸ್ತಾನ ನಡೆಸುತ್ತಿರುವ ಡ್ರೋನ್, ಕ್ಷಿಪಣಿ ಮತ್ತು ಮಿಸೈಲ್ ದಾಳಿಗೆ ಒಂದಿಂಚೂ ಬೆದರದೆ ಭಾರತೀಯ ಸೈನಿಕರು ದಿಟ್ಟ ಪ್ರತಿರೋಧ ವ್ಯಕ್ತಪಡಿ, ಪಾಕಿಸ್ತಾನದ ಒಳಗೆ ನುಗ್ಗಿ ತಮ್ಮ ಸೌರ್ಯ ಪ್ರದರ್ಶನ ಮಾಡಿ ಸಮಸ್ತ ಜಗತ್ತು ನಿಬ್ಬೆರಗಾಗುವಂತೆ ಮಾಡುತ್ತಿದ್ದಾರೆ ಎಂದರು.
ಎಲ್ಲ ಬಗೆಯ ಜಾತಿ, ಧರ್ಮ ಮತ್ತು ಪಕ್ಷ ಬೇದ ಮರೆತು ಭಾರತೀಯರೆಲ್ಲರನ್ನು ಆಪರೇಷನ್ ಸಿಂದೂರ ಒಂದುಗೂಡಿಸಿದೆಯಲ್ಲದೆ ಬದಲಾದ ಭಾರತದ ಅಂತಶಕ್ತಿಯನ್ನು ಜಗತ್ತಿಗೆ ಮುಂದೆ ಅನಾವರಣಗೊಳಿಸಿದೆ. ಹಿಂದೂ ಮಹಿಳೆಯರ ಸಿಂದೂರ ಅಳಿಸಿದ ಭಯೋತ್ಪಾದಕರು ನರಕ ಸೇರಿದ್ದಾರೆ ಎಂದರು.
ಈ ವೇಳೆ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕ ಎಚ್.ಕೆ.ಅಶೋಕ್, ಪುರಸಭಾ ಸದಸ್ಯ ಅಶೋಕ್, ತಾಪಂ ಮಾಜಿ ಸದಸ್ಯ ರಾಜು, ಪುರಸಭೆ ಮಾಜಿ ಸದಸ್ಯ ಗೋಪಾಲ, ಟಿಎಪಿಸಿಎಂಎಸ್ ನಿರ್ದೇಶಕ ಟಿ.ಬಲದೇವ, ವಿಎಸ್ ಎಸ್ ಎನ್ ನಿರ್ದೇಶಕ ಶ್ರೀಧರ, ಬೇಲದಕೆರೆ ನಂಜಪ್ಪ, ಚಿಕ್ಕೇಗೌಡ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.