ಬೆಂಗಳೂರು : ರಾಜ್ಯದ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಬಹುನಿರೀಕ್ಷಿತ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆ, ರಾಜಧಾನಿಯಲ್ಲಿ ಹೊಸ ಮೆಟ್ರೋ ಮಾರ್ಗಕ್ಕೆ ಶಂಕುಸ್ಥಾಪನೆ, ವಂದೇ ಭಾರತ್ ರೈಲುಗಳಿಗೆ ಚಾಲನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ.
ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬೆಳಗ್ಗೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಪ್ರಧಾನಿ ಮೋದಿ ಅವರು ನಂತರ, ಹೆಲಿಕಾಪ್ಟರ್ ಮುಖಾಂತರ ಮೇಖ್ರಿ ವೃತ್ತದ ಬಳಿಯ ಮಿಲಿಟರಿ ಬೇಸ್‌ಗೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್‌ಆರ್) ರೈಲು ನಿಲ್ದಾಣಕ್ಕೆ ಬೆಳಗ್ಗೆ 11 ಗಂಟೆಗೆ ಆಗಮಿಸಿ ಬೆಂಗಳೂರು-ಬೆಳಗಾವಿ ಸೇರಿದಂತೆ ದೇಶದಲ್ಲಿ ಮೂರು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ.
ನಂತರ ಮೋದಿ ಅವರು ರಸ್ತೆ ಮಾರ್ಗವಾಗಿ ಆರ್.ವಿ.ರಸ್ತೆಯ ಮೆಟ್ರೋ ನಿಲ್ದಾಣ ತಲುಪಿ, ಆರ್.ವಿ.ರಸ್ತೆಯ ರಾಗೀಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಹಳದಿ ಮಾರ್ಗಕ್ಕೆ ಬೆಳಗ್ಗೆ 11.45ಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ತರುವಾಯ ಆರ್.ವಿ.ರಸ್ತೆಯ(ರಾಗೀಗುಡ್ಡ) ಮೆಟ್ರೋ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ 12.55ಕ್ಕೆ ಪ್ರಯಾಣಿಸಲಿದ್ದಾರೆ.
ಬಳಿಕ ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಕೇಂದ್ರದ ಸಭಾಂಗಣಕ್ಕೆ 1 ಗಂಟೆಗೆ ಆಗಮಿಸಿ ಮೆಟ್ರೋ 3ನೇ ಹಂತದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಆ ತರುವಾಯ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಮಧ್ಯಾಹ್ನ 2 ಗಂಟೆಗೆ ಹೆಲಿಕಾಪ್ಟರ್‌ನಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ.
5,056.99 ಕೋಟಿ ರು. ವೆಚ್ಚದ
ಹಳದಿ ಮಾರ್ಗದ ಯೋಜನೆ
ಇದೀಗ ಮೋದಿ ಉದ್ಘಾಟಿಸುತ್ತಿರುವ 19.15 ಕಿ.ಮೀ.ಉದ್ದದ ನಮ್ಮ ಮೆಟ್ರೋದ ಹಳದಿ ಮಾರ್ಗವು ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವೆ ಸಂಚರಿಸಲಿದೆ. 16 ನಿಲ್ದಾಣಗಳನ್ನು ಹೊಂದಿರುವ ಈ ರೈಲು ಮಾರ್ಗಕ್ಕೆ ಒಟ್ಟು 5,056.99 ಕೋಟಿ ವೆಚ್ಚ ಮಾಡಲಾಗಿದೆ. ಇದೇ ವೇಳೆ ಮೋದಿ ಅವರು ಮೆಟ್ರೋ 3ನೇ ಹಂತದ ಯೋಜನೆಗೂ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಇದು 15,611 ಕೋಟಿ ರು. ವೆಚ್ಚದ ಯೋಜನೆಯಾಗಿದ್ದು, ಎರಡು ಕಾರಿಡಾರ್ ಒಳಗೊಂಡಂತೆ 44.65 ಕಿ.ಮೀ. ಉದ್ದವಿರಲಿದೆ. ಈ ಮಾರ್ಗದ ಕಾಮಗಾರಿ 2028ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ರಾಜ್ಯದ 11ನೇ ವಂದೇ ಭಾರತ್ ರೈಲಿಗೆ ಚಾಲನೆ
ನಗರದ ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ರಾಜ್ಯದ 11ನೇ ವಂದೇ ಭಾರತ್ ರೈಲು ಬೆಂಗಳೂರು–ಬೆಳಗಾವಿ ವಂದೇ ಭಾರತ್‌ಗೆ ಚಾಲನೆ ಸಿಗುತ್ತಿದೆ.
ಬೆಂಗಳೂರು–ಬೆಳಗಾವಿ ವಂದೇ ಭಾರತ್ ಕೇವಲ 8.5 ಗಂಟೆಗಳಲ್ಲಿ 611 ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ. ಇದು ಬೆಂಗಳೂರು ಬೆಳಗಾವಿ ನಗರಗಳ ನಡುವಿನ ವೇಗದ ರೈಲು ಸೇವೆಯಾಗಿದ್ದು, ಈಗಿನ ಹಾಲಿ ರೈಲು ಸೇವೆಗಳಿಗಿಂತ ಬೆಂಗಳೂರಿನಿಂದ ಬೆಳಗಾವಿಗೆ ಸುಮಾರು 1 ಗಂಟೆ 20 ನಿಮಿಷ ಮತ್ತು ಮತ್ತು ಬೆಳಗಾವಿಯಿಂದ ಬೆಂಗಳೂರಿಗೆ ಸುಮಾರು 1 ಗಂಟೆ 40 ನಿಮಿಷ ತ್ವರಿತವಾಗಿ ಸಂಪರ್ಕ ಸಾಧ್ಯವಾಗಿಸುತ್ತಿದೆ. ಧಾರವಾಡ, ಹುಬ್ಬಳ್ಳಿ, ಕೃಷಿ ಆಧಾರಿತ ಹಾವೇರಿ, ಜವಳಿ ಮತ್ತು ಕೃಷಿ ಕ್ಷೇತ್ರದಲ್ಲಿ ದಾವಣಗೆರೆ ಹಾಗೂ ತುಮಕೂರು ಸೇರಿ ಹಲವು ಪ್ರಮುಖ ನಗರಗಳನ್ನು ಈ ರೈಲು ಸಂಪರ್ಕಿಸುತ್ತದೆ. ಉದ್ಘಾಟನೆ ಬಳಿಕ ವಿಶೇಷ ರೈಲು (ಸಂಖ್ಯೆ 06575) ಬೆಳಗ್ಗೆ 11:15ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಹೊರಟು ರಾತ್ರಿ 8 ಗಂಟೆಗೆ ಬೆಳಗಾವಿ ತಲುಪಲಿದೆ. ಯಶವಂತಪುರ, ತುಮಕೂರು, ದಾವಣಗೆರೆ, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ನಿಲುಗಡೆ ಆಗಲಿದೆ.
3 ವಂದೇ ಭಾರತ್‌ಗೆ ಚಾಲನೆ: ಬೆಂಗಳೂರು-ಬೆಳಗಾವಿ ವಂದೇ ಭಾರತ್ ಜತೆಗೆ ಶ್ರೀ ಮಾತಾ ವೈಷ್ಣೋ ದೇವಿ ಕಾಟ್ರಾ-ಅಮೃತಸರ ಮತ್ತು ಅಜ್ನಿ (ನಾಗ್ಪುರ)-ಪುಣೆ ವಂದೇ ಭಾರತ್ ರೈಲುಗಳಿಗೆ ವರ್ಚುವಲ್ ಮೂಲಕ ಮೋದಿ ಇದೇ ವೇಳೆ ಚಾಲನೆ ನೀಡಲಿದ್ದಾರೆ.
ಎಕ್ಸ್‌ನಲ್ಲಿ ಕನ್ನಡದಲ್ಲಿ ಪೋಸ್ಟ್ ಮಾಡಿದ ಮೋದಿ
ಪ್ರಧಾನಿ ಮೋದಿ ಅವರು ತಾವು ಬೆಂಗಳೂರಿಗೆ ಆಗಮಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕನ್ನಡದಲ್ಲಿ ಪೋಸ್ಟ್ ಹಾಕಿದ್ದಾರೆ. ಆ.10ರಂದು ಬೆಂಗಳೂರಿನ ಜನರೊಂದಿಗಿರಲು ಎದುರು ನೋಡುತ್ತಿದ್ದೇನೆ. ಸಂಪರ್ಕವನ್ನು ಸುಧಾರಿಸುವ ಮೂರು ವಂದೇ ಭಾರತ ಎಕ್ಸ್‌ಪ್ರೆಸ್ ರೈಲುಗಳಿಗೆ ಕೆಎಸ್ಆರ್ ರೈಲು ನಿಲ್ದಾಣದಿಂದ ಹಸಿರು ನಿಶಾನೆ ತೋರಿಸಲಾಗುವುದು. ಬೆಂಗಳೂರು ನಗರದ ಮೂಲಸೌಕರ್ಯ ಹೆಚ್ಚಿಸಲು, ಬೆಂಗಳೂರು ಮೆಟ್ರೋ ಹಳದಿ ಮಾರ್ಗನ್ನು ಉದ್ಘಾಟಿಸಲಾಗುವುದು. ಬೆಂಗಳೂರು ಮೆಟ್ರೋದ ಮೂರನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಬಳಿಕ ನಗರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಾಗುವುದು ಎಂದು ಮೋದಿ ಟ್ವಿಟ್ ಮಾಡಿದ್ದಾರೆ.