ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಪ್ರಶಿಕ್ಷಾ ವರ್ಗ ಸಮಾರಂಭ ಉದ್ಘಾಟನೆ
ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಿಂತಲೂ ಮಿಗಿಲಾದ ಕಾರ್ಯಕ್ರಮಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುತ್ತಿದೆ. ಈ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೇಳಿದರು.ಶನಿವಾರ ನಗರದ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ನಗರ ಮಂಡಲದ ಪ್ರಶಿಕ್ಷಾ ವರ್ಗ ಸಮಾರಂಭ ಉದ್ಘಾಟಿಸಿ ಮಾತನಾಡಿ ಕಾಂಗ್ರೆಸಿಗರು ಬರೇ ಪಂಚ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾರೆ. 3 ವರ್ಷದಲ್ಲಿ ಪಂಚ ಗ್ಯಾರಂಟಿ ಜಾಹಿರಾತಿಗಾಗಿ ₹532 ಕೋಟಿ ರಾಜ್ಯ ಸರ್ಕಾರ ವೆಚ್ಚ ಮಾಡಿದೆ. ಆದರೆ, ಅನ್ನಭಾಗ್ಯಯೋಜನೆಯ 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ನಮ್ಮ ಕಾರ್ಯಕರ್ತರು ಇದನ್ನು ಜನರಿಗೆ ಹೇಳುವುದಿಲ್ಲ ಎಂದು ವಿಷಾಧಿಸಿದರು.ಯುವನಿಧಿ ಯೋಜನೆಯಡಿ ನಿರುದ್ಯೋಗಿ ವಿದ್ಯಾವಂತರಿಗೆ ಮಾಸಿಕ ₹3 ಸಾವಿರ ಲೆಕ್ಕದಲ್ಲಿ ವಾರ್ಷಿಕ ₹650 ಕೋಟಿ ಮೀಸಲಿಡುವುದಾಗಿ ರಾಜ್ಯ ಹೇಳುತ್ತಿದೆ. ಆದರೆ, ಕೇಂದ್ರ ಸರ್ಕಾರ ಪ್ರಧಾನ ಮಂತ್ರಿರೋಜ್ಗಾರ್ ಯೋಜನೆಯಡಿ ಪ್ರತಿ ವರ್ಷ ₹550 ಕೋಟಿ ಅನುದಾನ ನೀಡುತ್ತಿದೆ. ₹1.60 ಲಕ್ಷ ಜನರಿಗೆ ಕೆಲಸ ಸಿಗುತ್ತಿದೆ ಎಂದು ವಿವರಿಸಿದರು.ಮಾತೃ ವಂದನಾ ಯೋಜನೆಯಡಿ ಮೊದಲ ಹೆರಿಗೆ ಸಂದರ್ಭದಲ್ಲಿ ಮಹಿಳೆಗೆ ₹5 ಸಾವಿರ ಹಣ ಕೇಂದ್ರದಿಂದ ಬರುತ್ತದೆ. ಇದಕ್ಕಾಗಿ ಪ್ರತಿ ವರ್ಷ ₹350 ಕೋಟಿ ರಾಜ್ಯಕ್ಕೆ ನೀಡುತ್ತಿದೆ. ಇದನ್ನು ನಮ್ಮ ಬೂತ್ ಮಟ್ಟದಲ್ಲಿ ತಿಳಿಸುವ ಕೆಲಸ ಮಾಡ ಬೇಕಿದೆ ಎಂದರು.ಹೃದಯಾಘಾತಕ್ಕೆ ಒಳಗಾದವರಿಗೆ ಸ್ಟೆಂಟ್ ಅಳವಡಿಸಲು ಆಯುಷ್ಮಾನ್ ಯೋಜನೆಯಡಿ ₹2.50 ಲಕ್ಷ ನೆರವು ಸಿಗುತ್ತಿದೆ. ಇದರಿಂದಲೇ ₹1800 ಕೋಟಿ ಈ ವರೆಗೆ ಉಳಿತಾಯವಾಗಿದೆ ಎಂದರು.ಸೂರ್ಯೋದಯ ಯೊಜನೆಯಡಿ ಜಮೀನು ಹೊಂದಿದವರಿಗೆ ಸೋಲಾರ್ ಪಂಪ್‌ಸೆಟ್ ಅಳವಡಿಸಲು ₹5 ಲಕ್ಷ ವರೆಗಿನ ಸಲಕರಣೆ ಕೊಡುತ್ತಿದೆ. ಸೂರ್ಯೋದಯ ಯೋಜನೆಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲು ₹60 ರಿಂದ ₹70 ಸಾವಿರ ಸಹಾಯಧನ ಹಾಗೂ ಸಾಲ ಸೌಲಭ್ಯ ಸಿಗುತ್ತಿದೆ. ಚೀಲಕ್ಕೆ ₹1800 ಯೂರಿಯಾ ಗೊಬ್ಬರ ಈಗ ₹300 ಗೆ ಸಿಗುತ್ತಿದೆ. ಡಿಎಪಿ ಗೊಬ್ಬರಕ್ಕೂ ಸಹಾಯಧನ ಕೇಂದ್ರಕೊಡುತ್ತಿದೆ. ಇಡೀ ದೇಶದಲ್ಲಿ ಯೂರಿಯಾ ಗೊಬ್ಬರಕ್ಕೆ ವಾರ್ಷಿಕ ₹1.10 ಲಕ್ಷ ಕೋಟಿ ಹಾಗೂ ಡಿಎಪಿ ಗೆ ಸುಮಾರು ₹70 ಸಾವಿರ ಕೋಟಿ ಸಹಾಯಧನ ನೀಡುತ್ತಿದ್ದು, ಇದರಲ್ಲಿ ಕರ್ನಾಟಕ ರಾಜ್ಯಕ್ಕೆ ₹10.12 ಸಾವಿರ ಕೋಟಿ ದೊರೆಯುತ್ತಿದೆ ಎಂದರು.
ಹೀಗಿದ್ದರೂ ಹುಟ್ಟಿನಿಂದ ಸಾವಿನವರೆಗೆ, ಹಾಲಿನಿಂದ ಆಲ್ಕೋಹಾಲ್‌ವರೆಗೆ, ಅಗರ ಬತ್ತಿಯಿಂದ ಬೀಡಿ, ಸಿಗರೇಟ್‌ವರೆಗೆ, ವಿದ್ಯುತ್‌ನಿಂದ ಟ್ರಾನ್ಸ್ ಫಾರ್ಮರ್‌ವರೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೆಲೆ ಹೆಚ್ಚಿಸಿದೆ. ಆದರೂ ಕೇವಲ ಗ್ಯಾರಂಟಿ, ಗ್ಯಾರಂಟಿ ಎನ್ನುತ್ತಾರೆ ಎಂದು ಟೀಕಿಸಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ ಮಾತನಾಡಿ, ಬಿಜೆಪಿ ಬೇರೆಲ್ಲಾ ಪಕ್ಷಕ್ಕಿಂತ ವಿಭಿನ್ನ. ಇಲ್ಲಿ ವ್ಯಕ್ತಿ ಪೂಜೆ ಇಲ್ಲ. ಸದ್ಯದಲ್ಲೇ ಗ್ರಾ.ಪಂ. ನಿಂದ ಹಿಡಿದು ವಿಧಾನಸಭೆವರೆಗೆ ಚುನಾವಣೆಗಳು ಬರಲಿವೆ. ನಮ್ಮ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಹಿಂದೆ ಗಳಿಸಿದ ಮತಗಳಿಗಿಂತ ಹೆಚ್ಚು ಮತ ಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.