ಕನ್ನಡಪ್ರಭ ವಾರ್ತೆ ಹುಕ್ಕೇರಿ
ತುರ್ತು ಹಾಗೂ ಆಪತ್ಕಾಲದಲ್ಲಿ ಜನರು ಹೇಗೆ ನಡೆದುಕೊಳ್ಳಬೇಕು ಎನ್ನುವ ಕುರಿತು ಅರಿವು ಮೂಡಿಸಲು ಹುಕ್ಕೇರಿ ತಾಲೂಕಿನ ಕಣಗಲಾ ಕೈಗಾರಿಕೆ ಪ್ರದೇಶದಲ್ಲಿ ಶನಿವಾರ ಅಣಕು ಪ್ರದರ್ಶನ ನಡೆಸಲಾಯಿತು. ಇಲ್ಲಿನ ಗೋಲ್ಡ್ ಪ್ಲಸ್ ಗ್ಲಾಸ್ ಕಾರ್ಖಾನೆ ಆವರಣದಲ್ಲಿ ಭೌತಿಕ ಪ್ರಾತ್ಯಕ್ಷಿಕೆಯ ಮೂಲಕ ನಡೆದ ಈ ಪ್ರದರ್ಶನ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.ಆಪರೇಷನ್ ಅಭ್ಯಾಸ್ ಅಂಗವಾಗಿ ನಾಗರಿಕ ರಕ್ಷಣಾ ಕಾರ್ಯಾಚರಣೆಯ ಸಂಬಂಧ ಸಾರ್ವಜನಿಕರಿಗಾಗಿ ಆಯೋಜಿಸಿದ ಈ ಕಾರ್ಯಾಚರಣೆಯಲ್ಲಿ ಗ್ಯಾಸ್, ರಾಸಾಯನಿಕ ವಸ್ತುಗಳ ಸೋರಿಕೆ ಮತ್ತು ಸ್ಪೋಟದ ವೇಳೆ ಸಂಭವಿಸುವ ಘಟನೆಯನ್ನು ಪ್ರದರ್ಶಿಸಲಾಯಿತು. ಇದನ್ನು ಸ್ಥಳದಲ್ಲಿ ನೆರದಿದ್ದ ಸಾರ್ವಜನಿಕರು ರೋಮಾಂಚನ ಹಾಗೂ ಕುತೂಹಲದಿಂದ ವೀಕ್ಷಿಸಿ, ರಕ್ಷಣಾ ಸಿಬ್ಬಂದಿಯ ಚಾಕಚಕ್ಯತೆಗೆ ಬೆರಗಾದರು.ಅಣಕು ಪ್ರದರ್ಶನದಲ್ಲಿ ಉಗ್ರರ ದಾಳಿ, ಯುದ್ಧದ ವೇಳೆ ಸಂಭವಿಸಬಹುದಾದ ಸ್ಪೋಟಕ ಪ್ರದೇಶದಲ್ಲಿ ಕೈಗೊಳ್ಳಬೇಕಿರುವ ತುರ್ತು ಕ್ರಮಗಳ ಪ್ರಾತ್ಯಕ್ಷಿಕೆ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯಿತು. ರಾಸಾಯನಿಕ ಮತ್ತು ಸ್ಪೋಟಕ ವಸ್ತು ಬಿದ್ದ ಮಾಹಿತಿ, ತಿಳಿದ ತಕ್ಷಣ ಬಾಂಬ್ ಸ್ಕ್ವಾಡ್ ತಕ್ಷಣ ಹೋಗಿ ಸ್ಥಳೀಯ ಪರಿಸ್ಥಿತಿ ಅರಿತು ಇನ್ನೂ ಸ್ಪೋಟಗೊಳ್ಳದ ವಸ್ತುಗಳನ್ನು ನಿಷ್ಕ್ರೀಯಗೊಳಿಸಿದರು.ಪೊಲೀಸ್, ಅಗ್ನಿಶಾಮಕ ದಳ, ಗೃಹರಕ್ಷಕರು, ಆ್ಯಂಬುಲೆನ್ಸ್, ಸ್ವಯಂ ಸೇವಕರು ಬಂದು ಭಯಭೀತರಾದ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವುದು, ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಗೊಳಿಸುವುದು, ಪ್ರಥಮ ಚಿಕಿತ್ಸೆ ಕ್ಯಾಂಪ್‌ಗಳನ್ನು ಪ್ರಾರಂಭಿಸುವ ಅಣಕು ಪ್ರದರ್ಶನ ಜನರಲ್ಲಿ ಜಾಗೃತಿಯುಂಟು ಮಾಡಿತು.ಅಗ್ನಿಶಾಮಕ ದಳ ಜಿಲ್ಲಾ ಅಧಿಕಾರಿ ಶಶಿಧರ ನೀಲಗಾರ, ಗೃಹ ಇಲಾಖೆ ಜಿಲ್ಲಾ ಅಧಿಕಾರಿ ಶಿವಬಸಯ್ಯ, ಮನೋಹರ ರಾಠೋಡ, ಗೋಲ್ದ್‌ಪ್ಲಸ್ ಕಾರ್ಖಾನೆ ವ್ಯವಸ್ಥಾಪಕ ವೆಂಕಟೇಶ ರಾಠೋಡ, ತಹಸೀಲ್ದಾರ ಮಂಜುಳಾ ನಾಯಕ, ಎಡಿಎಚ್‌ಒ ಡಾ.ಎಸ್.ಎಸ್.ಗಡಾದ, ಪಿಎಸ್‌ಐ ಎಸ್.ಎಂ.ಅವಜಿ, ಟಿಎಚ್‌ಒ ಡಾ.ಉದಯ ಕುಡಚಿ, ಉಪತಹಸೀಲ್ದಾರ ಸಿ.ಎ.ಪಾಟೀಲ, ಕಂದಾಯ ನಿರೀಕ್ಷಕರಾದ ಎ.ಎಂ.ಕಮತನೂರ, ಮಲ್ಲಿಕಾರ್ಜುನ ಸಾರಾಪುರೆ, ಚಂದ್ರಕಾಂತ ಕಲಕಾಂಬಕರ, ಗ್ರಾಮ ಲೆಕ್ಕಾಧಿಕಾರಿಗಳಾದ ಉಮೇಶ ನಾಗರಾಳೆ, ಎನ್.ಆರ್.ಪಾಟೀಲ, ಜಗದೀಶ ಕಿತ್ತೂರ, ಎಸ್.ಪ್ರಭಾಕರ, ಬಸವರಾಜ ಚೌಗಲಾ, ಮಲ್ಲೇಶಿ ಕುರಿ, ಗುಂಡುರಾವ್ ಸಾಳುಂಕೆ, ಪ್ರಸನ್‌ಕುಮಾರ, ಕುಮಾರ ರಾಠೋಡ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಪೊಲೀಸ್, ಅಗ್ನಿಶಾಮಕ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಆರೋಗ್ಯ ಇಲಾಖೆ, ರೆಡ್‌ಕ್ರಾಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಎನ್‌ಸಿಸಿ, ಶ್ವಾನದಳ, ಮಾಜಿ ಸೈನಿಕರು ಒಳಗೊಂಡ ಅನೇಕ ತಂಡಗಳು ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದವು.ಯುದ್ಧದ ಪರಿಸ್ಥಿತಿಯಲ್ಲಿ ಜನರು ಹೇಗೆ ಎದುರಿಸಬೇಕೆಂಬುವುದರ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಅಣಕು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ದಾಳಿ ಸಂದರ್ಭದಲ್ಲಿ ಜನ ಭಯಭೀತರಾಗದೇ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂಬುವುದನ್ನು ಜನರಲ್ಲಿ ಅರಿವು ಮೂಡಿಸಲಾಯಿತು.-ಮಂಜುಳಾ ನಾಯಕ,
ತಹಸೀಲ್ದಾರ್.