ಜಾನುವಾರು ಲಸಿಕೆಯೊಂದಿಗೆ ಮತಜಾಗೃತಿ ಪ್ರೇರಣೆ

KannadaprabhaNewsNetwork | Published : Apr 1, 2024 12:45 AM

ಸಾರಾಂಶ

ಹುಕ್ಕೇರಿ: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಮತದಾನದ ಅರಿವು ಮೂಡಿಸಲು ತಾಲೂಕು ಸ್ವೀಪ್ ಸಮಿತಿ ಮಹತ್ವದ ಹೆಜ್ಜೆ ಇಟ್ಟಿದ್ದು ಮನೆ ಮನೆಗೆ ತೆರಳಿ ಜಾನುವಾರುಗಳಿಗೆ ಲಸಿಕೆ ನೀಡುವ ವೇಳೆ ಮತದಾನದ ಜಾಗೃತಿ ಮೂಡಿಸುತ್ತಿರುವುದು ಸ್ತುತ್ಯಾರ್ಹ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್. ಮಲ್ಲಾಡದ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಮತದಾನದ ಅರಿವು ಮೂಡಿಸಲು ತಾಲೂಕು ಸ್ವೀಪ್ ಸಮಿತಿ ಮಹತ್ವದ ಹೆಜ್ಜೆ ಇಟ್ಟಿದ್ದು ಮನೆ ಮನೆಗೆ ತೆರಳಿ ಜಾನುವಾರುಗಳಿಗೆ ಲಸಿಕೆ ನೀಡುವ ವೇಳೆ ಮತದಾನದ ಜಾಗೃತಿ ಮೂಡಿಸುತ್ತಿರುವುದು ಸ್ತುತ್ಯಾರ್ಹ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್. ಮಲ್ಲಾಡದ ಅಭಿಪ್ರಾಯಪಟ್ಟರು.

ಇಲ್ಲಿನ ತಾಪಂ ಸಭಾಭವನದಲ್ಲಿ ಶನಿವಾರ ತಾಲೂಕಾ ಸ್ವೀಪ್ ಸಮಿತಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ ಕೇಂದ್ರ ಪುರಷ್ಕೃತ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಪೋಸ್ಟರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜಾನುವಾರುಗಳಿಗೆ ಲಸಿಕೆ ಹಾಕುವುದರೊಂದಿಗೆ ಮತ ಅರಿವು ಮಾಡಲಾಗುತ್ತಿದೆ ಎಂದರು.

ತಾಲೂಕಿನಲ್ಲಿ 1,05,693 ದನಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದರಿಂದ ನಾವು ಒಂದು ಲಕ್ಷ ಮನೆಗಳಿಗೆ ಮತದಾನ ಜಾಗೃತಿ ಮಾಡಿದಂತಾಗುತ್ತದೆ. ಜಿಲ್ಲೆಯಲ್ಲಿಯೇ ಇದೊಂದು ವಿಭಿನ್ನ ಕಾರ್ಯಕ್ರಮವಾಗಿದ್ದು ಮತದಾನ ಪ್ರೇರಣೆಗೆ ಪೂರಕವಾಗಿದೆ. ಮತದಾನದ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಿದಂತಾಗುತ್ತದೆ. ಮತದಾನ ಮಾಡುವದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಪ್ರತಿ ಮತವೂ ಅಮೂಲ್ಯವಾಗಿದೆ ಎಂದು ಅವರು ಹೇಳಿದರು.

ಬರುವ ಮೇ. 7 ರಂದು ಮತಗಟ್ಟೆಗಳಿಗೆ ಹೋಗಿ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ನಿರ್ಭಿತಿಯಿಂದ ಮತ ಚಲಾಯಿಸಬೇಕು. ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಮುಖ್ಯ ಪಶುವೈದ್ಯಾಧಿಕಾರಿ ಡಾ.ರಮೇಶ ಕದಮ ಮಾತನಾಡಿ, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 5ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ಏಪ್ರೀಲ್ 1 ರಿಂದ 30 ರವರೆಗೆ ಹಮ್ಮಿಕೊಳ್ಳಲಾಗಿದೆ. 20ನೇ ಜಾನುವಾರು ಗಣತಿ ಪ್ರಕಾರ 1,26,604 ದನಗಳಿದ್ದು ವಾಸ್ತವಿಕವಾಗಿ 1,05,693 ಲಸಿಕೆ ಲಭ್ಯವಿದೆ. 100 ರಿಂದ 120 ಜಾನುವಾರಗಳಿಗೆ ಒಂದರಂತೆ ಬ್ಲಾಕ್ ಮಾಡಲಾಗಿದ್ದು, ತಾಲೂಕಿನಲ್ಲಿ ಒಟ್ಟು 946 ಬ್ಲಾಕ್‌ಗಳಿವೆ. ಈ ಸಂದರ್ಭದಲ್ಲಿ ನಮ್ಮ ಸಿಬ್ಬಂದಿ ಮನೆ ಮನೆ ಭೇಟಿ ಮಾಡಿದಾಗ ಲಸಿಕಾ ಕಾರ್ಯಕ್ರಮದ ಜೊತೆಗೆ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಮತದಾನದ ಬಗ್ಗೆ ಅರಿವು ಮೂಡಿಸಲು ಕ್ರಮಕೈಕೊಂಡಿದ್ದಾರೆ ಎಂದರು.

ಲಸಿಕಾ ಅಭಿಯಾನದ ನೋಡಲ್ ಅಧಿಕಾರಿ ಡಾ.ಸಾಗರ ಪಾಂಡವ, ಡಾ.ಸಿದ್ಧಾರೂಢ ಮೊಕಾಶಿ, ಡಾ.ಕವಿರಾಜ ಐರಾನಿ, ಡಾ.ಶಹನಾಜ್ ಮೊಹಮ್ಮದ, ತಾಲೂಕಿನ ಎಲ್ಲ ಪಶು ವೈದ್ಯಾಧಿಕಾರಿಗಳು, ಪಶು ವೈದ್ಯಕೀಯ ಪರಿಕ್ಷಕರು, ಪಶು ಸಖಿಯರು, ಇಲಾಖೆಯೇತರ ಲಸಿಕೆದಾರರು ಮತ್ತಿತರರು ಉಪಸ್ಥಿತರಿದ್ದರು.

Share this article