ಬೆಂಗಳೂರು ದಕ್ಷಿಣದಲ್ಲಿ 2ನೇ ಏರ್ಪೋರ್ಟ್‌ ನಿರ್ಮಾಣಕ್ಕೆ ಶಾಸಕರ ಮನವಿ

KannadaprabhaNewsNetwork | Published : Oct 24, 2024 12:50 AM

ಸಾರಾಂಶ

ಕೆಐಎನಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಅದರಿಂದಾಗಿ ಬೆಂಗಳೂರು ನಗರ ಸಮೀಪದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಿಸಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಜಾಗ ಗುರುತಿಸುವ ಪ್ರಕ್ರಿಯೆ ಆರಂಭಿಸಿದೆ. ಸದ್ಯ ಕೆಐಎ ಬೆಂಗಳೂರು ಉತ್ತರ ಭಾಗದಲ್ಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದ ಒತ್ತಡ ಕಡಿಮೆ ಮಾಡಲು ಉದ್ದೇಶಿತ 2ನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಬೆಂಗಳೂರು ದಕ್ಷಿಣ ಭಾಗದಲ್ಲಿ ನಿರ್ಮಿಸುವಂತೆ ರಾಮನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಜನಪ್ರತಿನಿಧಿಗಳು ಮನವಿ ಮಾಡಿದ್ದಾರೆ.

ಶಾಸಕರಾದ ಎಚ್‌.ಸಿ.ಬಾಲಕೃಷ್ಣ, ಇಕ್ಬಾಲ್‌ ಹುಸೇನ್‌, ಪಿ.ಎಂ.ನರೇಂದ್ರಸ್ವಾಮಿ, ಪುಟ್ಟಣ್ಣ, ಎಸ್‌.ರವಿ, ಉದಯ್‌ಕುಮಾರ್‌, ದಿನೇಶ್‌ ಗೂಳಿಗೌಡ ಸೇರಿದಂತೆ ಇತರರು, ಬೆಂಗಳೂರು ದಕ್ಷಿಣ ಅಥವಾ ಹಳೇ ಮೈಸೂರು ಭಾಗದ ವಾಣಿಜ್ಯ ಚಟುವಟಿಕೆಗೆ ಉತ್ತೇಜನ ನೀಡುವ ಸಲುವಾಗಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರು ದಕ್ಷಿಣ ಭಾಗದಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ್‌ ಅವರಿಗೆ ಪತ್ರ ಬರೆದು ಕೋರಿದ್ದಾರೆ.

ಕೆಐಎನಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಅದರಿಂದಾಗಿ ಬೆಂಗಳೂರು ನಗರ ಸಮೀಪದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಿಸಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಜಾಗ ಗುರುತಿಸುವ ಪ್ರಕ್ರಿಯೆ ಆರಂಭಿಸಿದೆ. ಸದ್ಯ ಕೆಐಎ ಬೆಂಗಳೂರು ಉತ್ತರ ಭಾಗದಲ್ಲಿದೆ.

ಆದರೆ, ಅಲ್ಲಿಂದ ಸಂಚರಿಸುವ ಪ್ರಯಾಣಿಕರ ಪೈಕಿ ಅರ್ಧಕ್ಕೂ ಹೆಚ್ಚಿನ ಮಂದಿ ಬೆಂಗಳೂರು ದಕ್ಷಿಣ ಭಾಗದವರಾಗಿದ್ದಾರೆ. ಈ ಭಾಗದಲ್ಲಿ ಪ್ರಯಾಣಿಕರ ಸಂಚಾರಕ್ಕೆ ನಮ್ಮ ಮೆಟ್ರೋ ರೈಲು ಸಂಪರ್ಕ ಸಮರ್ಪಕವಾಗಿದೆ. ಜತೆಗೆ ನೈಸ್‌ ರಸ್ತೆಯು ವಿಮಾನನಿಲ್ದಾಣಕ್ಕೆ ಬರುವವರಿಗೆ ಸಂಚಾರ ದಟ್ಟಣೆಯ ಕಿರಿಕಿರಿ ತಪ್ಪಿಸಲಿದೆ. ಕಾವೇರಿ, ಅರ್ಕಾವತಿ ನದಿಗಳ ಜತೆಗೆ ಕಣ್ವ, ಮಂಚನಬೆಲೆ ಜಲಾಶಯಗಳಿದ್ದು ನೀರಿನ ಸಮಸ್ಯೆ ತಲೆದೂರುವುದಿಲ್ಲ. ಬೆಂಗಳೂರು ದಕ್ಷಿಣ ಭಾಗದ ಭೂ ಪ್ರದೇಶ ಸಮತಟ್ಟಾಗಿದೆ. ಈ ಎಲ್ಲ ಕಾರಣದಿಂದಾಗಿ ಬೆಂಗಳೂರು ದಕ್ಷಿಣ ಭಾಗ ವಿಮಾನನಿಲ್ದಾಣ ನಿರ್ಮಾಣಕ್ಕೆ ಸೂಕ್ತವಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರು- ಮೈಸೂರು ಹೆದ್ದಾರಿ ನಿರ್ಮಾಣದ ನಂತರ ರಾಮನಗರ, ಚನ್ನಪಟ್ಟಣ, ಮಂಡ್ಯ, ಮದ್ದೂರು ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿವೆ. ಹಾಗೆಯೇ, ಈ ಭಾಗದಲ್ಲಿ ಸೂಕ್ತ ಆತಿಥ್ಯ ವ್ಯವಸ್ಥೆ ಸೇರಿದಂತೆ ಸಮರ್ಪಕ ಮೂಲಸೌಕರ್ಯವಿದೆ. 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೈಸೂರು ರಸ್ತೆಯಲ್ಲಿ ಮಾಡಿದರೆ ಆರ್ಥಿಕ ಚಟುವಟಿಕೆ ಮತ್ತಷ್ಟು ವೃದ್ಧಿಯಾಗಲಿದೆ ಹಾಗೂ ಉದ್ಯೋಗ ಸೃಷ್ಟಿಯಾಗಲಿದೆ. ಹೀಗಾಗಿ ಬೆಂಗಳೂರು ದಕ್ಷಿಣ ಭಾಗದಲ್ಲಿ ವಿಮಾನನಿಲ್ದಾಣ ನಿರ್ಮಾಣ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಿ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಹಾಗೂ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸರ್ಕಾರದಿಂದ ಶಿಫಾರಸು ಮಾಡಬೇಕು ಎಂದು ಮನವಿ ಪತ್ರದಲ್ಲಿ ಕೋರಿದ್ದಾರೆ.

Share this article