ಉಚ್ಚಾಟನೆ ಬಳಿಕ ನಿರೀಕ್ಷೆ ಮೀರಿ ಜನ ಬೆಂಬಲ: ಈಶ್ವರಪ್ಪ ಪ್ರತಿಕ್ರಿಯೆ

KannadaprabhaNewsNetwork |  
Published : Apr 24, 2024, 02:25 AM IST
ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಬಿಜೆಪಿಯಿಂದ ನನ್ನ ಉಚ್ಚಾಟನೆಯಿಂದಾಗಿ ನನ್ನ ಸ್ಪರ್ಧೆ ಬಗ್ಗೆ ಎಲ್ಲರಿಗೂ ಸ್ಪಷ್ಟನೆ ಸಿಕ್ಕಿದೆ. ಇದಕ್ಕಾಗಿ ವಿಜಯೇಂದ್ರ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗಬಿಜೆಪಿಯಿಂದ ಉಚ್ಚಾಟನೆಯಿಂದಾಗಿ ನನಗೆ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿದೆ. ಉಚ್ಚಾಟನೆ ಕೇವಲ ತಾತ್ಕಾಲಿಕ ಮಾತ್ರ. ಚುನಾವಣೆಯಲ್ಲಿ ಗೆದ್ದ ಬಳಿಕ ಮತ್ತೆ ಬಿಜೆಪಿ ಸೇರುತ್ತೇನೆ ಎಂದು ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿಯಿಂದ ನನ್ನ ಉಚ್ಚಾಟನೆಯಿಂದಾಗಿ ನನ್ನ ಸ್ಪರ್ಧೆ ಬಗ್ಗೆ ಎಲ್ಲರಿಗೂ ಸ್ಪಷ್ಟನೆ ಸಿಕ್ಕಿದೆ. ಇದಕ್ಕಾಗಿ ವಿಜಯೇಂದ್ರ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಇದೇ ವಿಜಯೇಂದ್ರ ಮತ್ತು ರಾಘವೇಂದ್ರ ಅವರು ಈಶ್ವರಪ್ಪ ನಾಮಪತ್ರ ವಾಪಸ್‌ ಪಡೆಯುತ್ತಾರೆ ಎಂದು ಪದೇ ಪದೇ ಹೇಳುತ್ತಾ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದರು. ಈಗ ಪಕ್ಷದಿಂದ ಉಚ್ಚಾಟನೆ ಆಗಿದೆ. ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ ಎಂಬುದಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ ಎಂದರು. 40 ವರ್ಷಗಳ ಕಾಲದಲ್ಲಿ ಪಕ್ಷ ಕಟ್ಟಿ ಬೆಳೆಸಿದ ನಿಮಗೆ ಉದ್ಘಾಟನೆಯೇ? ಎಂದು ಅನೇಕ ಹಿರಿಯರು ಪ್ರಶ್ನಿಸುತ್ತಿದ್ದಾರೆ. ಇನ್ನೂ ಅನೇಕರು ನಿಮಗೆ ಅನ್ಯಾಯವಾಗಿದೆ, ನಿಮ್ಮ ಜೊತೆ ನಾವಿದ್ದೇವೆ ಎಂದು ಕರೆ ಮಾಡಿ ತಿಳಿಸುತ್ತಿದ್ದಾರೆ. ದಿನೇ ದಿನೇ ನನ್ನ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿದೆ ಎಂದು ಹೇಳಿದರು.ಈಶ್ವರಪ್ಪ ಅವರು ಚುನಾವಣೆಯಲ್ಲಿ ನಿಲ್ಲುತ್ತಾರೋ ಇಲ್ಲವೋ ಎಂದು ನಿನ್ನೆಯವರೆಗೆ ಹಲವರಲ್ಲಿ ಗೊಂದಲ ಇತ್ತು. ಈಶ್ವರಪ್ಪ ಸ್ಪರ್ಧೆ ಇನ್ನು ಖಚಿತ ಎಂದು ತಿಳಿಯುತ್ತಿದ್ದಂತೆ ಇತರೆ ಪಕ್ಷದ ಅನೇಕರು ನನ್ನ ಬೆಂಬಲಕ್ಕೆ ಬರುತ್ತಿದ್ದಾರೆ. ಹೊಸನಗರ ತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು, ಇತರೆ ಪಕ್ಷದ ಪ್ರಮುಖರು ರಾಷ್ಟ್ರ ಭಕ್ತರ ಬಳಗ ಸೇರ್ಪಡೆಯಾಗಿದ್ದಾರೆ. ಸೊರಬ ತಾಲೂಕಿನ ಆನವಟ್ಟಿ ಭಾಗದಲ್ಲೂ ಕೂಡ ಅನೇಕ ಕಾರ್ಯಕರ್ತರು ರಾಷ್ಟ್ರಭಕ್ತರ ಬಳಗ ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಪಕ್ಷ ಮುಕ್ತ.. ಮುಕ್ತ..: ತಂದೆಯ ಬೆಂಬಲದಿಂದ ರಾಜ್ಯಾಧ್ಯಕ್ಷನಾಗಿರುವ ಎಳಸು ವಿಜಯೇಂದ್ರ ನಿಮ್ಮನ್ನು ಪಕ್ಷದಿಂದ ಹೊರಹಾಕಿದ್ದಾನೆ. ನಿಮಗೆ ಅನ್ಯಾಯವಾಗಿದೆ ಎಂದು ಕಾರ್ಯಕರ್ತರು ನೋವಿನಿಂದ ಕರೆ ಮಾಡುತ್ತಿದ್ದಾರೆ. ಅವರಿಂದ ಈಶ್ವರಪ್ಪ ಹಾಗೂ ಹಿಂದುತ್ವಕ್ಕೆ ಅನ್ಯಾಯವಾಗಿದೆ. ಹೀಗಾಗಿ ಪ್ರತಿ ಬೂತ್‌ನಲ್ಲೂ ಈಶ್ವರಪ್ಪ ಅವರಿಗೆ ಮತ ಕೊಡಬೇಕು ಎಂದು ಜನರೇ ತೀರ್ಮಾನ ಮಾಡಿದ್ದಾರೆ. ನಾನು ಚುನಾವಣೆಯಲ್ಲಿ ಗೆದ್ದ ಬಳಿಕ ಚಿತ್ರಣವೇ ಬದಲಾಗುತ್ತದೆ. ಪಕ್ಷ ಮುಕ್ತ ಮುಕ್ತವಾಗುತ್ತದೆ ಎಂದರು.ರೈತ ಚಿಹ್ನೆ ಸಿಕ್ಕಿದ್ದು ನನ್ನ ಪುಣ್ಯ: ಲೋಕಸಭಾ ಚುನಾವಣೆಗೆ ನನಗೆ ರೈತನ ಚಿಹ್ನೆ ಸಿಕ್ಕಿರುವುದು ಯಾವುದೋ ಜನ್ಮದ ಪುಣ್ಯ. ನಿಮಗೆ ಇಂತ ಒಳ್ಳೆ ಚಿಹ್ನೆ ಸಿಕ್ಕಿದೆ ಎಂದು ಅನೇಕರು ಚಿಹ್ನೆ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಭದ್ರಾವತಿಯಲ್ಲಿ ಹಿಂದುತ್ವವಾದಿ ಯುವಕರು ರಾಷ್ಟ್ರಭಕ್ತರ ಬಳಗ ಸೇರ್ಪಡೆಯಾಗಿದ್ದಾರೆ. ಬೈಂದೂರಿನಲ್ಲಿ ಮೀನುಗಾರರು ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗೆ ಎಲ್ಲಾ ವರ್ಗದ ಜನತೆ ನನಗೆ ಬೆಂಬಲ ನೀಡುತ್ತಿದ್ದು, ಗೆದ್ದ ಬಳಿಕ ಅವರ ಅಪೇಕ್ಷೆಗೆ ತಕ್ಕಂತೆ ಸಂಘಟನೆ ಕಟ್ಟುತ್ತೇನೆ. ಅವರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು. ಜನ್ಮ ಇರೋವರೆಗೂ ಕಾಂಗ್ರೆಸ್‌ಗೆ ಹೋಗಲ್ಲ ಬಿಜೆಪಿ ಪಕ್ಷ ನನಗೆ ತಾಯಿ ಇದ್ದಂತೆ. ಯಡಿಯೂರಪ್ಪ ಅವರು ಪಕ್ಷ ಬಿಟ್ಟು ಕೆಜೆಪಿ ಕಟ್ಟಿದರು. ನಾನು ಯಾವತ್ತು ಪಕ್ಷ ಬಿಟ್ಟು ಹೋಗುವ ಬಗ್ಗೆ ಕಿಂಚಿತ್ತು ಯೋಚಿಸಿಲ್ಲ. ಕೆಲ ಷಡ್ಯಂತ್ರದಿಂದ ತಾತ್ಕಲಿಕವಾಗಿ ಪಕ್ಷದಿಂದ ಹೊರಗಿದ್ದೇನೆ. ಚುನಾವಣೆ ಬಳಿಕ ಅವರೇ ಬಂದು ಕರಿತಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗಿ ಸೋತಿದ್ದ ಜಗದೀಶ್‌ ಶೆಟ್ಟರ್‌ ಅನ್ನೇ ಕರೆದುಕೊಂಡು ಬಂದು ಲೋಕಸಭೆಗೆ ಟಿಕೆಟ್‌ ಕೊಡಿಸಿದ್ದಾರೆ. ಪಕ್ಷದ ಕಟ್ಟಿ ಬೆಳೆಸಿದ ನನ್ನನ್ನು ಬಿಜೆಪಿಯಿಂದ ದೂರ ಮಾಡಲು ಆಗಲ್ಲ. ನನ್ನನ್ನು ಪಕ್ಷದಿಂದ ಹೊರಹಾಕಬೇಕು ಎಂದು ಅವರು ಬಹಳ ಪ್ರಯತ್ನ ಮಾಡಿದ್ದರು. ಈಗ ಅವರಿಗೆ ಸಮಾಧಾನವಾಗಿದೆ. ಆದರೆ, ಚುನಾವಣೆ ಬಳಿಕ ಮತ್ತೆ ಬಿಜೆಪಿಗೆ ಹೋಗುತ್ತೇನೆ. ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುತ್ತೇನೆ. ನನ್ನ ಜನ್ಮ ಇರೋವರೆಗೂ ಕಾಂಗ್ರೆಸ್‌ ಗೆ ಹೋಗಲ್ಲ ಎಂದರು.

ಗೋಷ್ಠಿಯಲ್ಲಿ ವಾಟಗೋಡು ಸುರೇಶ್‌, ಗ್ರಾಪಂನ ಮಾಜಿ ಅಧ್ಯಕ್ಷೆ ಲೀಲಾವತಿ, ಗ್ರಾಪಂ ಮಾಜಿ ಸದಸ್ಯರಾದ ನಳೀನ ರಾವ್‌, ಭಗೀರಥ ಭಟ್‌, ಕಲ್ಕಿ ಮಹೇಶ್‌, ಕುಬ್ಳೆ ಅಶೋಕ್‌, ಎಚ್‌.ಮಂಜಪ್ಪ, ಡಾಕಪ್ಪ, ಎ.ಕೆ.ಭದ್ರಪ್ಪ, ನಾಗೇಂದ್ರ, ಗೋಪಾಲಗೌಡ, ದ್ವಾರಕೇಶ್‌ ಸೇರಿದಂತೆ ಅನೇಕರು ಹಾಜರಿದ್ದರು.ಹಣೆಯ ಕುಂಕುಮ ಅಳಿಸಿದ ನಡೆ ಖಂಡಿಸಿ ಕ್ಷಮೆಗೆ ಈಶ್ವರಪ್ಪ ಆಗ್ರಹಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಮತ್ತವರ ಪತಿ ಚುನಾವಣಾ ಪ್ರಚಾರದ ವೇಳೆ ಹಣೆಯಿಂದ ಕುಂಕುಮ ಅಳಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಇವರೆಲ್ಲರೂ ಸಾರ್ವಜನಿಕರ ಕ್ಷಮೆ ಕೋರಬೇಕು ಎಂದು ಸ್ವತಂತ್ರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ವೀಡಿಯೋಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು ಯಾವುದೇ ನೀತಿ ನಿಯಮ ಇಲ್ಲದೆ ಕಾಂಗ್ರೆಸ್ ಜೊತೆ ಇವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಯಾವಾಗ ಬೇಕಾದರೂ ಕುಂಕುಮ ತೆಗೆಯುತ್ತಾರೆ. ಯಾವಾಗ ಬೇಕಾದರೂ ಹಚ್ಚಿಕೊಳ್ಳುತ್ತಾರೆ. ಅದೇ ರೀತಿ ಗೀತಾ ಮತ್ತವರ ಪತಿ ಅವರೂ ಕುಂಕುಮ ಅಳಿಸಿ ಹಾಕಿದ್ದನ್ನು ಪ್ರಶ್ನೆ ಮಾಡುತ್ತೇನೆ. ಇವರೆಲ್ಲರೂ ಹಿಂದು ಸಮಾಜದ ಬಳಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.ಮೋದಿ ಟೀಕೆ ಮಾಡಿದರೆ ಸಿಗೋದು ಚೊಂಬೇ: ಮೋದಿಯನ್ನು ಕಾಂಗ್ರೆಸ್ಸಿಗರು ಟೀಕೆ ಮಾಡಿದರೆ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಅವರಿಗೆ ಸಿಗುವುದು ಚೊಂಬೇ. ಮೋದಿ ಅವರ ವಿರುದ್ದ ಮಾತನಾಡುವ ನೈತಿಕತೆ ಕಾಂಗ್ರೆಸ್‌ನವರಿಗೆ ಇಲ್ಲ. ತಾಳಿ ಪವಿತ್ರವಾದ ಹಿಂದೂ ಮಹಿಳೆಯರ ಸಂಕೇತ. ಮೋದಿ ಹೇಳಿಕೆ ಬಗ್ಗೆ ಚರ್ಚೆ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸೇರ್ಪಡೆ: ಈ ಸಂದರ್ಭ ವಾಟಗೋಡು ಸುರೇಶ್‌ ನೇತೃತ್ವದಲ್ಲಿ ಹೊಸನಗರ ತಾಲೂಕಿನ ನಗರ, ಮಾಸ್ತಿಕಟ್ಟೆ, ಯಡೂರು, ಕೊಡೂರು ಸೇರಿದಂತೆ ಅನೇಕ ಗ್ರಾಪಂ ಅಧ್ಯಕ್ಷರು, ಸದಸ್ಯರು ಸೇರಿದಂತೆ ನೂರಾರು ಸಂಖ್ಯೆ ಕಾರ್ಯಕರ್ತರು ರಾಷ್ಟ್ರಭಕ್ತರ ಬಳಗವನ್ನು ಸೇರ್ಪಡೆಗೊಂಡರು. ಇದೇ ವೇಳೆ ಕೆ.ಎಸ್‌.ಈಶ್ವರಪ್ಪ ಅವರ ಚುನಾವಣೆ ಸ್ಪರ್ಧೆಯ ಚಿಹ್ನೆ ಹಾಗೂ ಕ್ರಮ ಸಂಖ್ಯೆವುಳ್ಳ ಪೋಸ್ಟರ್‌ ಬಿಡುಗಡೆ ಮಾಡಲಾಯಿತು.ಕಬ್ಬಿನ ಜಲ್ಲೆ ಜತೆ ರೈತ ಚಿಹ್ನೆಯನ್ನಿಡಿದು ಪ್ರಚಾರ: ನನ್ನನ್ನು ಚುನಾವಣೆಯಲ್ಲಿ ಸೋಲಿಸಲು ಪಿತೂರಿ ಮಾಡಿ ನನ್ನ ಹೆಸರಿನ ವ್ಯಕ್ತಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಜನ ದಡ್ಡರಲ್ಲ. ನನ್ನ ಪೋಟೊ ನೋಡಿ ಕಬ್ಬಿನ ಜಲ್ಲೆ ಜೊತೆ ರೈತ ಗುರುತಿಗೇ ಮತವನ್ನು ಹಾಕುತ್ತಾರೆ ಎಂದು ಕೆ.ಎಸ್‌.ಈಶ್ವರಪ್ಪ ಹೇಳಿದರು.

ಚುನಾವಣೆ ಪ್ರಚಾರ ಬಿರುಸಾಗಿ ನಡೆಯುತ್ತಿದೆ. ಕಾರ್ಯಕರ್ತರು ಬಹಳ ಉತ್ಸಹದಿಂದ ಕೆಲಸ ಮಾಡುತ್ತಿದ್ದಾರೆ. ಇಷ್ಟು ದಿನ ಚಿಹ್ನೆ ಇರಲಿಲ್ಲ. ಈಗ ಚಿಹ್ನೆ ಬಂದಿದೆ. ನಾಳೆಯಿಂದ ಕ್ರಮ ಸಂಖ್ಯೆ 8, ಕೆ.ಎಸ್‌.ಈಶ್ವರಪ್ಪ, ಕಬ್ಬಿನ ಜಲ್ಲೆ ಜೊತೆ ರೈತ ಚಿಹ್ನೆ ಇರುವ ಕರಪತ್ರ ಹಿಡಿದು ಕಾರ್ಯಕರ್ತರು ಮನೆ ಮನೆಗೆ ಹೋಗಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಣ್ಣ ಭಾಷೆಗಳನ್ನು ಉಳಿಸಿ, ಬೆಳೆಸಿ: ಅಶೋಕ ಸಂಗಪ್ಪ
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಿ: ವೀಣಾ ಅಠವಾಲೆ