ಅಜೀಜಅಹ್ಮದ ಬಳಗಾನೂರ
ಮೊಬೈಲ್ ನಮ್ಮ ಜೀವನ ಶೈಲಿಯ ಭಾಗವಾಗಿದೆ. ಸಾಮಾಜಿಕ ಜಾಲತಾಣಗಳ ದಾಸರಾಗಿರುವ ಯುವಸಮೂಹದ ಇಂದಿನ ಸ್ಥಿತಿಗತಿ ಕುರಿತು ಮನವರಿಕೆ ಮಾಡುವುದು, ಮಿತಿಮೀರಿದ ಮೊಬೈಲ್ ಬಳಕೆಯಿಂದಾಗುವ ಹಾನಿ ಕುರಿತು ಜಾಗೃತಿ ಮೂಡಿಸಲು ಹೀಗೊಂದು ಗಣೇಶ ಮಂಡಳಿ ಮುಂದಾಗಿದೆ.
ಒಂದೆಡೆ ಭೂಮಂಡಲದ ಮೇಲೆ ನಿಂತು ಮೊಬೈಲ್ ಬಳಕೆಯಲ್ಲಿ ತಲ್ಲೀನರಾಗಿರುವ ಕುಟುಂಬ, ಇವರನ್ನು ವಾಟ್ಸ್‌ಆ್ಯಪ್, ಯೂಟೂಬ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಮೆಸೆಂಜರ್, ಟ್ವಿಟರ್‌ನಂತರ ಸಾಮಾಜಿಕ ಜಾಲತಾಣಗಳೆಂಬ ವಿಷಸರ್ಪಗಳು ಸುತ್ತುವರಿದು ಆವರಿಸಿಕೊಳ್ಳುತ್ತಿರುವುದು, ಮತ್ತೊಂದೆಡೆ ಈ ವಿಷಸರ್ಪಗಳ ಬಲೆಯಿಂದ ಹೊರತೆಗೆಯಲು ಯತ್ನಿಸುತ್ತಿರುವ ವಿಘ್ನ ವಿನಾಶಕ.ಇದು ಇಲ್ಲಿನ ವಿದ್ಯಾನಗರದ ಹಿಪ್ಪರಗಿ ಬೀಲ್ಡಿಂಗ್ ಹತ್ತಿರ ಶ್ರೀ ಬಾಲಗಜಾನನ ಯುವಕ ಮಂಡಳದಿಂದ ಪ್ರತಿಷ್ಠಾಪಿಸಲಾದ ವಿಶಿಷ್ಟ ಗಣೇಶ ಮೂರ್ತಿ. ಇಂದಿನ ಯುವಜನತೆ ಸಾಮಾಜಿಕ ಜಾಲತಾಣಗಳ ದಾಸರಾಗಿ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದು, ಈ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಯುವಕ ಮಂಡಳ ಹೊಸ ಪ್ರಯೋಗದ ಮೂಲಕ ಜಾಗೃತಿಗೆ ಮುಂದಾಗಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
32 ಸದಸ್ಯರಿರುವ ಯುವಕ ಮಂಡಳವು ಒಂದು ವರ್ಷದ ಮೊದಲೇ ಯಾವ ರೀತಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು ಎಂಬ ಸಿದ್ಧತೆ ಮಾಡಿಕೊಳ್ಳುತ್ತದೆ. ಈ ಕುರಿತು ಎಲ್ಲ ಸದಸ್ಯರು ಚರ್ಚಿಸಿ ಅಂತಿಮ ತೀರ್ಮಾನ ತಗೆದುಕೊಂಡ ನಂತರ ನಿರಂತರ 2-3 ತಿಂಗಳು ಶ್ರಮಿಸಿ ಮೂರ್ತಿ ಪ್ರತಿಷ್ಠಾಪಿಸುತ್ತದೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಯುವಕರು ಹಾಗೂ ಪಾಲಕರಿಗೆ ಹಲವು ಜಾಗೃತಿ, ಎಚ್ಚರಿಕೆಯ ಸಂದೇಶಗಳು ಗಮನ ಸೆಳೆಯುತ್ತಿವೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಆಮ್ಲಜನಕವೇನಲ್ಲ, ಅದಿಲ್ಲದೆಯೂ ಮನುಷ್ಯರು ಬದುಕಬಹುದು, ಸಾಮಾಜಿಕ ಜಾಲತಾಣಗಳ ಬಯಕೆಗಳಿಗೆ ಸಮಯದ ಮಿತಿ ಹೇರಿಕೊಳ್ಳಿ, ಮೊಬೈಲ್ ಗೀಳು ಜೀವನಕ್ಕೆ ಉರುಳು, ಮೊಬೈಲ್‌ನಿಂದ ಆಗಿ ನಿರ್ಗಮನ ಜೀವನವಾಗುವುದು ಸುಗಮ, ದೇಹಕ್ಕೆ ವ್ಯಾಯಾಮ ಮೆದುಳಿಗೆ ಓದು, ಮೊಬೈಲ್‌ನಿಂದ ಬೆಳೆಯುವುದು ದುರಾಲೋಚನೆ ಪುಸ್ತಕದಿಂದ ಬೆಳೆಯುವುದು ದೂರದ ಆಲೋಚನೆ, ಮಕ್ಕಳ ಹತ್ತಿರ ಮೊಬೈಲ್ ಕೊಡುವುದು ಬಿಡಿ ಪುಸ್ತಕ ಕೊಟ್ಟು ಓದಿಸಿ, ದೇಹಕ್ಕೆ ಬೊಜ್ಜು ಹೇಗೋ ಹಾಗೆ ಮೆದುಳಿಗೆ ಸೋಶಿಯಲ್ ಮೀಡಿಯಾ, ಮುಚ್ಚಿದ ಕಪಾಟಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪುಸ್ತಕ ತನ್ನ ಡೆತ್‌ನೋಟ್‌ನಲ್ಲಿ ಬರೆದಿತ್ತು. ನನ್ನ ಸಾವಿಗೆ ಮೊಬೈಲ್ ಕಾರಣವೆಂದು... ಹೀಗೆ ಹಲವು ಬಗೆಯ ಜಾಗೃತಿ, ಎಚ್ಚರಿಕೆಯ ಸಂದೇಶಗಳು ನೋಡುಗರ, ಮಕ್ಕಳ ಮನಃಪರಿವರ್ತನೆಗೆ ಕಾರಣಗಳಾಗುತ್ತಿವೆ ಎಂದು ಮಂಡಳಿಯ ಪ್ರಧಾನ ಕಾರ್ಯದರ್ಶಿ ಸಮರ್ಥ ಶೆಟ್ಟಿ ಕನ್ನಡಪ್ರಭಕ್ಕೆ ತಿಳಿಸಿದರು.ಕಳೆದ 20 ವರ್ಷಗಳಿಂದ ಪ್ರತಿ ವರ್ಷವೂ ವಿಶೇಷ ರೀತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ನಾವು ಪ್ರತಿಷ್ಠಾಪಿಸಿದ ಹಲವು ಗಣೇಶ ಮೂರ್ತಿಗಳಿಗೆ ಪ್ರಶಸ್ತಿಗಳು ಬಂದಿರುವುದು ಸಂತಸ ತಂದಿದೆ ಎಂದು ಶ್ರೀಬಾಲಗಜಾನನ ಯುವಕ ಮಂಡಳದ ಅಧ್ಯಕ್ಷ ಅನೂಪ ನವಲಿ ಹೇಳಿದರು.