ಕನ್ನಡಪ್ರಭ ವಾರ್ತೆ ತುಮಕೂರು
ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ತುಮಕೂರು ಲೋಕಸಭಾ ಕ್ಷೇತ್ರ ಉಸ್ತುವಾರಿ, ಶಾಸಕ ಗೋಪಾಲಯ್ಯ ಮಾತನಾಡಿ, ಪ್ರಧಾನಿ ಸ್ಥಾನದಲ್ಲಿ ನರೇಂದ್ರ ಮೋದಿಯವರಿಗೆ ಸರಿಸಾಟಿಯಾಗಬಲ್ಲ, ಮೋದಿಯವರಿಗೆ ಹೋಲಿಕೆ ಮಾಡಬಹುದಾದ ಸಮರ್ಥ ನಾಯಕರು ಬೇರೆ ಪಕ್ಷಗಳಲ್ಲಿ ಇಲ್ಲ ಎಂಬುದು ಜನಸಾಮಾನ್ಯರಿಗೂ ತಿಳಿದಿದೆ. ಚುನಾವಣೆ ಗೆಲುವಿಗೆ ಮೋದಿ ಅಂಶವೂ ಪ್ರಮುಖ ಕಾರಣವಾಗುತ್ತದೆ. ಇದರ ಜೊತೆಗೆ ಮುಖಂಡರು ಕಾರ್ಯಕರ್ತರು, ಮೋದಿ ಸರ್ಕಾರದ ಜನಪರ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು ಎಂದು ಮನವಿ ಮಾಡಿದರು.
ಪ್ರಧಾನಿ ಮೋದಿಯವರ ಸರ್ಕಾರ ದೇಶದ ಅಭಿವೃದ್ಧಿಗೆ, ಜನರ ಸಂಕಷ್ಟ ನಿವಾರಣೆಗೆ ಹಲವಾರು ಉತ್ಕೃಷ್ಟ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಈ ಕಾರ್ಯಕ್ರಮಗಳನ್ನು ಗುರಿ ತಲುಪಿಸಲು ಮೊತ್ತೊಮ್ಮೆ ಮೋದಿಯವರು ಪ್ರಧಾನಿ ಆಗಬೇಕಾದ ಅಗತ್ಯವಿದೆ. ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸಲು ಎಲ್ಲರ ಶ್ರಮ ಅಗತ್ಯ ಎಂದರು.ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಸಹಜವಾಗಿ ಪಕ್ಷದ ಸಂಘಟನೆ, ಬೆಳವಣಿಗೆಗೆ ಒತ್ತು ಸಿಗುತ್ತದೆ. ನಾವೀಗ ಅಂತಹ ಸಮಯದಲ್ಲಿದ್ದೇವೆ. ಈ ಕಾರ್ಯಾಲಯ ಆರಂಭವಾಗುವುದರೊಂದಿಗೆ ಪಕ್ಷದ ವಿಜಯದ ಬಾಗಿಲು ತೆರೆಯುವಂತಾಗಲಿ, ಪಕ್ಷದ ಪ್ರತಿಯೊಬ್ಬರೂ ಮನಸಿಟ್ಟು ಕೆಲಸ ಮಾಡಿದರೆ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಸಾಧ್ಯವಿದೆ. ಚುನಾವಣೆ ಹಡಗಿನಲ್ಲಿ ಸಾಗುತ್ತಿರುವ ನಾವು ಹಡಗಿನ ತೂತು ಕೊರೆಯದೆ, ತೂತುಗಳಿಗೆ ತೇಪೆ ಹಾಕಿಕೊಂಡು ಗೆಲುವಿನ ದಡ ಸೇರಿಸಲು ಸಂಕಲ್ಪ ಮಾಡಬೇಕು ಎಂದರು.ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್‌ಗೌಡ ಮಾತನಾಡಿ, ಪಕ್ಷದ ಹಿರಿಯರು ಗೊಂದಲ ಸೃಷಿಯಾಗುವಂತಹ ಹೇಳಿಕೆ ನೀಡಬೇಡಿ, ಅಂತಹ ಹೇಳಿಕೆಗಳು ಕಾರ್ಯಕರ್ತರಲ್ಲೂ ಗೊಂದಲ ಉಂಟುಮಾಡಿ ಚುನಾವಣೆ ಮೇಲೂ ಪರಿಣಾಮ ಬೀರಬಹುದು. ಪ್ರತಿ ಬೂತ್‌ನಲ್ಲೂ ಈ ಬಾರಿ ಶೇಕಡ 10ರಷ್ಟು ಹೆಚ್ಚು ಮತಗಳು ಬಿಜೆಪಿಗೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಮೋದಿಯವರು ಹೇಳಿದ್ದಾರೆ ಅದರಂತೆ ಎಲ್ಲರೂ ಕಾಳಜಿಯಿಂದ ಕೆಲಸ ಮಾಡಬೇಕು ಎಂದರು.
ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ನಾಯಕರು ಹಾಗೂ ಕಾರ್ಯಕರ್ತರು ಉತ್ತಮ ನಡೆನುಡಿ, ಜನರನ್ನು ವಿಶ್ವಾಸದಿಂದ ಬೆರೆಯುವ ಮನೋಭಾವ ಬೆಳೆಸಿಕೊಂಡು ಕಾರ್ಯೋನ್ಮುಖರಾದರೆ ಚುನಾವಣೆಯ ಗೆಲುವು ಸುಲಭವಾಗುತ್ತದೆ ಎಂದರು.
ತುಮಕೂರು ಜಿಲ್ಲೆ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ಮಧುಗಿರಿ ಜಿಲ್ಲಾಧ್ಯಕ್ಷ ಹನುಂತೇಗೌಡ, ಶಾಸಕ ಜಿ.ಬಿ. ಜ್ಯೋತಿಗಣೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ರಾಜ್ಯ ಕಾರ್ಯದರ್ಶಿಗಳಾದ ವಿನಯ್ ಬಿದರೆ, ಅಂಬಿಕಾ ಹುಲಿನಾಯ್ಕರ್, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್, ಮುಖಂಡರಾದ ಎಂ.ಬಿ. ನಂದೀಶ್, ಎಸ್. ಶಿವಪ್ರಸಾದ್, ಎಸ್.ಪಿ. ಚಿದಾನಂದ್, ವೈ.ಎಚ್. ಹುಚ್ಚಯ್ಯ, ಭೈರಣ್ಣ, ದಿಲೀಪ್‌ಕುಮಾರ್, ಅನಿಲ್‌ಕುಮಾರ್, ಎಲ್.ಸಿ. ನಾಗರಾಜು ಮೊದಲಾದವರು ಭಾಗವಹಿಸಿದ್ದರು.