ಕೊಪ್ಪಳ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಪಿತೂರಿ ಬೆಳಕಿಗೆ ಬಂದಿದ್ದು, ತನಿಖಾ ಏಜೆನ್ಸಿ ದುರ್ಬಳಕೆ ಮಾಡಿಕೊಂಡಿರುವುದು ಗೊತ್ತಾಗುತ್ತದೆ. ಹೀಗಾಗಿ, ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಹಿನ್ನೆಲೆ ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಗ್ರಹಿಸಿದ್ದಾರೆ.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಜವಾಹರಲಾಲ್ ನೆಹರು ಅವರು ಹುಟ್ಟು ಹಾಕಿದ ಪತ್ರಿಕೆ ಇದಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ಅನೇಕರು ಸೇರಿಕೊಂಡು ನಡೆಸುತ್ತಿದ್ದ ಪತ್ರಿಕೆಯಾಗಿದೆ. ಯಾವುದೇ ಲಾಭಾಂಶದ ನಿರೀಕ್ಷೆಯಿಲ್ಲದೆ ನಡೆಸುತ್ತಿದ್ದರು. ಇದರ ಕುರಿತು ಇಲ್ಲ ಸಲ್ಲದ ಆರೋಪ ಮಾಡಿ ನೀಡಿದ ದೂರನ್ನೇ ಎಫ್ ಐ ಆರ್ ಇಲ್ಲದೆ ತನಿಖೆ ಮಾಡಿದ್ದಾರೆ. ಇದರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ದುರ್ಬಳಕೆಯಾಗಿರುವುದು ಗೊತ್ತಾಗುತ್ತದೆ. ಈ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೂರ್ಯ ಮುಳಗದ ಬ್ರಿಟಿಷ್ ಸಾಮ್ರಾಜ್ಯವನ್ನು ಯಾವುದೇ ಆಯುಧವಿಲ್ಲದೆ ಸತ್ಯಾಗ್ರಹ ಎಂಬ ಅಸ್ತ್ರದ ಮೂಲಕ ರಕ್ತಪಾತವಿಲ್ಲದೆ ಭಾರತದಿಂದ ತೊಲಗಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಮಹಾತ್ಮ ಗಾಂಧೀಜಿ ಹೆಸರನ್ನು ಖಾತ್ರಿ ಯೋಜನೆಗೆ ನಾಮಕರಣ ಮಾಡಿದ್ದರೆ ಈಗ ಅದನ್ನು ತೆಗೆದು ಹಾಕಿ ಜಿ.ರಾಮ್. ಜಿ ಎಂದು ನಾಮಕರಣ ಮಾಡಿ, ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.ಗ್ರಾಮೀಣ ಪ್ರದೇಶದ ಬಡವರಿಗೆ ನೆರವಾಗಲು ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಯಾಗಿದೆ. ಆದರೆ ಗಾಂಧೀಜಿ ಅವರ ಹೆಸರನ್ನು ಕೈಬಿಟ್ಟು ಜಿ ರಾಮ್ ಜಿ ಎಂಬ ಹೆಸರು ನಾಮಕರಣ ಮಾಡಿರುವುದು ನಾಥುರಾಮ್ ಗೋಡ್ಸೆ ಹೆಸರನ್ನು ಉಳಿಸುವ ಪ್ರಯತ್ನದಂತೆ ಕಾಣುತ್ತದೆ ಎಂದು ಉಗ್ರಪ್ಪ ಕಿಡಿಕಾರಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಥಾನಗಳು ಕಡಿಮೆಯಾದ ಕಾರಣ ಪ್ರಧಾನಿ ನರೇಂದ್ರ ಮೋದಿ ಹತಾಶರಾಗಿದ್ದು, ಗಾಂಧೀಜಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಅಪಮಾನಿಸುವ ರಾಜಕಾರಣಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದರು.ಆರ್‌ಎಸ್‌ಎಸ್ ಮೇಲೆ ಯಾಕೆ ಪ್ರಕರಣ ದಾಖಲಿಸಿಲ್ಲ? ನೋಂದಣಿ ಇಲ್ಲದೆ ಫುಲ್‌ಟೈಮ್ ಕಾರ್ಯಕರ್ತರಿಗೆ ಸಂಬಳ ಎಲ್ಲಿಂದ ನೀಡುತ್ತೀರಿ? ಇಂತಹವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ರಾಜಕೀಯವಾಗಿ ಹೆದರಿಸುವ ನಿಮ್ಮ ಆಟ ನಡೆಯದು ಎಂದು ಎಚ್ಚರಿಸಿದರು.
ರಾಮಜನ್ಮ ಭೂಮಿಯನ್ನು ಅಷ್ಟೊಂದು ಅಭಿವೃದ್ಧಿ ಮಾಡಿರುವಾಗ ಹನುಮನ ಜನ್ಮಸ್ಥಳ ಅಭಿವೃದ್ಧಿ ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.ವಾಲ್ಮೀಕಿ ಹಗರಣ ಸಹಿಸಿಕೊಳ್ಳುವುದಿಲ್ಲ, ಈಗಾಗಲೇ ರಾಜ್ಯ ಸರ್ಕಾರ ಅಗತ್ಯ ಕ್ರಮವಹಿಸಿದೆ. ಈ ಕುರಿತು ನಾನು ಸುದೀರ್ಘ ಪತ್ರ ಸಹ ಬರೆದಿದ್ದೇನೆ. ನಾಗೇಂದ್ರ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿಕೊಳ್ಳುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ ಎಂದ ಅವರು, ಇದನ್ನು ಹೈಕಮಾಂಡ್ ಮತ್ತು ಸಿಎಂ ನಿರ್ಧರಿಸುತ್ತಾರೆ ಎಂದರು.
ಇನ್ನು ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎನ್ನುವ ಬಗ್ಗೆ ಸದನದಲ್ಲಿ ಚರ್ಚೆಯಾಗಿದೆ. ತಪ್ಪು ಮಾಹಿತಿ ಕೊಟ್ಟಿದ್ದಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಕ್ಷಮೆ ಕೇಳಿದ್ದಾರೆ. ಇದಕ್ಕೆ ಸರ್ಕಾರ ಸೂಕ್ತ ಕ್ರಮ ವಹಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಕೃಷ್ಣ ಇಟ್ಟಂಗಿ, ಶೈಲಜಾ ಹಿರೇಮಠ, ಪ್ರಸನ್ ಗಡಾದ, ಜ್ಯೋತಿ ಗೊಂಡಬಾಳ, ಮಂಜುನಾಥ ಗೊಂಡಬಾಳ, ಕಿಶೋರಿ ಬೂದೂರು, ಅಕ್ಬರ್ ಪಾಶಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.