ಕನ್ನಡಪ್ರಭ ವಾರ್ತೆ ಬೀದರ್
ಕಾಂಗ್ರೆಸ್ ಗ್ಯಾರಂಟಿ ನೀಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಗ ಜನತೆಗೆ ಗ್ಯಾರಂಟಿ ನೀಡಿ ನಮ್ಮ ಸರ್ಕಾರದ ಕಾಪಿ ಹೊಡೆಯುತ್ತಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ವ್ಯಂಗ್ಯವಾಡಿದರು.ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿಯನ್ನು ಮೊದಲು ಟೀಕಿಸಿದ ಬಿಜೆಪಿ ಸರ್ಕಾರವೇ ಈಗ ಜನತೆಗೆ ಗ್ಯಾರಂಟಿಗಳನ್ನು ನೀಡಲು ಮುಂದಾಗಿದೆ ಎಂದರು.
ಹಿಂದಿನ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರು ಬೆಲೆ ನಿಯಂತ್ರಣ ಮಾಡಿ ಈ ರಾಷ್ಟ್ರವನ್ನು ಉತ್ತಮ ರೀತಿಯಿಂದ ಮುನ್ನಡೆಸಿಕೊಂಡು ಹೋಗಿದ್ದರು. ಆದರೆ ನಮ್ಮ ಕಾಂಗ್ರೆಸ್ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡಿ, ಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿ ಮಾಡಲಿಲ್ಲ. ಸಾಲ ಮನ್ನಾ ಮಾಡಲಿಲ್ಲ. ಸುಳ್ಳು ಎಂದರೆ ಬಿಜೆಪಿ, ಬಿಜೆಪಿ ಎಂದರೆ ಸುಳ್ಳು. ಇದೊಂದು ಭ್ರಷ್ಟ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ವಾಮಚಾರ ನೀತಿ, ಭ್ರಷ್ಟಾಚಾರದ ತಾಂಡವ, ಜನ ವಿರೋಧಿ ನೀತಿಯಿಂದ ಕರ್ನಾಟಕದಲ್ಲಿ ಜನರು ಅವರಿಗೆ ತಕ್ಕ ಪಾಠ ಕಲಿಸಿದರು. ಬಿಜೆಪಿಗರು ಅಧಿಕಾರದ ಅಟ್ಟಹಾಸದಿಂದ ಮೆರೆದು ಬರೀ ಲಂಚಗುಳಿತನದಲ್ಲಿ ಮುಳುಗಿ ಹೋಗಿದ್ದಾರೆ. ಈ ಬಾರಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ಸಾಗರ ಖಂಡ್ರೆ ಒಬ್ಬ ಯುವಕ. ಉತ್ಸಾಹಿ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಸಂಸತ್‌ಗೆ ಕಳಿಸಬೇಕೆಂದು ಕರೆ ನೀಡಿದರು.
ವಿಧಾನ ಪರಿಷತ್ ಸಚೇತಕರು ಹಾಗೂ ಎಂಎಲ್‌ಸಿ ಸಲೀಮ್ ಅಹ್ಮದ್ ಮಾತನಾಡಿ, ಗ್ಯಾರಂಟಿ ಯೋಜನೆಗಳ ಮೂಲಕ ನಾವು ಜನರ ವಿಶ್ವಾಸ ಗಳಿಸಿಕೊಂಡಿದ್ದೇವೆ. ಸುಳ್ಳು ಹೇಳುವುದರಲ್ಲಿ ಆಸ್ಕರ್ ಪ್ರಶಸ್ತಿ ನೀಡಬೇಕಾದರೆ ಅದು ಬಿಜೆಪಿ ಸರ್ಕಾರಕ್ಕೆ ನೀಡಬೇಕು ಎಂದರು.ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನಗಳ ಒಳಗಾಗಿ 15 ಲಕ್ಷ ರು. ದೇಶದ ನಿವಾಸಿಗ ಪ್ರತಿ ಅಕೌಂಟ್‌ಗೆ ಹಾಕಲಿಲ್ಲ. ಉದ್ಯೋಗ ಸೃಷ್ಟಿಸಲಿಲ್ಲ. ರೈತರ ಆದಾಯ ದ್ವಿಗುಣ ಮಾಡಲಿಲ್ಲ. ಬದಲಾಗಿ ಜನರು ತತ್ತರಿಸುವಂತೆ ಅಧಿಕಾರ ನಡೆಸಿದ್ದಾರೆ. 10 ವರ್ಷಗಳಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಅದನ್ನು ತಡೆಯುವ ಶಕ್ತಿ ಬಿಜೆಪಿಗಿಲ್ಲ ಎಂದರು.
ಜನರಿಗೆ ಕಾಮ್ ಕಿ ಬಾತ್ ಅವಶ್ಯಕ: ಜನತೆಗೆ ಮನ್ ಕಿ ಬಾತ್ ಗಿಂತ ಕಾಮ್ ಕಿ ಬಾತ್ ಅವಶ್ಯಕವಾಗಿದೆ. ಮೋದಿಯವರು ಅದಾನಿ ಅಂಬಾನಿಯಂತವರಿಗೆ ಸಹಾಯ ಮಾಡುತ್ತಾರೆ. ವಿದೇಶ ಸುತ್ತಾಡುತ್ತಾರೆ. ಕಳೆದ 70 ವರ್ಷಗಳಲ್ಲಿ ಜನರಲ್ಲಿದ್ದ ಶಾಂತಿ ನೆಮ್ಮದಿಯನ್ನು ಬಿಜೆಪಿ ಸರ್ಕಾರ 10 ವರ್ಷಗಳಲ್ಲಿ ಹಾಳು ಮಾಡಿದೆ ಎಂದರು. ರಾಜ್ಯದಲ್ಲಿ ಬರಗಾಲ ಬಿದ್ದರೂ ಬರ ಪರಿಹಾರ ನೀಡಲಿಲ್ಲ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ಎಂಎಲ್ಸಿ ಅರವಿಂದಕುಮಾರ ಅರಳಿ, ಅಬ್ದುಲ್ ಮನ್ನಾನ್ ಸೇಠ, ಸಂಜಯ ಜಾಗೀರದಾರ, ಚಂದ್ರಕಾಂತ ಹಿಪ್ಪಳಗಾಂವ್, ರೋಹಿದಾಸ್ ಘೋಡೆ, ಜಾರ್ಜ್ ಫರ್ನಾಂಡಿಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.