ಚಿಕ್ಕಮಗಳೂರು: ಕಾಫಿಯ ನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲುಸೀಮೆಯಲ್ಲಿ ಸೋಮವಾರ ಮಧ್ಯಾಹ್ನದ ನಂತರ ಗುಡುಗು ಸಹಿತ ಮಳೆಯಾಗಿದೆ.ಕಡೂರು ತಾಲೂಕಿನ ಬೀರೂರು ಹಾಗೂ ಶೃಂಗೇರಿ, ಕೊಪ್ಪ ತಾಲೂಕುಗಳಲ್ಲಿ ಬಲವಾಗಿ ಗಾಳಿಯೊಂದಿಗೆ ಭಾರೀ ಮಳೆ ಯಾಗಿದೆ. ಹೀಗಾಗಿ ಕೆಲವೆಡೆ ಮರಗಳು ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕದಲ್ಲಿ ಅಡಚಣೆಯಾಗಿತ್ತು.ತರೀಕೆರೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸಂಜೆ 5.30ರ ವೇಳೆಗೆ ಸಾಧಾರಣ ಮಳೆಯಾಗಿದ್ದರೆ, ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಬಲವಾಗಿ ಗಾಳಿ ಬೀಸಿದ್ದು, ಗುಡುಗು ಸಹಿತ ಮಳೆಯಾಗಿದೆ. ಆದರೆ, ಕಡೂರು ಪಟ್ಟಣದಲ್ಲಿ ಸಂಜೆ ವೇಳೆಗೆ ಆಗಿರಲಿಲ್ಲ, ದಟ್ಟವಾಗಿ ಮೋಡ ಕವಿದ ವಾತಾವರಣ ಇತ್ತು.ಚಿಕ್ಕಮಗಳೂರು ನಗರ ಸೇರಿದಂತೆ ಗ್ರಾಮೀಣ ಭಾಗದ ಮಲೆನಾಡು ಪ್ರದೇಶದಲ್ಲಿ ಮಧ್ಯಾಹ್ನ ಒಂದು ಗಂಟೆ ವೇಳೆಗೆ ಆರಂಭ ವಾದ ಮಳೆ ಆಗಾಗ ಬಿಟ್ಟು ಬಿಟ್ಟು ಬರುತ್ತಿತ್ತು. ಈ ವಾತಾವರಣ ಸಂಜೆ 6 ಗಂಟೆವರೆಗೆ ಮುಂದುವರಿದಿದ್ದರಿಂದ ವಾತಾವರಣ ತಂಪಾಗಿತ್ತು. ಮೂಡಿಗೆರೆಯಲ್ಲೂ ಸಾಧಾರಣ ಮಳೆಯಾದರೆ, ಶೃಂಗೇರಿ ತಾಲೂಕಿನಾದ್ಯಂತ ಮಧ್ಯಾಹ್ನ 3 ಗಂಟೆಗೆ ಗುಡುಗು ಸಹಿತ ಆರಂಭವಾದ ಮಳೆ ಸಂಜೆ 5.30ರವರೆಗೆ ಬಿಡುವಿಲ್ಲದೆ ಸುರಿಯಿತು. ಗಾಳಿಯಿಂದಾಗಿ ಮರ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕದಲ್ಲಿ ಅಡಚಣೆಯಾಗಿತ್ತು. ಎನ್.ಆರ್.ಪುರ ತಾಲೂಕಿನ ಕೆಲವೆಡೆ ಮೋಡ ಕವಿದ ವಾತಾವರಣ ಇತ್ತು.
ಗಾಳಿ, ಮಳೆ ಆರ್ಭಟ, ರಸ್ತೆಗುರುಳಿದ ಮರಗಳು
ಶೃಂಗೇರಿ: ತಾಲೂಕಿನಾದ್ಯಂತ ಸೋಮವಾರ ಮಧ್ಯಾಹ್ನ ಗುಡುಗು ಸಿಡಿಲು ಗಾಳಿಯ ಆರ್ಭಟದೊಂದಿಗೆ ಭಾರೀ ಮಳೆ ಸುರಿಯಿತು. ಮಧ್ಯಾಹ್ನ ದಟ್ಟ ಮೋಡ ಕವಿದು ಜೋರಾದ ಗಾಳಿ ಬೀಸಲಾರಂಬಿಸಿತು. ನಂತರ ಗುಡುಗು ಸಿಡಿಲಿನ ಆರ್ಭಟ ದೊಂದಿಗೆ ಕೆಲ ಹೊತ್ತು ಭಾರೀ ಮಳೆ ಸುರಿಯಿತು.ಶೃಂಗೇರಿ ಪಟ್ಟಣದಲ್ಲಿ ದಾರಾಕಾರವಾಗಿ ಗಾಳಿ ಸಹಿತ ಮಳೆ ಸುರಿಯಿತು. ಕೆಲವೆಡೆ ಗಾಳಿ ಆರ್ಭಟಕ್ಕೆ ಮರಗಳು ರಸ್ತೆ, ವಿದ್ಯುತ್ ಲೈನ್ ಮೇಲೆ ಉರುಳಿಬಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತು. ಕುಂಚೇಬೈಲು ಬಳಿ ರಸ್ತೆಯಲ್ಲಿ ವಿದ್ಯುತ್ ಲೈನ್ ಮೇಲೆ ಮರಗಳು ಉರುಳಿಬಿದ್ದು ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ತಂತಿಗಳು ನೆಲದ ಮೇಲೆ ಬಿದ್ದಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
14 ಶ್ರೀ ಚಿತ್ರ 3
--