ಅನುದಾನ ತಂದು ಕ್ಷೇತ್ರದಲ್ಲಿ ಕೆಲಸ ಮಾಡದ ಶಾಸಕರು: ಬಿ.ಎಲ್.ದೇವರಾಜು ಖಂಡನೆ

KannadaprabhaNewsNetwork | Published : Aug 30, 2024 1:04 AM

ಸಾರಾಂಶ

ಟಿಎಪಿಸಿಎಂಎಸ್ ಒಳಾಂಗಣ ಅಭಿವೃದ್ಧಿಗೆ ಹಣವಿದ್ದರೂ ಇದುವರೆಗೆ ಕಾಮಗಾರಿ ಗುದ್ದಲಿ ಪೂಜೆ ಸಮಯ ನೀಡಿಲ್ಲ. ಅಭಿವೃದ್ಧಿ ಕಾರ್ಯಗಳ ಆರಂಭಕ್ಕೆ ಪೂಜೆ ಮಾಡಲು ಗುತ್ತಿಗೆದಾರರಿಗೆ ಸಮಯ ನೀಡದೆ ವಿಳಂಬ ಮಾಡಿ ಜನರನ್ನು ದಾರಿತಪ್ಪಿಸುವ ಪ್ರಯತ್ನ ಮಾಡಬಾರದು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಅಗತ್ಯ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡದ ಶಾಸಕರು ಕಾಂಗ್ರೆಸ್ಸಿಗರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಖಂಡಿಸಿದರು.

ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಕ್ಷೇತ್ರದ ಯಾವ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಿದ್ದಾರೆ ಎಂಬುದನ್ನು ಶಾಸಕ ಎಚ್.ಟಿ.ಮಂಜು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.

ಅಕ್ರಮ-ಸಕ್ರಮ ಸಮಿತಿ ರಚನೆಯಾಗಿ ಎಂಟು ತಿಂಗಳು ಕಳೆದಿದೆ. ಶಾಸಕರಾದ ನೀವು ನಿಮ್ಮ ಜವಾಬ್ದಾರಿ ಅರಿತು ಇದುವೆರಗೂ ಒಂದೇ ಒಂದು ದರಕಾಸು ಸಮಿತಿ ಸಭೆ ನಡೆಸಿ ರೈತರಿಗೆ ಅನುಕೂಲ ಮಾಡಲು ಮುಂದಾಗಿಲ್ಲ ಎಂದು ದೂರಿದರು.

ಪಟ್ಟಣದ ಸರ್ಕಾರಿ ಆಸ್ತಿ ರಕ್ಷಿಸಬೇಕಾದವರು ಇಲಾಖೆ ಒಪ್ಪಿಗೆ ಪಡೆಯದೆ ಸರ್ಕಾರಿ ಪಾಲಿಟೆಕ್ನಿಕ್ ಕಾಂಪೌಂಡ್ ಹೊಡೆಸಿ ರಸ್ತೆ ಮಾಡಿಸುತ್ತಿದ್ದಾರೆ. ಪಟ್ಟಣದ ಎಂಜಿನಿಯರಿಂಗ್ ಕಾಲೇಜು ಕಾಂಪೌಂಡ್ ನಿರ್ಮಾಣ ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಕಿಡಿಕಾರಿದರು.

ಸಣ್ಣ ನೀರಾವರಿ ಇಲಾಖೆಯಲ್ಲಿ ತಾಲೂಕಿನ ನಾಲ್ಕು ಕೆರೆಗಳ ಅಭಿವೃದ್ದಿಗೆ ಅನುದಾನ ಬಿಡುಗಡೆಯಾಗಿ ಟೆಂಡರ್ ಒಪ್ಪಿಗೆಯಾಗಿದ್ದರೂ ನಿಮಗೆ ಬೇಕಾದವರಿಗೆ ಟೆಂಡರ್ ಸಿಕಿಲ್ಲ ಎನ್ನುವ ಕಾರಣಕ್ಕೆ ಟೆಂಡರ್ ರದ್ದುಪಡಿಸಿ ಇಲಾಖೆಗೆ ಪತ್ರ ಬರೆದಿರುವುದು ಏಕೆ ಎಂದು ಪ್ರಶ್ನಿಸಿದರು.

ಟಿಎಪಿಸಿಎಂಎಸ್ ಒಳಾಂಗಣ ಅಭಿವೃದ್ಧಿಗೆ ಹಣವಿದ್ದರೂ ಇದುವರೆಗೆ ಕಾಮಗಾರಿ ಗುದ್ದಲಿ ಪೂಜೆ ಸಮಯ ನೀಡಿಲ್ಲ. ಅಭಿವೃದ್ಧಿ ಕಾರ್ಯಗಳ ಆರಂಭಕ್ಕೆ ಪೂಜೆ ಮಾಡಲು ಗುತ್ತಿಗೆದಾರರಿಗೆ ಸಮಯ ನೀಡದೆ ವಿಳಂಬ ಮಾಡಿ ಜನರನ್ನು ದಾರಿತಪ್ಪಿಸುವ ಪ್ರಯತ್ನ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಶಾಸಕರಾಗಿ ಆಯ್ಕೆಯಾಗಿ ಒಂದು ವರ್ಷ ಮೂರು ತಿಂಗಳು ಕಳೆದಿದ್ದರೂ ಕ್ಷೇತ್ರದ ಅಭಿವೃದ್ಧಿಯಲ್ಲಿ ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ವಿಪಕ್ಷ ಶಾಸಕರಾಗಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಸಹಕಾರ ದೊರಕುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಚುನಾಯಿತ ಜನಪ್ರತಿನಿಧಿಗಳಿಗೆ ಅವರ ಹಕ್ಕುಗಳಿರುತ್ತವೆ. ಅಧಿಕಾರವಿದ್ದರೆ ಮಾತ್ರ ಅಭಿವೃದ್ಧಿ ಎನ್ನುವುದು ಪಲಾಯನವಾದ. ಶಾಸಕರು ತಮ್ಮ ಜವಾಬ್ದಾರಿ ಅರಿತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಜನರ ಋಣ ತೀರಿಸಲಿ ಎಂದು ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಬಿ.ಪ್ರಕಾಶ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ತಾಲೂಕು ಕಾಂಗ್ರೆಸ್ ಉಸ್ತುವಾರಿ ಚಿನಕುರುಳಿ ರಮೇಶ್, ಲಕ್ಷ್ಮೀಪುರ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರೇಗೌಡ, ಮುಖಂಡ ಅಗ್ರಹಾರಬಾಚಹಳ್ಳಿ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಚೇತನ ಮಹೇಶ್ ಸೇರಿದಂತೆ ಹಲವರು ಇದ್ದರು.

Share this article