ಮೊಬೈಲ್‌ ಕಳ್ಳತನ ಪ್ರಕರಣ: 225 ಮೊಬೈಲ್‌ ವಶಕ್ಕೆ

KannadaprabhaNewsNetwork |  
Published : Jun 13, 2025, 03:33 AM IST

ಸಾರಾಂಶ

ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಕಳುವಾದ 46, 54, 000 ರುಪಾಯಿ ಮೌಲ್ಯದ 225 ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಕಳುವಾದ 46, 54, 000 ರುಪಾಯಿ ಮೌಲ್ಯದ 225 ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತಾಲಯ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ವರ್ಷದಲ್ಲಿ ಕಲಬುರಗಿ ಕಮಿಷ್ನರೇಟ್‌ ವ್ಯಾಪ್ತಿಯಲ್ಲಿ 1, 100 ಮೊಬೈಲ್‌ ಕಳವಾಗಿದ್ದವು. ಈ ಪೈಕಿ ಇ ಲಾಸ್ಟ್‌ ಪೋರ್ಟಲ್‌ನಲ್ಲಿ ದಾಖಲಾದ ಮೊಬೈಲ್‌ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಡಾ. ಶರಣಪ್ಪ ವಿವರಿಸಿದ್ದಾರೆ.

ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳನ್ನು ಕಳೆದುಕೊಂಡಿರುವ ಬಗ್ಗೆ E Lost ಮತ್ತು CEIR PORTAL ನಲ್ಲಿ ದೂರು ದಾಖಲಿಸಿದ್ದಾರೆ. ದೂರು ನೀಡಿರುವ ಮೊಬೈಲ್ ಗಳ ಪತ್ತೆಗಾಗಿ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಇನ್‌ಸ್ಪೆಕ್ಟರ್ ಅವರ ಮುಂದಾಳತ್ವದಲ್ಲಿ ತಾಂತ್ರಿಕ ಮತ್ತು ಸೆನ್ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿ ಒಳಗೊಂಡ ತನಿಖಾ ತಂಡ ರಚಿಸಿ, ಕಳೆದುಕೊಂಡ ಮೊಬೈಲ್ ಗಳ ಪತ್ತೆಗಾಗಿ ಜಾಲ ಬೀಸಲಾಗಿತ್ತು. ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಮೂಲಕ ಸುಮಾರು 225 ಮೊಬೈಲ್ ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದರು.

2023ರ ಮಾರ್ಚ್ 1 ರಿಂದ ಇಲ್ಲಿಯವರೆಗೆ ಒಟ್ಟು ̧1423 ಮೊಬೈಲ್ ಫೋನ್ ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದ್ದು, ಸದ್ಯ 225 ಫೋನ್ ಪತ್ತೆ ಹಚ್ಚಲಾಗಿದೆ, ಇಲ್ಲಿಯವರೆಗೆ 3 ಕೋಟಿ ರು. ಮೌಲ್ಯದ ಫೋನ್ ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಮಾಹಿತಿ ನೀಡಿದರು.

ಅಶೋಕ್ ನಗರ ಪೊಲೀಸ್ ಠಾಣೆ- 29, ಬ್ರಹ್ಮಪುರ -51, ಸಬ್ ಅರ್ಬನ್- 29 ಮತ್ತು ಗುಲ್ಬರ್ಗಾ ವಿವಿ ಠಾಣೆಯಲ್ಲಿ 21 ಮೊಬೈಲ್ ಗಳನ್ನು ಕಳೆದುಕೊಂಡಿರುವ ಬಗ್ಗೆ ದೂರು ದಾಖಲಾಗಿದ್ದವು. ಉಳಿದ ಮೊಬೈಲ್ ಫೋನ್ ಗಳ ಕಳೆದುಕೊಂಡಿರುವ ಬಗ್ಗೆ E Lost ಮತ್ತು CEIR PORTAL ನಲ್ಲಿ ದೂರು ಬಂದಿದ್ದವು. ದೂರಿನ ಮೇರೆಗೆ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಕಳೆದುಹೋದ ಮೊಬೈಲ್ ಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಮೊಬೈಲ್‌ ಅಸಲಿ ಕಳ್ಳರ ಗ್ಯಾಂಗ್‌ ಪತ್ತೆಗೂ ಪೊಲೀಸ್‌ ಪಡೆ ನಿರಂತರ ಕೆಲಸದಲ್ಲಿರುತ್ತದೆ. ಕಳ್ಳರು ಮೊಬೈಲ್‌ ಅನ್ನು ಅಗ್ಗದ ಬೆಲೆಗೆ ಮಾರಿರುತ್ತಾರೆ. ದಾಖಲೆ ಇಲ್ಲದೆ ಮೊಬೈಲ್ ಖರೀದಿಸಿರುವವರು ಬೇರೆ ಸಿಮ್‌ ಹಾಕಿ ಸಿಕ್ಕಿಬೀಳುತ್ತಿದ್ದಾರೆ, ಈ ಬಗ್ಗೆಯೂ ನಮ್ಮ ತನಿಖೆ ನಡೆಯುತ್ತಿದೆ. ಕಳ್ಳರನ್ನು ಪತ್ತೆ ಹಚ್ಚುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಡಾ. ಶರಣಪ್ಪ ಢಗೆ ಉತ್ತರಿಸಿದರು.

ವಾರಸುದಾರರಿಗೆ ಮೊಬೈಲ್‌ ಹಸ್ತಾಂತರ

ಪೊಲೀಸ್‌ ಕಮಿಷನರ್‌ ಡಾ. ಶರಣಪ್ಪ ಢಗೆಯವರು ಪತ್ತೆಯಾದ ಮೊಬೈಲ್‌ಗಳನ್ನು ಪೊಲೀಸ್‌ ಆಯುಕ್ತಾಲಯದಲ್ಲೇ ವಾರಸುದಾರರಿಗೆ ಹಸ್ತಾಂತರಿಸಿದರು. ಸುಧಾರಾಣಿ, ಕವಿತಾ, ಜಾನಕಿರಾವ್‌, ಪ್ರವೀಣ್‌, ಪ್ರೇಮಾ ಜಾಧವ್‌, ಶರಣಪ್ಪ ಕುಂಬಾರ್‌, ಮಧು, ಚಂದ್ರಶೇಖರ್‌, ಲಕ್ಷ್ಮೀ, ಗಿರೀಶ್‌ ಅಂಬರೀಶ ಸೇರಿದಂತೆ 250 ಕ್ಕೂ ಹೆಚ್ಚು ಜನರು ತಾವು ಕಳೆದುಕೊಂಡ ಮೊಬೈಲ್‌ ಮರಳಿ ಸ್ವೀಕರಿಸಿ ಪೊಲೀಸರಿಗೆ ಧನ್ಯವಾದ ತಿಳಿಸಿದರು. ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲ್, ಪ್ರವೀಣ್ ನಾಯಕ್ ಇದ್ದರು.

--------------------

ಸಾರ್ವಜನಿಕರು ಮೊಬೈಲ್‌ ಕಳೆದುಕೊಂಡಲ್ಲಿ ಅಥವಾ ಕಳ್ಳತನವಾಗಿದ್ದಲ್ಲಿ ಕೂಡಲೇ E- Lost ಮತ್ತು CEIR PORTAL ನಲ್ಲಿ ತಮ್ಮ ದೂರುಗಳನ್ನು ದಾಖಲಿಸಬೇಕು, ಕಳುವಾಗಿದ್ದ ನಿಮ್ಮ ಮೊಬೈಲ್ ಗಳನ್ನು ಪತ್ತೆ ಹಚ್ಚುವ ಕಾರ್ಯ ಪೊಲೀಸರು ಮಾಡಲಿದ್ದಾರೆ. ಒಂದು ವೇಳೆ ಪೊಲೀಸರೇ ದೂರು ತೆಗೆದುಕೊಳ್ಳದಿದ್ದರೆ ಮಾಹಿತಿ ನೀಡಿ, ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ನೀವು ಕರ್ನಾಟಕ ರಾಜ್ಯ ಪೊಲೀಸ್‌ ವೆಬ್‌ ಪೋರ್ಟಲ್‌ನಲ್ಲಿ ಹೋಗಿ ಇ ಲಾಸ್ಟ್‌ ಎಂಬ ಕಿಟಕಿಯಲ್ಲಿ ನಿಮ್ಮ ಮೊಬೈಲ್‌ ಕಳೆದ, ಹಾನಿಯಾದ ಮಾಹಿತಿ ದಾಖಲಿಸಬಹುದು.

-ಡಾ.ಶರಣಪ್ಪ ಎಸ್.ಡಿ. ನಗರ ಪೊಲೀಸ್ ಆಯುಕ್ತರು, ಕಲಬುರಗಿ

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...