ಉಪ ಕಾಲುವೆ, ರಸ್ತೆಗಳ ಆಧುನೀಕರಣದಿಂದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ನರೇಂದ್ರಸ್ವಾಮಿ

KannadaprabhaNewsNetwork |  
Published : Jan 25, 2026, 01:45 AM IST
24ಕೆಎಂಎನ್ ಡಿ11 | Kannada Prabha

ಸಾರಾಂಶ

ನಾಲೆಗಳ ಮೂಲಕ ಹೆಚ್ಚಿನ ನೀರನ್ನು ಕಾಲುವೆಗಳಿಗೆ ಹರಿಸಿದರೂ ಕೊನೆ ಭಾಗಕ್ಕೆ ತಲಪಲು ಯಶಸ್ವಿಯಾಗುತ್ತಿರಲ್ಲಿಲ್ಲ. ನಾಲೆಗಳ ಆಧುನೀಕರಣದಿಂದ ಕಡಿಮೆ ಅವಧಿಯಲ್ಲಿಯೇ ಹೆಚ್ಚಿನ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿದೆ .

ಕನ್ನಡಪ್ರಭ ವಾರ್ತೆ ಮಳವಳ್ಳಿ

ಬೆಳೆದಿರುವ ಬೆಳೆಗಳಿಗೆ ಮಾತ್ರ ನೀರು ಕೊಟ್ಟು, ವಿಶ್ವೇಶ್ವರಯ್ಯ ನಾಲೆಯ ಉಪ ಕಾಲುವೆಗಳು ಹಾಗೂ ರಸ್ತೆಗಳನ್ನು ಆಧುನೀಕರಣಗೊಳಿಸಿ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬಹುದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತರ ಸಭೆ ನಡೆಸಿ ಮಾತನಾಡಿದ ಅವರು, ತಾಲೂಕಿನ ಕೆಆರ್‌ಎಸ್‌ ಕೊನೆ ಭಾಗದಲ್ಲಿ ನೀರಿನ ಸಮಸ್ಯೆ ನಿರಂತರವಾಗಿ ಕಂಡು ಬರುತ್ತಿದ್ದ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರಕ್ಕಾಗಿ ಸರ್ಕಾರದ ಮೇಲೆ ಒತ್ತಡ ತಂದು ₹400 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಗೊಳಿಸಲಾಗಿದೆ. ಗುಣಮಟ್ಟದ ಕಾಮಗಾರಿ ನಡೆಯಲು ರೈತರು ಸಹಕಾರ ನೀಡಬೇಕು. ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ತರುವುದು ಬೇಡ ಎಂದು ಸಲಹೆ ನೀಡಿದರು.

ತಾಲೂಕಿನ ಪ್ರಮುಖ ಕೆರೆಗಳಿಗೆ ಸಂಪರ್ಕ ನಾಲೆಗಳನ್ನು ಕಲ್ಪಿಸುವ ಜೊತೆಗೆ ನಾಲೆಗಳನ್ನು ಆಧುನೀಕರಣಗೊಳಿಸಿ, ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರು ಬಿಟ್ಟ ಒಂದೂವರೆ ದಿನದಲ್ಲಿಯೇ ತಾಲೂಕಿಗೆ ನೀರು ಬರುವಂತೆ ಪ್ರಾಮಾಣಿಕವಾಗಿ ಶ್ರಮಿಸಲಾಗುತ್ತಿದೆ ಎಂದರು.

ತಾಲೂಕಿಗೆ ಹಲವು ಯೋಜನೆಗಳನ್ನು ತಂದು ಅನುದಾನ ಬಿಡುಗಡೆಗೊಳಿಸಿ ವಿದ್ಯುತ್, ರಸ್ತೆ, ಆರೋಗ್ಯ, ಕುಡಿಯುವ ನೀರು, ಶಾಲೆಗಳ ಅಭಿವೃದ್ಧಿ ಸೇರಿದಂತೆ ಸರ್ವಾಂಗೀಣವಾಗಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದರೂ ಕೂಡ ಸಾರ್ವಜನಿಕವಾಗಿ ಕೆಲವರು ತಪ್ಪು ಮಾಹಿತಿಯನ್ನು ನೀಡಲು ಮುಂದಾಗುತ್ತಿದ್ದಾರೆ. ಕಾಂಗ್ರೆಸ್ ಮುಖಂಡರು ಯೋಜನೆಗಳ ಲಾಭ ಹಾಗೂ ಉಪಯೋಗಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕೆಂದು ತಿಳಿವಳಿಕೆ ನೀಡಿದರು.

ತುರುಗನೂರು - ಹೆಬ್ಬಕವಾಡಿ - ನಿಡಘಟ್ಟ ಭಾಗದ ನಾಲೆಗಳನ್ನು ಆಧುನೀಕರಣಗೊಳಿಸಿದರೆ ಹೆಚ್ಚಿನ ನೀರು ಕೊನೆ ಭಾಗಕ್ಕೆ ತಲುಪುತ್ತದೆ. ಉಪನಾಲೆಗಳ ಗೇಟ್‌ವಾಲ್‌ಗಳನ್ನು ಸರಿಪಡಿಸಿದರೆ ವ್ಯಯವಾಗುತ್ತಿರುವ ನೀರನ್ನು ಉಳಿತಾಯ ಮಾಡಿ ಮುಂದಿನ ಬಯಲಿಗೆ ಹೋಗಲು ಸಹಕಾರಿಯಾಗುತ್ತದೆ. ಈಗ ನಾಲೆಗಳು ಹಾಗೂ ರಸ್ತೆಗಳು ಅಭಿವೃದ್ಧಿಯಾದರೆ ಸುಮಾರು 35 ವರ್ಷ ರೈತರು ನೆಮ್ಮದಿಯಿಂದ ವ್ಯವಸಾಯ ಮಾಡಬಹುದಾಗಿದೆ ಎಂದರು.

ಕಾವೇರಿ ನೀರಾವರಿ ನಿಗಮ ಅಧೀಕ್ಷಕ ಅಭಿಯಂತರ ರಘುರಾಮನ್ ಮಾತನಾಡಿ, ನಾಲೆಗಳ ಮೂಲಕ ಹೆಚ್ಚಿನ ನೀರನ್ನು ಕಾಲುವೆಗಳಿಗೆ ಹರಿಸಿದರೂ ಕೊನೆ ಭಾಗಕ್ಕೆ ತಲಪಲು ಯಶಸ್ವಿಯಾಗುತ್ತಿರಲ್ಲಿಲ್ಲ. ನಾಲೆಗಳ ಆಧುನೀಕರಣದಿಂದ ಕಡಿಮೆ ಅವಧಿಯಲ್ಲಿಯೇ ಹೆಚ್ಚಿನ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿದೆ ಎಂದು ತಿಳಿಸಿದರು.

ಬೇಸಿಗೆ ಸಮಯದಲ್ಲಿ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನದಲ್ಲಿ ನಾಲೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸುವ ಜೊತೆಗೆ ಹಬ್ಬದ ದಿನಗಳು, ಕೆರೆಗಳಿಗೆ ಹಾಗೂ ಬೆಳೆದಿರುವ ಬೆಳೆಗಳಿಗೆ ನೀರು ನೀಡಲಾಗುವುದು. ರೈತರು ಗೊಂದಲಗೊಳ್ಳುವುದು ಬೇಡ ಎಂದರು.

ಈ ವೇಳೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಬಾಬು ಕೃಷ್ಣ ದೇವ್, ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್. ಭರತೇಶ್ ಕುಮಾರ್, ಮನ್ಮುಲ್ ನಿರ್ದೇಶಕ ಕೃಷ್ಣೇಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!