ಕನ್ನಡಪ್ರಭ ವಾರ್ತೆ ಅಥಣಿ
ಕೈಯಲ್ಲಿ ಬಿಜೆಪಿ ಧ್ವಜ ಮತ್ತು ಕೇಸರಿ ಧ್ವಜಗಳನ್ನ ಹಿಡಿದುಕೊಂಡು ಆಗಮಿಸಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಲ್ ಮತ್ತು ಕೇಸರಿ ಬಣ್ಣವನ್ನು ಪರಸ್ಪರ ಹಚ್ಚಿಕೊಳ್ಳುವ ಮೂಲಕ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಡಾಲ್ಬಿ ಸೌಂಡ್‌ದಲ್ಲಿ ಬಿಜೆಪಿ ಹಾಡುಗಳಿಗೆ ನೂರಾರು ಯುವಕರು ಕೈಯಲ್ಲಿ ನರೇಂದ್ರ ಮೋದಿ ಅವರ ಭಾವಚಿತ್ರಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕಿ ಕುಣಿಯುತ್ತಿದ್ದ ದೃಶ್ಯ ಕಂಡು ಬಂತು. ಈ ಭವ್ಯ ಮೆರವಣಿಗೆಯಲ್ಲಿ ಜೈ ಶ್ರೀರಾಮ ಹಾಗೂ ನರೇಂದ್ರ ಮೋದಿ ಪರವಾದ ಘೋಷಣೆಗಳು, ಗಲ್ಲಿ ಗಲ್ಲಿಯಲ್ಲಿ ಯಾರೇ ಇದ್ದರೂ ದಿಲ್ಲಿಯಲ್ಲಿ ನರೇಂದ್ರ ಮೋದಿನೇ ಆಡಳಿತ ಮಾಡಬೇಕು ಎನ್ನುವ ಘೋಷಣೆಗಳು ಕೇಳಿ ಬಂದವು.ಛತ್ರಪತಿ ಶಿವಾಜಿ ವೃತ್ತದಿಂದ ಆರಂಭವಾದ ಮೆರವಣಿಗೆ, ವಿಶ್ವಗುರು ಬಸವೇಶ್ವರ ವೃತ್ತ, ಮಹತಪಸ್ವಿ ಮುರುಘೇಂದ್ರ ಶಿವಯೋಗಿಗಳ ವೃತ್ತ, ವೀರರಾಣಿ ಚೆನ್ನಮ್ಮ ವೃತ್ತ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಮುಖ್ಯ ಬೀದಿಯಲ್ಲಿ ಹಾಯ್ದು ಬುಧವಾರ ಪೇಟ್, ಹನುಮಾನ್ ಮಂದಿರ ಅಗಸಿ ಮೂಲಕ ಮತ್ತೆ ಬಸವೇಶ್ವರ ವೃತ್ತದಲ್ಲಿ ಸಮಾರೋಪಗೊಂಡಿತು.ಅಥಣಿ ಸಿಪಿಐ ರವೀಂದ್ರ ನಾಯ್ಕೋಡಿ ಹಾಗೂ ಪಿಎಸೈ ಶಿವಾನಂದ ಕಾರಜೋಳ ಹಾಗೂ ಅವರ ಸಿಬ್ಬಂದಿ ಟ್ರಾಫಿಕ್ ಸಮಸ್ಯೆ ನಿಯಂತ್ರಣದ ಜೊತೆಗೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಮೆರವಣಿಗೆಯಲ್ಲಿ ಬಿಜೆಪಿ ಮುಖಂಡರಾದ ಉಮೇಶರಾವ ಬಂಟೋಡಕರ, ಪ್ರಭಾಕರ ಚವ್ಹಾಣ, ಅಜಿತ ಪವಾರ, ಸಂಪತ ಕುಮಾರ್ ಶೆಟ್ಟಿ, ಮುರುಗೇಶ ಕುಮಟಳ್ಳಿ, ಸಿದ್ದು ಮಾಳಿ, ಪುಟ್ಟು ಹಿರೇಮಠ, ಗಿರೀಶ ಬುಠಾಳಿ, ವಿನಯ್ ಗೌಡ ಪಾಟೀಲ ಸೇರಿದಂತೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.