ಪಾಲಾಕ್ಷ ಬಿ. ತಿಪ್ಪಳ್ಳಿ ಯಲಬುರ್ಗಾ
ಬೇವಿನ ಹಣ್ಣಿನ ಸುಗ್ಗಿ ಆರಂಭವಾಗಿದ್ದು, ಗ್ರಾಮೀಣ ಪ್ರದೇಶದ ರೈತ ಮಹಿಳೆಯರು, ಮಕ್ಕಳು ಬೇವಿನ ಹಣ್ಣು ಆರಿಸುವ ಕಾಯಕದಲ್ಲಿ ತೊಡಗಿರುವುದು ಕಂಡು ಬರುತ್ತಿದೆ.ಗ್ರಾಮೀಣ ಪ್ರದೇಶದ ರೈತರ ಜಮೀನುಗಳ ಬದುಗಳಲ್ಲಿ ಹಾಗೂ ಇತರ ಕಡೆಗಳಲ್ಲಿ ಬೇವಿನ ಮರಗಳಲ್ಲಿ ಬಿಡುವ ಹಣ್ಣುಗಳಿಗೆ ಇತ್ತೀಚಿನ ವರ್ಷಗಳಲ್ಲಿ ಬೇಡಿಕೆ ಹೆಚ್ಚಿದೆ. ಔಷಧೀಯ ಗುಣ ಹೊಂದಿರುವ ಬೇವಿನ ಬೀಜದಿಂದ ಹತ್ತಾರು ಪ್ರಯೋಜನವಿದೆ. ಜತೆಗೆ ಮಹಿಳೆಯರಿಗೆ ಆದಾಯ ದೊರೆಯುತ್ತದೆ.
ಕೃಷಿಯ ಉಪ ಕಸುಬು:ಜಮೀನಿನಲ್ಲಿ ಬಿತ್ತನೆ, ಕಳೆ ತೆಗೆಯುವುದು ಹಾಗೂ ಇನ್ನಿತರ ಕೃಷಿ ಚಟುವಟಿಕೆಯಿಂದ ಬಿಡುವಿದ್ದಾಗ ಮಹಿಳೆಯರು, ಮಕ್ಕಳು ಬೇವಿನ ಬೀಜ ಸಂಗ್ರಹಿಸುತ್ತಾರೆ. ಕೆಲವರಿಗೆ ಇದು ಕೃಷಿಯ ಜತೆಗೆ ಉಪಕಸಬು. ಬೇವಿನ ಬೀಜ ಸಂಗ್ರಹದಿಂದ ಕೆಲವು ಮಹಿಳೆಯರು ಸಾವಿರಾರು ರುಪಾಯಿ ಗಳಿಸುತ್ತಾರೆ.ಜೀವನ ನಿರ್ವಹಣೆಗೆ ಸಹಕಾರಿ:ಬೇವಿನ ಬೀಜಕ್ಕೆ ಇತ್ತೀಚಿನ ವರ್ಷಗಳಲ್ಲಿ ಬೇಡಿಕೆ ಹೆಚ್ಚಿದೆ. ರೈತರ ಜಮೀನು, ರಸ್ತೆ ಬದಿ ಬೆಳೆದಿರುವ ಬೇವಿನ ಮರಗಳಿಂದ ಬೇವಿನಹಣ್ಣು ಆರಿಸಿ, ಸಂಗ್ರಹಿಸಲಾಗುತ್ತದೆ. ಅವುಗಳನ್ನು ಖರೀದಿ ಮಾಡಲು ವರ್ತಕರು ಹಳ್ಳಿಗಳಿಗೆ ಮತ್ತು ಜಮೀನುಗಳಿಗೆ ಆಗಮಿಸುತ್ತಾರೆ. ಒಂದು ಡಬ್ಬಿ ಬೇವಿನ ಬೀಜಕ್ಕೆ ₹೧೩೦ರಿಂದ ₹೧೫೦ರ ವರೆಗೆ ದರ ಇರುತ್ತದೆ. ಬೇವಿನ ಹಣ್ಣು ಸಂಗ್ರಹಿಸಿ ಮಾರಾಟ ಮಾಡಿದ ಹಣದಿಂದ ಜೀವನ ನಿರ್ವಹಣೆಗೆ ದಾರಿಯಾಗಲಿದೆ ಎನ್ನುತ್ತಾರೆ ರೈತ ಮಹಿಳೆಯರು.
ರೋಗ ನಿಯಂತ್ರಣಕ್ಕೆ ರಾಮಬಾಣ:ಬೇವಿನ ಬೀಜ ಹಾಗೂ ಹಿಂಡಿಯಿಂದ ಉಪಯೋಗವಿದೆ. ಸಾವಯವ ಕೃಷಿಯಲ್ಲಿ ಉಪಯೋಗಿಸುವುದರಿಂದ ಮಣ್ಣಿನ ಫಲವತ್ತತೆ ಮತ್ತು ಸಾಕಷ್ಟು ಪೋಷಕಾಂಶ ದೊರೆಯುತ್ತವೆ. ಇದರಲ್ಲಿ ಅಜಾಡಿರೆಕ್ಟಿನ್ ಎನ್ನುವ ವಿಷ ಅಂಶ ಇರುತ್ತದೆ. ನಾನಾ ಬೆಳೆ ತಿನ್ನುವ ಕೀಟ, ರೋಗಗಳ ನಿಯಂತ್ರಣಕ್ಕೆ ರಾಮಬಾಣವಾಗಿದೆ ಎನ್ನುತ್ತಾರೆ ಗಂಗಾವತಿ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ. ಪಿ.ಆರ್. ಬದರಿಪ್ರಸಾದ್.
ಬೇವಿನ ಬೀಜದ ಎಣ್ಣೆ ಬೆಳೆಗಳಿಗೆ ಸಿಂಪಡಣೆ ಮಾಡುವುದರಿಂದ ರೋಗ ಹತೋಟಿಯಲ್ಲಿಡಬಹುದು. ಇದನ್ನು ನಾನಾ ಬೆಳೆಗಳಿಗೆ ಸಾವಯವ ಗೊಬ್ಬರದ ರೂಪದಲ್ಲಿ ಬಳಕೆ ಮಾಡಬಹುದು. ಬೇವಿನ ಹಿಂಡಿ ತಯಾರಿಸಿ ಹೊಲಗಳಲ್ಲಿ ಹಾಕುವುದರಿಂದ ಬೆಳೆಗಳಲ್ಲಿನ ರೋಗಬಾಧೆ ತಡೆಯಬಹುದು ಎಂದು ಯಲಬುರ್ಗಾ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ತಿಳಿಸಿದ್ದಾರೆ.
ಮುಂಗಾರು ಮಳೆಯಾಗದೆ ಬಿತ್ತಿದ ಬೆಳೆಗಳು ಒಣಗುತ್ತಿದೆ. ಈಗ ಕೃಷಿ ಚಟುವಟಿಕೆ ಸ್ಥಗಿತಗೊಂಡಿವೆ. ಹೀಗಾಗಿ ಜೀವನ ನಿರ್ವಹಣೆಗೆ ಬೇವಿನ ಹಣ್ಣು ಸಂಗ್ರಹಿಸುತ್ತಿದ್ದೇವೆ. ಹಣ್ಣು ಮಾರಾಟ ಮಾಡಿದ ಹಣ ಕುಟುಂಬ ನಿರ್ವಹಣೆಗೆ ಸಹಕಾರಿಯಾಗುತ್ತದೆ ಎಂದು ಬೇವಿನ ಹಣ್ಣು ಸಂಗ್ರಹಿಸುವ ಮಹಿಳೆಯರು ತಿಳಿಸಿದ್ದಾರೆ.