ಮೊಬೈಲ್ ಮಕ್ಕಳ ಸಮಯ, ಮನಸ್ಸನ್ನು ಹಾಳು ಮಾಡುತ್ತಿದೆ: ಪಿ.ಬಿ.ಶ್ರೀಕಾಂತ್ ಬೇಸರ

KannadaprabhaNewsNetwork |  
Published : Jan 17, 2026, 02:45 AM IST
16ಕೆಎಂಎನ್ ಡಿ28 | Kannada Prabha

ಸಾರಾಂಶ

ಶ್ರೀಮಠದಲ್ಲಿ ನಡೆಯುತ್ತಿರುವ ಈ ಸಮ್ಮೇಳನ ನನಗೆ ಮಾತ್ರವಲ್ಲದೆ ಇಲ್ಲಿ ನೆರೆದಿರುವ ಎಲ್ಲಾ ಮಕ್ಕಳಿಗೆ ಒಂದು ಅಪೂರ್ವ ಸಂದರ್ಭ. ಸಮ್ಮೇಳನದಲ್ಲಿ ನಮ್ಮಲ್ಲಿರುವ ಪ್ರತಿಭೆ, ವಿಚಾರಗಳು, ಕ್ರಿಯಾಶೀಲತೆಯನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶವಿದೆ. ಇದು ನಮ್ಮ ಸುತ್ತಲಿನ ಜಗತ್ತಿನಲ್ಲಿ ನಮಗೆ ದೊರೆಯುತ್ತಿಲ್ಲ .

ಕನ್ನಡಪ್ರಭ ವಾರ್ತೆ ನಾಗಮಂಗಲ

ಮೊಬೈಲ್ ಎಂಬ ಮಹಾಮಾರಿ ನಮ್ಮಂತಹ ಎಳೆಯ ಮನಸ್ಸುಗಳನ್ನು ಆಕರ್ಷಿಸಿ ನಮ್ಮ ಸಮಯ ಮತ್ತು ಮನಸ್ಸು ಎರಡನ್ನೂ ಹಾಳು ಮಾಡುತ್ತಿದೆ ಎಂದು ಶಿವಮೊಗ್ಗದ ಜಾವಳ್ಳಿ ಜ್ಞಾನದೀಪ ಶಾಲೆ 9ನೇ ತರಗತಿ ವಿದ್ಯಾರ್ಥಿ ಕು.ಪಿ.ಬಿ.ಶ್ರೀಕಾಂತ್ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರದ ಬಿಜಿಎಸ್ ಸಭಾಭವನದಲ್ಲಿ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ 81ನೇ ಜಯಂತ್ಯುತ್ಸವ ಹಾಗೂ 13ನೇ ವರ್ಷದ ಸಂಸ್ಮರಣಾ ಮಹೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮೊಬೈಲ್ ಹಿಡಿದರೆ ದಂಡ ಹಾಕುವಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಈ ಆದೇಶವನ್ನು ಪಾಲಿಸಿದರೆ ಮಾತ್ರ ಮುಂದಿನ ಮುಂದಿನ ಯುವ ಪೀಳಿಗೆ ಅಭಿವೃದ್ಧಿಯಾಗಲು ಸಾಧ್ಯ. ಹಾಗಾಗಿ ಇದು ಉಗ್ರರೂಪದ ಆದೇಶವಾಗಲಿ ಎಂದು ಆಗ್ರಹಿಸಿದರು.

ಶ್ರೀಮಠದಲ್ಲಿ ನಡೆಯುತ್ತಿರುವ ಈ ಸಮ್ಮೇಳನ ನನಗೆ ಮಾತ್ರವಲ್ಲದೆ ಇಲ್ಲಿ ನೆರೆದಿರುವ ಎಲ್ಲಾ ಮಕ್ಕಳಿಗೆ ಒಂದು ಅಪೂರ್ವ ಸಂದರ್ಭ. ಸಮ್ಮೇಳನದಲ್ಲಿ ನಮ್ಮಲ್ಲಿರುವ ಪ್ರತಿಭೆ, ವಿಚಾರಗಳು, ಕ್ರಿಯಾಶೀಲತೆಯನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶವಿದೆ. ಇದು ನಮ್ಮ ಸುತ್ತಲಿನ ಜಗತ್ತಿನಲ್ಲಿ ನಮಗೆ ದೊರೆಯುತ್ತಿಲ್ಲ ಎಂದರು.

ಖಾಸಗಿ ಶಾಲೆಗಳ ಪೈಪೋಟಿಯಿಂದ ಮುಚ್ಚುವ ಮತ್ತು ವಿಲೀನದ ಹಂತಕ್ಕೆ ತಲುಪಿರುವ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಸಬಲೀಕರಣ ನಮ್ಮೆಲ್ಲರ ಜವಾಬ್ದಾರಿ. ಆದರೆ, ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಹಾಲು, ಮೊಟ್ಟೆ, ಬಾಳೆಹಣ್ಣು, ಬಿಎಲ್‌ಒ ಕೆಲಸ, ಎಲ್ಲಾ ಗಣತಿ ಕೆಲಸ ಎಂದು ಸಾಕಷ್ಟು ಒತ್ತಡ ಹೇರಲಾಗುತ್ತಿದೆ. ಶಿಕ್ಷಕರಿಗೆ ಪಠ್ಯೇತರ ಹೊರೆ ನೀಡಿ ಗುಣಮಟ್ಟದ ಶಿಕ್ಷಣವನ್ನು ಕೊಡಿ ಎಂದರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಕಲೇಶಪುರದಲ್ಲಿ ಸಚಿವ ಕೃಷ್ಣ ಬೈರೇಗೌಡ ಜನಸ್ಪಂದನ ಕಾರ್ಯಕ್ರಮ
ಸಮಗ್ರ ಅಭಿವೃದ್ಧಿ ಸಂಕಲ್ಪದಲ್ಲಿ ಬಹುಪಾಲು ಯಶಸ್ವಿ: ಸಂಸದ ಬಿ.ವೈ ರಾಘವೇಂದ್ರ