ಕೊಟ್ಟೂರು: ಅಕಾಲಿಕವಾಗಿ ಮರಣ ಹೊಂದಿದ ಉಜ್ಜಯಿನಿ ಸದ್ಧರ್ಮ ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ, ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ್ ಅವರ ಅಂತ್ಯಕ್ರಿಯೆ ಹಲವಾರು ಸ್ವಾಮೀಜಿಗಳ ಉಪಸ್ಥಿತಿಯಲ್ಲಿ, ಸಾವಿರಾರು ಜನರ ಪಾಲ್ಗೊಳ್ಳುವಿಕೆಯಲ್ಲಿ ಗುರುವಾರ ಸಂಜೆ ಪಟ್ಟಣ ಹೊರವಲಯದ ಚಪ್ಪರದಹಳ್ಳಿಯ ಅವರ ತೋಟದಲ್ಲಿ ನೆರವೇರಿತು.
ನಂತರ ಗುರುವಾರ ಇಳಿಸಂಜೆ 6.30ರ ಸುಮಾರಿಗೆ ಹರ್ಷವರ್ಧನ ಅವರ ಮೃತದೇಹವನ್ನು ಅವರ ತೋಟದಲ್ಲಿ ತೋಡಲಾಗಿದ್ದ ಸಮಾಧಿಯಲ್ಲಿ ಇರಿಸಿ ಪೂಜಾ ವಿಧಿ ವಿಧಾನಗಳನ್ನು ನೆರೆವೇರಿಸಿದರು. ಪುತ್ರ ಶೋಬಿತ್ ಅವರಿಗೆ ಮೃತರ ಎಲ್ಲ ಜವಾಬ್ದಾರಿಗಳನ್ನು ಮುಂದುವರೆಸಿಕೊಂಡು ಹೋಗುವಂತೆ ನೆರೆದಿದ್ದ ಗುರು ವರ್ಗದವರು ಶಾಸ್ತ್ರ ಬದ್ಧವಾಗಿ ತಿಳಿ ಹೇಳಿದರು. ಸಮಾಧಿಯಲ್ಲಿನ ಅವರ ಸಂಪೂರ್ಣ ದೇಹದ ಆಳದವರೆಗೂ ವಿಭೂತಿಯನ್ನು ರಾಶಿ ರಾಶಿಯಾಗಿ ಸುರಿದು ನಂತರ ಮಣ್ಣಲ್ಲಿ ಮಣ್ಣಾಗುವ ಕೈಂಕರ್ಯವನ್ನು ನೆರೆವೇರಿಸಿದರು.
ವೀರಶೈವ ಲಿಂಗಾಯತ ಜಂಗಮ ಪರಂಪರೆಯಂತೆ ಅಂತ್ಯಕ್ರಿಯೆಯ ಪ್ರಕ್ರಿಯೆಗಳನ್ನು ನೆರವೇರಿಸಲಾಯಿತು. ರಂಭಾಪುರಿ ಜಗದ್ಗುರುಗಳು ಸೇರಿದಂತೆ ಹಲವು ಗಣ್ಯರು ಶೋಕ ಸಂದೇಶ ಕೋರಿದರು. ಮೃತರ ಗೌರವಾರ್ಥ ಪಟ್ಟಣದ ವರ್ತಕರು ತಮ್ಮ ವಹಿವಾಟುಗಳನ್ನು ಗುರುವಾರ ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಗೌರವ ಸಲ್ಲಿಸಿದರು. ಇದಕ್ಕೂ ಮೊದಲು ಮೃತರ ಅಂತಿಮದರ್ಶನಕ್ಕೆ ಅವರ ಮನೆಯಲ್ಲಿ ಅವಕಾಶ ಮಾಡಲಾಗಿತ್ತು. ೨೦ಸಾವಿರಕ್ಕೂ ಹೆಚ್ಚು ಜನರು ಅಂತಿಮ ದರ್ಶನ ಪಡೆದರು. ಸಂಜೆ ೪ ಗಂಟೆಗೆ ಆರಂಭವಾದ ಮೃತರ ಮೆರವಣಿಗೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಜನರು ಹೆಜ್ಜೆ ಹಾಕಿದರು. ಮೃತರ ಸಹೋದರರಾದ ಎಂಎಂಜೆ ಸ್ವರೂಪಾನಂದ, ಎಂಎಂಜೆ ಸತ್ಯಪ್ರಕಾಶ, ಎಂಎಂಜೆ ಕುಮಾರಸ್ವಾಮಿ, ಪತ್ನಿ ಗೀತಾ ಹರ್ಷವರ್ಧನ, ಪುತ್ರ ಶೋಬಿತ್, ಪುತ್ರಿ ವಸುಧಾ ಅಭಯ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.ಕೊಟ್ಟೂರಿನ ಸಿದ್ಧಲಿಂಗ ಶಿವಾಚಾರ್ಯರು, ಪ್ರಶಾಂತಸಾಗರ ಶಿವಾಚಾರ್ಯರು, ವರಸದ್ಯೋಜಾತ ಶಿವಾಚಾರ್ಯರು, ಮಹೇಶ್ವರ ಸ್ವಾಮಿಗಳು, ಮಲ್ಲಿಕಾರ್ಜುನ ಶಿವಾಚಾರ್ಯರು, ಸಂಡೂರು ಪ್ರಭುಸ್ವಾಮಿಗಳು, ನಂದೀಶ್ವರ ಶಿವಾಚಾರ್ಯರು, ವೀರಭದ್ರಸ್ವಾಮಿ, ವೀರಗಂಗಾಧರ ಸ್ವಾಮಿ, ಹಾಲಸಿದ್ದೇಶ್ವರ ಸ್ವಾಮಿಗಳು, ಮಾಜಿ ಸಚಿವರಾದ ಎನ್.ಎಂ. ನಬಿ, ಬಿ.ಶ್ರೀರಾಮುಲು, ಶಾಸಕರಾದ ನೇಮರಾಜ್ ನಾಯ್ಕ, ಡಾ.ಎನ್.ಟಿ. ಶ್ರೀನಿವಾಸ, ಲತಾ ಮಲ್ಲಿಕಾರ್ಜುನ, ಕೃಷ್ಣಾನಾಯ್ಕ, ಮಾಜಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಐ.ದಾರುಕೇಶ, ವೈ.ಗೋಪಾಲಕೃಷ್ಣ, ಮುಖಂಡರಾದ ಜಿ.ಉಮೇಶ, ಮಲ್ಲಿಕಾರ್ಜುನ, ಕನ್ನೀಹಳ್ಳಿ ಚಂದ್ರಶೇಖರ, ಜೆಡಿಎಸ್ ಜಿಲ್ಲಾಧ್ಯಕ್ಷ ಬದಾಮಿ ಮೃತ್ಯುಂಜಯ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ದಾರುಕೇಶ, ಜೆಡಿಎಸ್ ಕ್ಷೇತ್ರಾಧ್ಯಕ್ಷ ವೈ.ಮಲ್ಲಿಕಾರ್ಜುನ, ಕೂಡ್ಲಿಗಿ ವೀರನಗೌಡ, ನಿರ್ದೇಶಕರಾದ ಐಗೋಳ್ ಚಿದಾನಂದ, ಹಡಗಲಿ ವಿಜಯಕುಮಾರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.