ಶ್ರೀರಾಮ: ಪ್ರಧಾನಿಗೆ ಅಭಿನಂದನಾ ಪತ್ರ ಅಭಿಯಾನ

KannadaprabhaNewsNetwork | Published : Feb 9, 2024 1:46 AM

ಸಾರಾಂಶ

ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ‍ಪ್ರಾಣ ಪ್ರತಿಷ್ಠಾಪನೆಯಿಂದ ದೇಶದ ಜನರ ಧಾರ್ಮಿಕ ಭಾವನೆ ಹಾಗೂ ಹಿಂದುತ್ವದ ಭಾವನೆಯು ಇಮ್ಮಡಿ

ಹುಬ್ಬಳ್ಳಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾರ್ವಜನಿಕರಿಂದ ಅಭಿನಂದನಾ ಪತ್ರ ಅಭಿಯಾನ ಗುರುವಾರ ಇಲ್ಲಿ ಶುರುವಾಗಿದೆ.

ನಗರದ ಮೂರುಸಾವಿರ ಮಠದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿಯಾನಕ್ಕೆ ಚಾಲನೆ ನೀಡಿದ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು, ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡುವ ಮೂಲಕ ಕೋಟ್ಯಂತರ ಹಿಂದೂಗಳ ಕನಸು ನನಸಾಗಿಸಿದ್ದಾರೆ ಎಂದರು.

ದೇಶದ ಕೋಟ್ಯಂತರ ಜನ ಆಸ್ತಿಕರು ಹಲವು ವರ್ಷಗಳಿಂದ ಕಾಯುತ್ತಿದ್ದ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಅಯೋಧ್ಯೆಯ ರಾಮ ಮಂದಿರದಲ್ಲಿ ಯಜಮಾನನ ಸ್ಥಾನದಲ್ಲಿ ನಿಂತು ಧಾರ್ಮಿಕ ಕಾರ್ಯ ನೆರವೇರಿಸಿದ್ದು ಶ್ಲಾಘನೀಯ ಎಂದರು.

ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ‍ಪ್ರಾಣ ಪ್ರತಿಷ್ಠಾಪನೆಯಿಂದ ದೇಶದ ಜನರ ಧಾರ್ಮಿಕ ಭಾವನೆ ಹಾಗೂ ಹಿಂದುತ್ವದ ಭಾವನೆಯು ಇಮ್ಮಡಿಯಾಗಿದೆ. ಇದು ನಮ್ಮ ಪೂರ್ವಜರು, ಕರಸೇವಕರು ಸೇರಿದಂತೆ ಕೋಟ್ಯಂತರ ಜನ ಹಿಂದುಗಳ ಕನಸಾಗಿತ್ತು. ಇದನ್ನು ಸ್ವತಃ ಪ್ರಧಾನಿಯವರೇ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡುವ ಮೂಲಕ ನೆರವೇರಿಸಿದ್ದು ಸಂತಸದ ಸಂಗತಿ ಎಂದರು.

ಮಹಾನಗರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ‌ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಭಾರತ ಹಿಂದುಗಳ ರಾಷ್ಟ್ರ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ, ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯವು ಇಡೀ ದೇಶದ ಜನರ ಹೆಮ್ಮೆಯ ವಿಷಯ. ಈ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ದೇಶಾದ್ಯಂತ ಭಕ್ತರು ದೇಣಿಗೆ ನೀಡುವ ಮೂಲಕ ಯಶಸ್ವಿಗೊಳಿಸುವಲ್ಲಿ ಸಹಕರಿಸಿದ್ದಾರೆ. ಇಂತಹ ಕಾರ್ಯಕ್ಕೆ ಕೈಜೋಡಿಸಿದ ಎಲ್ಲ ಭಕ್ತರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಡಾ.ಕ್ರಾಂತಿ ಕಿರಣ, ಶಿವಕುಮಾರ ಮೆಣಸಿನಕಾಯಿ, ದತ್ತಮೂರ್ತಿ ಕುಲಕರ್ಣಿ, ಪ್ರಭು ನವಲಗುಂದಮಠ, ರಾಜು, ಶಿವಾನಂದ ಭಟ್‌, ಉಮೇಶ ದುಶಿ, ವೀರೇಶ ಸಂಗಳದ, ಸವಿತಾ, ಮಾರುತಿ ಹಾಗೂ ಬಿಜೆಜಿ ಜಿಲ್ಲಾ ಘಟಕದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

50 ಸಾವಿರ ಪತ್ರ: ಒಂದೇ ದಿನ 200ಕ್ಕೂ ಹೆಚ್ಚು ಜನರು ತಾವೇ ಸ್ವತಃ ಪೋಸ್ಟ್‌ಕಾರ್ಡ್‌ನಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡಿರುವುದಕ್ಕೆ ಅಭಿನಂದನೆ ಎಂದು ಬರೆದು ಪ್ರಧಾನ ಮಂತ್ರಿಗಳಿಗೆ ಕಳುಹಿಸಿದರು.

ಈ ಅಭಿಯಾನವು ಫೆ. 15ರ ವರೆಗೆ ನಡೆಯಲಿದ್ದು, 50 ಸಾವಿರಕ್ಕೂ ಅಧಿಕ ಅಭಿನಂದನಾ ಪತ್ರಗಳನ್ನು ಪ್ರಧಾನಿ ಅವರಿಗೆ ಕಳುಹಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಭಿಯಾನದಲ್ಲಿ ಭಾಗವಹಿಸುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮನವಿ ಮಾಡಿದರು.

Share this article