ಕನ್ನಡಪ್ರಭ ವಾರ್ತೆ ಉಡುಪಿ
ಕರ್ನಾಟಕದಲ್ಲಿ 7.76 ಲಕ್ಷ ಸಂಶಯಾಸ್ಪದ ಪಡಿತರ ಚೀಟಿಗಳಿವೆ ಎಂದು ಗುರುತಿಸಿರುವ ಕೇಂದ್ರ ಬಿಜೆಪಿ ಸರ್ಕಾರ ಅಂತಹ ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸೂಚನೆಯನ್ನು ನೀಡಿದೆ. ಆದರೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ತನ್ನನ್ನು ಗೆಲ್ಲಿಸಿ ಕಳುಹಿಸಿದ ಜನರಿಗೆ ಸುಳ್ಳು ಮಾಹಿತಿ ನೀಡಿ ಅನರ್ಹ ಪಡಿತರ ಚೀಟಿಗಳನ್ನು ರಾಜ್ಯ ಸರ್ಕಾರವೇ ರದ್ದು ಮಾಡಲು ಹೊರಟಿದೆ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.ಕೇಂದ್ರದ ಬಿಜೆಪಿ ಸರ್ಕಾರದ ಸೂಚನೆಯಂತೆ ಪಡಿತರ ಚೀಟಿಗಳಲ್ಲಿ 5.80 ಲಕ್ಷ ಅನರ್ಹ ಬಿಪಿಎಲ್ ಫಲಾನುಭವಿಗಳ ಚೀಟಿಯನ್ನು ಈ ತಿಂಗಳ 30ರೊಳಗೆ ರದ್ದುಪಡಿಸಲು ಸೂಚಿಸಲಾಗಿದೆ. ಕೇಂದ್ರ ಬಿಜೆಪಿ ಸರ್ಕಾರದ ಈ ನಿರ್ಧಾರವು ಬಡವರ ವಿರೋಧಿ ಧೋರಣೆಯಾಗಿದೆ. ಸರ್ಕಾರದ ಮಾನದಂಡಗಳ ಪ್ರಕಾರ 1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಇರುವವರು ಬಿಪಿಎಲ್ ಪಡಿತರ ಚೀಟಿ ಹೊಂದಲು ಅನರ್ಹರು. ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿ.ಬಿ.ಡಿ.ಟಿ) ವರದಿ ಪ್ರಕಾರ ಕರ್ನಾಟಕದಲ್ಲಿ ಅಂತಹ 5.80 ಲಕ್ಷ ಫಲಾನುಭವಿಗಳಿದ್ದಾರೆ. ಆದರೆ ರಾಜ್ಯ ಸರ್ಕಾರದ ‘ಕುಟುಂಬ ತಂತ್ರಾಂಶ’ ಗುರುತಿಸಿರುವ ಪ್ರಕಾರ ಅಂತಹ ಫಲಾನುಭವಿಗಳ ಸಂಖ್ಯೆ 10.09 ಲಕ್ಷ ಎಂದು ಆಹಾರ ಇಲಾಖೆ ತಿಳಿಸಿದೆ.ಕುಟುಂಬದಲ್ಲೊಬ್ಬರು ಆದಾಯ ತೆರಿಗೆ ಪಾವತಿದಾರರು, ಕಂಪನಿಗಳಲ್ಲಿ ನಿರ್ದೇಶಕರು, ನಾಲ್ಕು ಚಕ್ರಗಳ ವಾಹನ ಹೊಂದಿದವರು, ಜಿಎಸ್‌ಟಿ ಸಂಖ್ಯೆ ಹೊಂದಿರುವ ಒಟ್ಟು 25 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುವವರು ಬಿಪಿಎಲ್ ಚೀಟಿ ಹೊಂದಲು ಅನರ್ಹರು. ಅಂತಹ ಸಂಶಯಾಸ್ಪದ ಫಲಾನುಭವಿಗಳನ್ನು ಗುರುತಿಸಿರುವ ಕೇಂದ್ರ ಸರ್ಕಾರವು ಅಂಥವರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಈ ತಿಂಗಳ 30ರ ಒಳಗೆ ರದ್ದು ಪಡಿಸುವಂತೆ ಎಲ್ಲ ರಾಜ್ಯಗಳಿಗೆ ಇತ್ತೀಚೆಗೆ ಸೂಚನೆ ನೀಡಿದೆ.ಶಾಸಕ ಯಶ್ಪಾಲ್ ಸುವರ್ಣ ಅವರು ಗ್ಯಾರಂಟಿ ಯೋಜನೆಗೊಸ್ಕರ ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದು ಎಂದು ಹಸಿ ಸುಳ್ಳು ಹೇಳುವುದನ್ನು ನಿಲ್ಲಿಸಲಿ, ಬಡವರ ಬಗ್ಗೆ ಕಾಳಜಿ ಮತ್ತು ತಾಕತ್ತು ಇದ್ದರೆ ಕೇಂದ್ರ ಸರ್ಕಾರದ ಸೂಚನೆ ಹಿಂಪಡೆಯುವಂತೆ ಆಗ್ರಹಿಸಲಿ ಎಂದವರು ಸವಾಲು ಹಾಕಿದ್ದಾರೆ.