ಕನ್ನಡಪ್ರಭ ವಾರ್ತೆ ಸಿಂದಗಿ
ಇಂದಿನ ದಿನಗಳಲ್ಲಿ ಮದ್ಯಪಾನ, ಧೂಮಪಾನದ ಜೊತೆಗೆ ಮೊಬೈಲ್ ವ್ಯಸನವು ವಿದ್ಯಾರ್ಥಿಗಳಲ್ಲಿ ಹೆಚ್ಚಾಗುತ್ತಿದ್ದು, ಇದು ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಸಿಂದಗಿಯ ದಂತ ವೈದ್ಯ ಡಾ.ಸಿದ್ದರಾಮ ಚಿಂಚೊಳ್ಳಿ ಆತಂಕ ವ್ಯಕ್ತಪಡಿಸಿದರು.ಪಟ್ಟಣದ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ರೆಡ್ ಕ್ರಾಸ್ ಘಟಕ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಲಿಂ.ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ವ್ಯಸನ ಮುಕ್ತ ದಿನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಗಂಟೆಗಟ್ಟಲೆ ಮೊಬೈಲ್ ಸ್ಕ್ರೀನ್‌ಗಳಿಗೆ ಅಂಟಿಕೊಂಡಿರುವುದು ಅವರ ಕಣ್ಣಿನ ದೃಷ್ಟಿ, ನಿದ್ರಾಹೀನತೆ ಮತ್ತು ಮಾನಸಿಕ ಒತ್ತಡದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ವ್ಯಸನವು ಯುವಜನರನ್ನು ಸಮಾಜದಿಂದ ದೂರವಿಡುತ್ತದೆ ಮತ್ತು ಕಲಿಕೆಯ ಮೇಲು ಪರಿಣಾಮ ಬೀರುತ್ತದೆ. ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ವಿನಃ ಅದಕ್ಕೆ ದಾಸರಾಗಬಾರದು. ನಿರ್ದಿಷ್ಟ ಸಮಯದಲ್ಲಿ ಮೊಬೈಲ್ ಬಳಕೆ ಮಾಡುವುದು, ಪುಸ್ತಕ ಓದುವುದು, ಕ್ರೀಡೆಗಳಲ್ಲಿ ತೊಡಗುವುದು ಮತ್ತು ಸ್ನೇಹಿತರೊಂದಿಗೆ ನೇರವಾಗಿ ಸಂವಾದಿಸುವುದು ಈ ವ್ಯಸನದಿಂದ ಹೊರಬರುವ ಉತ್ತಮ ಮಾರ್ಗಗಳಾಗಿವೆ ಎಂದರು.ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುವ ಸಾಮರ್ಥ್ಯ ಯಾವುದೇ ಪ್ರವಚನಕಾರರಿಗಿಲ್ಲ. ವ್ಯಕ್ತಿಯ ಆಲೋಚನೆಗಳನ್ನು ಬದಲಾಯಿಸುವ ಅಮಾನುಷ ಶಕ್ತಿ ಆತನ ಮೆದುಳಿಗಿದೆ. ಮಾದಕ ವಸ್ತು ಬಳಕೆಯಿಂದ ಮಿದುಳಿನಲ್ಲಿ ಉತ್ಪಾದನೆಯಾಗುವ ನೈಸರ್ಗಿಕವಾದ ರಾಸಾಯನಿಕಗಳ ಪ್ರಮಾಣ ಕುಗ್ಗುತ್ತದೆ. ನಿರಂತರ ಮಾದಕ ವಸ್ತುಗಳ ಸೇವನೆ ಮಿದುಳಿನ ಕಾರ್ಯ ವಿಧಾನವನ್ನು ಬದಲಾಯಿಸುತ್ತದೆ. ದುಶ್ಚಟಗಳಿಂದ ದೂರವಿದ್ದರೆ ಮಾತ್ರ ನಮ್ಮ ಬದುಕು ಅಸಲಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಮದ್ಯ, ಮಾದಕ ಪೇಯಗಳಿಗೆ ವಿಧಿಸಿರುವ ಗರಿಷ್ಟ ತೆರಿಗೆಗಳು ಸರ್ಕಾರದ ಖಜಾನೆ ತುಂಬಿಸುತ್ತಿದೆ. ಇದೇ ಕಾರಣದಿಂದ ಸರ್ಕಾರವೇ ಮುಚ್ವಿದ ಮದ್ಯ ಮಾರಾಟ ಕೇಂದ್ರಗಳನ್ನು ಪುನಃ ತೆರೆಯುವಂತೆ ಮಾಡಿದೆ. ಮದ್ಯ ಮಾರಾಟದಿಂದ ಲಭಿಸುವ ತೆರಿಗೆಗಿಂತ ಹೆಚ್ಚಿನ ಮೊತ್ತ ಆರೋಗ್ಯ ವಲಯ, ಕುಟುಂಬ ನ್ಯಾಯಾಲಯಗಳಲ್ಲಿ ಖರ್ಚಾಗುತ್ತಿದೆ ಎಂಬ ಸತ್ಯವನ್ನು ಸರ್ಕಾರ ಅರ್ಥ ಮಾಡಿಕೊಳ್ಳದಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಜೆ.ಸಿ.ನಂದಿಕೋಲ ಮಾತನಾಡಿ, ಶಿಕ್ಷಕರು ಕೇವಲ ಬೋಧಕರು ಮಾತ್ರವಲ್ಲ ವಿದ್ಯಾರ್ಥಿಗಳ ಆದರ್ಶ ಮಾದರಿಗಳೂ ಹೌದು. ಶಿಕ್ಷಕರು ಮೊದಲು ಈ ವ್ಯಸನಗಳಿಂದ ದೂರವಿದ್ದು ತಮ್ಮ ವಿದ್ಯಾರ್ಥಿಗಳಿಗೆ ಉತ್ತಮ ಜೀವನ ಶೈಲಿಯನ್ನು ಕಲಿಸಬೇಕು. ತರಗತಿಗಳಲ್ಲಿ ವ್ಯಸನ ಮುಕ್ತ ಜೀವನದ ಕುರಿತು ಚರ್ಚೆ ನಡೆಸಿ, ವಿದ್ಯಾರ್ಥಿಗಳ ವೈಯಕ್ತಿಕ ಸಮಸ್ಯೆಗಳನ್ನು ಆಲಿಸುವ ಮೂಲಕ ಅವರನ್ನು ಸರಿಯಾದ ದಾರಿಯಲ್ಲಿ ಕರೆದೊಯ್ಯಬೇಕು ಎಂದರು.ಈ ವೇಲೆ ಸಾಂಸ್ಕೃತಿಕ ಕಾರ್ಯಾಧ್ಯಕ್ಷ ಸುಧಾಕರ ಚವ್ಹಾಣ, ರೆಡ್ ಕ್ರಾಸ್ ಘಟಕ ಮುಖ್ಯಸ್ಥ ಆರ್.ಎ.ಹಾಲಕೇರಿ, ತಾಲೂಕಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಶರಣಬಸವ ಜೋಗುರ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಸಿದ್ದು ತಳವಾರ, ಐಶ್ವರ್ಯ ಹಳ್ಳೆಪ್ಪನವರ ಮತ್ತು ಗೀತಾ ಚೌಧರಿ ಮಾತನಾಡಿದರು. ಉಪನ್ಯಾಸಕರಾದ ಪ್ರಶಾಂತ ಕುಲಕರ್ಣಿ, ದಾನಯ್ಯ ಮಠಪತಿ, ಮತ್ತು ಭಾಗ್ಯಜ್ಯೋತಿ ದಸ್ಮಾ ಸೇರಿ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು. ಸುಜಾತಾ ತಳವಾರ ನಿರೂಪಿಸಿದರು, ಭಾಗ್ಯಶ್ರೀ ಹಡಪದ ವಂದಿಸಿದರು.