ಗದಗ: ವೈಮಾನಿಕ ದಾಳಿ ಎದುರಾದಾಗ ಸ್ಥಳೀಯ ಜನರು ಭಯಭೀತರಾಗದೇ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಣಕು ಪ್ರದರ್ಶನ ಕೈಗೊಳಲಾಯಿತು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.
ನಗರದ ವಿಡಿಎಸ್‌ಟಿ ಮೈದಾನದಲ್ಲಿ ಗುರುವಾರ ನಡೆದ ಅಣಕು ಪ್ರದರ್ಶನ ಉದ್ದೇಶಿಸಿ ಅವರು ಮಾತನಾಡಿದರು.ನಗರದಲ್ಲಿ ವೈಮಾನಿಕ ದಾಳಿಯಾದಾಗ ಅದಕ್ಕೆ ಇಲಾಖೆ ಅಧಿಕಾರಿಗಳು ಯಾವ ತರಹ ಕಾರ್ಯಾಚರಣೆ ನಡೆಸುತ್ತಾರೆ, ಎಂತಹ ಪರಿಹಾರ ಕಂಡುಕೊಳ್ಳಬೇಕು ಎನ್ನುವುದನ್ನು ತಿಳಿಸುವ ಅಣಕು ಪ್ರದರ್ಶನ ಇದಾಗಿದೆ ಎಂದು ಹೇಳಿದರು. ಬಾಂಬ್ ಬಿದ್ದಿದೆ ಎಂದು ಮಾಹಿತಿ ತಿಳಿದ ಕೂಡಲೇ ಬಾಂಬ್ ಸ್ಕ್ವಾಡ್ ತಕ್ಷಣ ಹೋಗಿ ಪರಿಸ್ಥಿತಿ ಅವಲೋಕಿಸಿ, ಇನ್ನೂ ಸ್ಫೋಟಗೊಳ್ಳದ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿದರು. ಪೊಲೀಸ್, ಅಗ್ನಿಶಾಮಕ ದಳ, ಆ್ಯಂಬುಲೆನ್ಸ್ ಸ್ವಯಂಸೇವಕರು ಬಂದು ಭಯಭೀತರಾದ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಪ್ರಥಮ ಚಿಕಿತ್ಸೆ ಕ್ಯಾಂಪ್‌ಗಳನ್ನು ಪ್ರಾರಂಭಿಸಲಾಯಿತು. ಅವುಗಳು ಪರಿಸ್ಥಿತಿಗನುಗುಣವಾಗಿ ಕಾರ್ಯಗಳನ್ನು ನಿಭಾಯಿಸುವ ಬಗ್ಗೆ ಪ್ರಾತ್ಯಕ್ಷಿಕೆ ಕೈಗೊಳ್ಳಲಾಯಿತು ಎಂದು ಡಿಸಿ ವಿವರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿ, ಅಣಕು ಪ್ರದರ್ಶನ ಮೂಲಕ ಯಾವುದಾರರೂ ತುರ್ತು ಸ್ಥಿತಿ ಎದುರಾದಾಗ ಅದನ್ನು ಎದುರಿಸಲು ಯಾವ ರೀತಿ ತಯಾರಿ ಆಗಿರಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಅಣಕು ಪ್ರದರ್ಶನದಲ್ಲಿ 22 ಇಲಾಖೆಗಳು, ಎನ್.ಸಿ.ಸಿ., ಎನ್.ಎಸ್.ಎಸ್., ಮಾಜಿ ಸೈನಿಕರು, ಸ್ಕೌಟ್ಸ್-ಗೈಡ್ಸ್ ಒಳಗೊಂಡು 300 ಜನ ಭಾಗವಹಿಸಿ, ಬಾಂಬ್ ಸ್ಫೋಟವಾದಾಗ ಅದಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು. ಅಲರ್ಟ್ ಮೇಸೆಜ್ ಬಂದ ತಕ್ಷಣ ಯಾವ ತಂಡ ಯಾವ ಕೆಲಸವನ್ನು ಮಾಡಬೇಕು ಎನ್ನುವ ಜವಾಬ್ದಾರಿಗಳನ್ನು ಈ ಮೂಲಕ ತಿಳಿಸಲಾಯಿತು. ಅಣಕು ಪ್ರದರ್ಶನದಲ್ಲಿ 18 ತಂಡಗಳು ಭಾಗವಹಿಸಿದ್ದವು ಎಂದು ತಿಳಿಸಿದರು.ಅಣಕು ಪ್ರದರ್ಶನದ ನೈಜ ವಿವರ: ವೈಮಾನಿಕ ದಾಳಿಯಿಂದ ನಗರದ ಮನೆಗಳಿಗೆ ಬೆಂಕಿ ಹತ್ತಿ ಉರಿದವು, ಮನೆಯಲ್ಲಿದ್ದ ಜನರು ಬೆಂಕಿಯಿಂದ ಗಾಯಗೊಂಡರು. ದಾಳಿಯಿಂದ ಸುತ್ತಮುತ್ತಲಿನ ಜನರು ಮಕ್ಕಳು ಭಯಭೀತರಾದರು. ಕೆಲವರಿಗೆ ಗಂಭೀರ ಗಾಯ ಸಂಭವಿಸಿ ಸ್ಥಳದಲ್ಲಿಯೇ ಮೂರ್ಛೆ ಹೋದರು. ವೈಮಾನಿಕ ದಾಳಿ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳ ದೌಡಾಯಿಸಿ ಅಗ್ನಿ ನಂದಿಸುವ ಕೆಲಸ ಪ್ರಾರಂಭಿಸಿತು. ಅಗ್ನಿ ಸಂಭವಿಸಿದ ಮನೆಯೊಳಗಿದ್ದ ಜನರನ್ನು ಮನೆಯೊಳಗೆ ಹೋಗಿ ಹೊರತಂದು ಸಂರಕ್ಷಿಸಿದರು. ತುರ್ತು ಪರಿಸ್ಥಿತಿ ಸಹಾಯವಾಣಿ ಪ್ರಾರಂಭಿಸಿದರು. ಆ್ಯಂಬುಲೆನ್ಸ್‌ಗಳು ಬಂದ ತಕ್ಷಣ ಸ್ಥಳದಲ್ಲಿದ್ದ ಪೊಲೀಸ್ ಸಹಾಯದಿಂದ ಗಾಯಾಳುಗಳನ್ನು ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸುವ ಕಾರ್ಯ ಪ್ರಾರಂಭಿಸಿದರು. ಜನರಿಗೆ ಪ್ರಥಮ ಚಿಕಿತ್ಸಾ ಕ್ಯಾಂಪ್‌ಗಳನ್ನು ಪ್ರಾರಂಭವಾಯಿತು. ಸ್ಥಳಕ್ಕೆ ದೌಡಾಯಿಸಿದ ರಾಜ್ಯ ವಿಪತ್ತು ಪರಿಹಾರ ತಂಡ, ಹೆಸ್ಕಾಂ, ಎನ್.ಸಿ.ಸಿ., ಎನ್.ಎಸ್.ಎಸ್., ಸ್ಕೌಟ್ಸ್-ಗೈಡ್ಸ್ ತಂಡದವರು ಪರಿಸ್ಥಿತಿ ನಿರ್ವಹಣೆಯಲ್ಲಿ ಪಾಲ್ಗೊಂಡರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಪೊಲೀಸ್ ಹಿರಿಯ ಅಧಿಕಾರಿಗಳು, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.