ಮೋದಿ ಡೋಂಗಿ ಸರ್ಕಾರ ಜನರಿಗೆ ಅರ್ಥವಾಗಿದೆ: ಮೋಟಮ್ಮ

KannadaprabhaNewsNetwork |  
Published : Apr 24, 2024, 02:25 AM IST
ಮೋಟಮ್ಮ | Kannada Prabha

ಸಾರಾಂಶ

ಮೋದಿಯ ಮೋಡಿ ಮಾತಿಗೆ ಮಾರು ಹೋಗಿದ್ದ ಜನರಿಗೆ ಅದು ಡೋಂಗಿ ಸರ್ಕಾರವೆಂದು ಅರ್ಥವಾಗಿದೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.

ಕಾರ್ಪೋರೇಟ್ ಮಾಲೀಕರ ಪರವಾಗಿ ಕೆಲಸ ಮಾಡಿದ ಮೋದಿ

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಮೋದಿಯ ಮೋಡಿ ಮಾತಿಗೆ ಮಾರು ಹೋಗಿದ್ದ ಜನರಿಗೆ ಅದು ಡೋಂಗಿ ಸರ್ಕಾರವೆಂದು ಅರ್ಥವಾಗಿದೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು. ಮಂಗಳವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 10 ವರ್ಷದಲ್ಲಿ ಅದಾನಿ, ಅಂಬಾನಿಯಂತಹ ಕಾರ್ಪೋರೇಟ್ ಮಾಲೀಕರ ಪರವಾಗಿ ಕೆಲಸ ಮಾಡಿದ ಮೋದಿ ಸರ್ಕಾರ ಜನಪರವಾದ ಒಂದೇ ಒಂದು ಯೋಜನೆ ರೂಪಿಸಿಲ್ಲ. ವರ್ಷದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆಂದವರು ವಿಮಾನ, ರೈಲ್ವೆ ಸೇರಿದಂತೆ ಪಂಚರತ್ನವನ್ನು ಕಾರ್ಪೋರೇಟ್ ಕಂಪನಿಗೆ ಮಾರಾಟ ಮಾಡಿ, ಇರುವ ಉದ್ಯೋಗವನ್ನೇ ಕಿತ್ತುಕೊಂಡಿದ್ದಾರೆ ಎಂದರು.

ಎಸ್.ಎಂ.ಕೃಷ್ಣ ಜಾರಿಗೊಳಿಸಿದ ಯಶಸ್ವಿನಿ ಯೋಜನೆಯನ್ನೇ ಬದಲಾಯಿಸಿ ಆಯುಷ್ಮಾನ್ ಭಾರತ ಮಾಡಿದ್ದಾರೆ. ಅದನ್ನು ಪಡೆಯ ಬೇಕೆಂದರೆ ಪರದಾಡುವಂತೆ ಮಾಡಿದ್ದಾರೆ. ಹಾಗಾದರೆ ಅವರ ಅಭಿವೃದ್ಧಿ ಸಾಧನೆಯಾದರೂ ಏನೆಂದು ಪ್ರಶ್ನಿಸಿದರು. ಸುಳ್ಳು ಜಾಹಿರಾತು ನೀಡುವ ಮೂಲಕ ಮತ್ತೊಮ್ಮೆ ಜನರನ್ನು ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. 40 ಪರ್ಸಂಟೇಜ್ ಎಂದು ಬಿರುದು ಪಡೆದಿದ್ದು ಬಿಜೆಪಿ. ಏನೂ ಅಭಿವೃಧ್ಧಿ ಮಾಡದೇ ಈಗ ಬರೀ ಟ್ರೈಲರ್ ದೇಕಾ ಹೆ. ಪಿಚ್ಚರ್ ಅಬಿ ಬಾಕಿ ಹೆ ಎಂದು ಹೇಳುತ್ತಿದ್ದಾರೆ. ಈಗಾಗಲೇ ಟ್ರೈಲರ್ ನೀಡಿಯೇ ಸಾಕಾಗಿದೆ ಇನ್ನು ಪಿಚ್ಚರ್ ಬಿಡುಗಡೆಯಾದರೆ ದೇಶದ ಕಥೆಯೇ ಮುಗಿದಂತೆ ಎಂದು ಹೇಳಿದರು.

ನೇಹಾ ಕೊಲೆ ಪ್ರಕರಣದ ಹೆಸರಿನಲ್ಲಿ ನೀಚ ರಾಜಕಾರಣ ಮಾಡಲು ಮುಂದಾಗಿದ್ದಾರೆ. ಮುರುಳಿ ಮನೋಹರ್ ಮಗಳು ಹಾಗೂ ಅಡ್ವಾನಿ ಮಗಳು ಮುಸ್ಲಿಂ ಪುರುಷರನ್ನು ಮದುವೆಯಾಗಿದ್ದು ಗೊತ್ತಿಲ್ಲವೇ, ಕೇವಲ ಮತಕ್ಕಾಗಿ ಜಾತಿ, ಧರ್ಮದ ನಡುವೆ ವಿಷ ಬೀಜ ಬಿತ್ತುವುದೇ ಇವರ ಸಾಧನೆಯಾಗಿದೆ. ಈಗ ಹಿಂದೂಗಳ ಮಾಂಗಲ್ಯ ಕಿತ್ತು ಮುಸ್ಲಿಂಮರಿಗೆ ಕೊಡುತ್ತಾ ರೆಂದು ಅಪ ಪ್ರಚಾರ ಮಾಡುತ್ತಾ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದಾರೆ. ಓರ್ವ ಮಹಿಳೆಯಿಂದ ಮಾಂಗಲ್ಯ ಕಿತ್ತು ಕೊಡಲು ಸಾಧ್ಯವೇ ಎಂಬ ಸಾಮಾನ್ಯ ಪರಿಜ್ಞಾನ ಮೋದಿ ಅವರಿಗೆ ಇಲ್ಲದಂತಾಗಿದೆ ಎಂದು ಟೀಕಿಸಿದರು.

ಪೋಟೋ ಫೈಲ್‌ ನೇಮ್‌ 23 ಕೆಸಿಕೆಎಂ 3ಮೋಟಮ್ಮ

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ