ಮೊಬೈಲ್ ಗೀಳಿನಿಂದ ಯುವ ಜನಾಂಗದ ಬದುಕು ದುಸ್ತರ

KannadaprabhaNewsNetwork |  
Published : May 24, 2026, 02:15 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ನ್ನಡಪ್ರಭ ವಾರ್ತೆ ಹಿರಿಯೂರು

ಇಂದಿನ ಯುವಜನಾಂಗ ಡಿಜಿಟಲ್ ಮಾಧ್ಯಮ ಹಾಗೂ ಮೊಬೈಲ್ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳದೇ ಕಾಲೇಜಿನ ದಿನಗಳಲ್ಲಿ ಉಪನ್ಯಾಸಕರ ಮಾರ್ಗದರ್ಶನ ಪಡೆದು ಪರಿಶ್ರಮದಿಂದ ಅಭ್ಯಾಸ ಮಾಡಿ ಓದಿದ ಕಾಲೇಜಿಗೆ ಹಾಗೂ ಹಡೆದ ತಂದೆ ತಾಯಿಗಳಿಗೆ ಕೀರ್ತಿ ತರಬೇಕು ಎಂದು ತಹಸೀಲ್ದಾರ್ ಎಂ.ಸಿದ್ದೇಶ್ ಹೇಳಿದರು.

ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ರೀಡೆ, ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಸಮಾರೋಪ ಸಮಾರಂಭ ಹಾಗೂ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾನು ವಿದ್ಯಾಭ್ಯಾಸ ಮುಗಿಸಿದ ಮೇಲೆ ಉದ್ಯೋಗ ಅರಸಿ ಪೋಲೀಸ್ ಆಗಿ, ಎಫ್‌ಡಿಸಿಯಾಗಿ, ಕಾಲೇಜಿನ ಉಪನ್ಯಾಸಕರಾಗಿ, ಆನಂತರ ಕಷ್ಟಪಟ್ಟು ಕೆಎಎಸ್ ಓದಿ ಪಾಸ್ ಮಾಡಿ ಇದೀಗ ತಾಲೂಕು ತಹಶೀಲ್ದಾರರಾಗಿ ಕೆಲಸ ಮಾಡುತ್ತಿದ್ದೇನೆ.

ನಾನು ನಮ್ಮ ತಂದೆ-ತಾಯಿಗಳ ಕಷ್ಟ ಅರಿತು ನನ್ನ ಗುರಿ ಸಾಧಿಸುವವರೆಗೂ ಟಿವಿ, ಸಿನಿಮಾಗಳನ್ನು ಸಹ ನೋಡದೇ ಯಾವುದೇ ಮೋಜುಮಸ್ತಿ ಮಾಡದೇ ಕೇವಲ ಓದುವುದನ್ನಷ್ಟೇ ಗುರಿಯಾಗಿಸಿಕೊಂಡಿದ್ದೆ. ವಿದ್ಯಾರ್ಥಿ ಜೀವನದ ಬಂಗಾರದ ಸಮಯವನ್ನು ವಿದ್ಯಾರ್ಥಿಗಳು ವ್ಯರ್ಥ ಮಾಡದೇ ತಮ್ಮ ತಂದೆ-ತಾಯಿಗಳ ಕಷ್ಟ ಅರಿತು ಓದಿನ ಕಡೆ ಮಾತ್ರ ಗಮನ ಹರಿಸಬೇಕು ಎಂದರು.

ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯ ಎಚ್.ತಿಪ್ಪೇಸ್ವಾಮಿ ಮಾತನಾಡಿ,

ಈ ಕಾಲೇಜು ಉತ್ತಮ ಪರಿಸರ ಹೊಂದಿದ್ದು ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಆರಂಭದಲ್ಲಿ ಕೇವಲ 400 ವಿದ್ಯಾರ್ಥಿಗಳಿದ್ದ ಈ ಕಾಲೇಜು ಈಗ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಗಿಡ್ಡೋಬನಹಳ್ಳಿ ಅಶೋಕ್, ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಶಿವಲಿಂಗಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು ಹಾಗೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ.ಡಿ.ಧರಣೇಂದ್ರಯ್ಯ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಲೋಕೇಶ್ ಮಾಳಿಗೆ,ದತ್ತಿನಿಧಿ ಪ್ರಾಯೋಜಕರುಗಳಾದ ಡಾ.ಜಗನ್ನಾಥ್, ದಿವಾಕರ್ ಹಳೇ ಯಳನಾಡು, ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಹೇಮಲತಾ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಗಂಗಾಧರ್, ಸಹಾಯಕ ಪ್ರಾಧ್ಯಾಪಕರಾದ ಲಕ್ಷ್ಮಣ್ ನಾಯ್ಕ, ಮಹಮ್ಮದ್ ಸಾದತ್, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀಧರ್ ಯಾದವ್, ಬಸವರಾಜ್ ಬಳಗಟ್ಟ, ಡಾ.ದೇವಿಕಾ, ಉಪನ್ಯಾಸಕರಾದ ಮಹಂತೇಶ್, ಎಸ್.ಎಲ್.ಎನ್.ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉರಿ ಬಿಸಿಲು ಲೆಕ್ಕಿಸದೆ ಅಂಜನಾದ್ರಿಗೆ ಅಪಾರ ಭಕ್ತಗಣ
ತುಂಗಭದ್ರಾ ನದಿ ಒಡಲಲ್ಲಿ ಮರ್ರಂ ಅಕ್ರಮ